ಕನ್ನಡಪ್ರಭ ವಾರ್ತೆ ಸಕಲೇಶಪುರ
ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಹೆಸರಾಗಲು ಕೆಂಪೇಗೌಡರು ಕಾರಣ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಒಕ್ಕಲಿಗರ ಸಮಾಜ ಸಂಯುಕ್ತವಾಗಿ ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ೫೧೫ ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ನಾಡಿನ ಪ್ರತಿಯೊಬ್ಬ ಕುಟುಂಬದ ಒಬ್ಬಲ್ಲಾ ಒಬ್ಬ ವ್ಯಕ್ತಿಯು ಬೆಂಗಳೂರಿನಲ್ಲಿ ನೆಲಸಿ, ದುಡಿಮೆ ಮಾಡುವ ಮೂಲಕ ಕುಟುಂಬಗಳನ್ನು ನಿರ್ವಹಿಸಲು ಕೆಂಪೇಗೌಡರೇ ಕಾರಣ. ಆದ್ದರಿಂದ, ಪ್ರತಿಯೊಂದು ಕುಟುಂಬವೂ ಕೆಂಪೇಗೌಡರ ಭಾವಚಿತ್ರವನ್ನು ಮನೆಯಲ್ಲಿಟ್ಟು ಪೂಜಿಸಬೇಕು. ನದಿಯಲ್ಲಿದ ಊರಿನಲ್ಲಿ ಕೊಟ್ಯಾಂತರ ಜನರಿಗೆ ನೀರು ಒದಗಿಸಿರುವುದು ನಿಜಕ್ಕೂ ಸೋಜಿಗ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಡಾ.ಎಂ.ಕೆ ಶೃತಿ, ಸಾಕಷ್ಟು ತ್ಯಾಗ, ಬಲಿದಾನದ ಮೂಲಕ ಜ್ಯೋತಿಷಿಗಳು, ಪಂಡಿತರ ಸಲಹೆ ಪಡೆದು ಆ ಕಾಲದಲ್ಲೇ ವಾಸ್ತುಪ್ರಕಾರ ಎಲ್ಲ ಸಮೂದಾಯಕ್ಕೂ ನೆಲೆ ಕಲ್ಪಿಸಿಕೊಡುವ ನಗರವನ್ನಾಗಿ ಬೆಂಗಳೂರನ್ನು ನಿರ್ಮಿಸಿದ ಕೆಂಪೆಗೌಡರು, ಪ್ರಪಂಚದ ಅಧ್ಬುತ ವ್ಯಕ್ತಿಗಳಲ್ಲಿ ಒಬ್ಬರು. ನಗರಗಳನ್ನು ವೈಜ್ಞಾನಿಕವಾಗಿ ನಿರ್ಮಿಸುವ ಕಲ್ಪನೆಯೇ ಇಲ್ಲದ ಕಾಲದಲ್ಲಿ ಬೆಂಗಳೂರನ್ನು ಅತ್ಯಂತ ಅದ್ಭುತವಾಗಿ ಕಟ್ಟುವ ಮೂಲಕ ಇಡೀ ಪ್ರಪಂಚ ನಮ್ಮ ದೇಶದೆಡೆ ತಿರುಗಿ ನೋಡುವಂತೆ ಮಾಡಿದ್ದಾರೆ ಎಂದು.ತಾಲೂಕು ಒಕ್ಕಲಿಗರ ಸಮಾಜದ ಅಧ್ಯಕ್ಷ ಎಚ್.ಎಂ ವಿಶ್ವನಾಥ್ ಮಾತನಾಡಿ, ಕೆಂಪೇಗೌಡರು ಯಾವುದೇ ಜಾತಿಗೂ ಸೇರಿದವರಲ್ಲ. ಕೆಂಪೇಗೌಡರ ದೂರದೃಷ್ಟಿಯ ಫಲವಾಗಿ ಇಂದು ದೇಶದ ಹಾಗೂ ಜಗತ್ತಿನ ಸಾಕಷ್ಟು ಜನರು ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಲು ಕಾರಣವಾಗಿದೆ. ಇಂದಿನ ರಾಜಕೀಯ ಮುತ್ಸದ್ಧಿಗಳಿಗೆ ಕೆಂಪೇಗೌಡ ಹಾಗೂ ಬಸವೇಶ್ವರರು ಆದರ್ಶವಾಗಬೇಕು ಎಂದರು.
ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ಕೆಂಪೇಗೌಡರು ನೀಡಿದ ಕೊಡುಗೆಗಳು ಆದರ್ಶನೀಯವಾಗಿವೆ. ಅವರ ಆಡಳಿತ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ. ಇಂದು ಬೆಂಗಳೂರು ನಗರ ಪ್ರಪಂಚದಲ್ಲೇ ಹೆಸರುಮಾಡಲು ಕೆಂಪೇಗೌಡರೇ ಕಾರಣ ಎಂದರು.ವೇದಿಕೆಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಮೋಹನ್ ಕುಮಾರ್, ತಹಸೀಲ್ದಾರ್ ಮೇಘನಾ, ಡಿವೈಎಸ್‌ಪಿ ಪ್ರಮೋದ್ ಕುಮಾರ್ ಜೈನ್. ತಾಪಂ ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪ, ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ದಿವಾನ್, ಕಾಂಗ್ರೆಸ್ ಮುಖಂಡರಾದ ಮುರುಳಿಮೋಹನ್, ಬಾಚಹಳ್ಳಿ ಪ್ರತಾಪ್‌ಗೌಡ ಮುಂತಾದವರಿದ್ದರು.