ತಾಲೂಕು ಕಚೇರಿಯಲ್ಲಿ ಕೆಂಪೇಗೌಡ ಜಯಂತಿಯಲ್ಲಿ ಉಪನ್ಯಾಸ
1537 ರಲ್ಲಿ ನಾಡಪ್ರಭು ಕೆಂಪೇಗೌಡ ತನ್ನ ಆಳ್ವಿಕೆ ಪ್ರಾರಂಭವಾದ ನಂತರ ಬೆಂಗಳೂರಿನಲ್ಲಿ ಶಿಸ್ತುಬದ್ಧವಾಗಿ 56 ಪೇಟೆ ಗಳನ್ನು ನಿರ್ಮಿಸಿ 347 ಕೆರೆಗಳನ್ನು ಕಟ್ಟಿಸಿದ್ದರು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಪಿ.ಕೆ. ಬಸವರಾಜಪ್ಪ ತಿಳಿಸಿದರು.
ಗುರುವಾರ ತಾಲೂಕು ಆಡಳಿತ ಸೌಧದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದರು. ಆಗ ಕುಡಿಯುವ ನೀರಿಗೆ ಯಾವುದೇ ನದಿ ಮೂಲ ಇಲ್ಲದೆ ಇರುವುದರಿಂದ ಕೆಂಪೇಗೌಡರು ಕೆರೆಗಳಿಗೆ ಆದ್ಯತೆ ನೀಡಿದ್ದರು. ಕುಡಿಯುವ ನೀರಿಗೆ ಕಲ್ಯಾಣಿ ನಿರ್ಮಿಸಿದ್ದರು. ರಸ್ತೆ ಬದಿ ಯಲ್ಲಿ ಸಾಲು ಮರಗಳನ್ನು ನೆಡಲಾಗಿತ್ತು. ಇದರಲ್ಲಿ ಹೆಚ್ಚಾಗಿ ಹೊಂಗೆ ಮರಗಳೇ ಇದ್ದವು. ಪ್ರಸ್ತುತ ಬೆಂಗಳೂರು ನಗರ ವಿಶ್ವದ ಗಮನ ಸೆಳೆಯುಂತಾಗಿದ್ದರೆ ಅದಕ್ಕೆ ಕೆಂಪೇಗೌಡರೇ ಕಾರಣರಾಗಿದ್ದಾರೆ. ಆದರೆ, ಕೆಂಪೇಗೌಡರು ಕುಣಿಗಲ್ ನಿಂದ ಮಾಗಡಿಗೆ ಹೋಗುವ ಮಾರ್ಗ ಮದ್ಯದಲ್ಲಿ ಅವರ ಹತ್ಯೆಯಾಯಿತು. 1565 ರಲ್ಲಿ ಕೆಂಪೇಗೌಡರ ಆಳ್ವಿಕೆ ಕೊನೆ ಗೊಂಡಿತು ಎಂದರು.ಸಮಾರಂಭ ಉದ್ಘಾಟಿಸಿದ ತಾಲೂಕು ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶ್ಯಾಮಲ ಸತೀಶ್ ಮಾತನಾಡಿ, 517 ವರ್ಷಗಳ ಹಿಂದೆ ಕೆಂಪೇಗೌಡ ದೂರದೃಷ್ಠಿ ಫಲವಾಗಿ ಇಂದು ಬೆಂಗಳೂರು ನಗರ ಸುಂದರ ಉದ್ಯಾನ ನಗರವಾಗಿ ಬೆಳೆದಿದೆ. ಕೆಂಪೇಗೌಡರ ಆಡಳಿತ ವೈಖರಿ ಇಂದಿನ ಪೀಳಿಗೆಯವರಿಗೆ ಮಾದರಿಯಾಗಿದೆ. ಅವರನ್ನು ನೆನಪಿಸಿ ಕೊಳ್ಳು ವುದು ಎಲ್ಲರ ಕರ್ತವ್ಯ ಎಂದರು.
ಅತಿಥಿಯಾಗಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಜೀವನದಲ್ಲಿ ದೊಡ್ಡ ಸಾಧನೆ ಮಾಡಿದವರ ಜಯಂತಿಗಳನ್ನು ಆಚರಿಸಲಾಗುತ್ತಿದ್ದು ಅಂತವರ ಆದರ್ಶ, ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಅತಿಥಿಗಳಾಗಿ ತಹಸೀಲ್ದಾರ್ ತನುಜ ಸವದತ್ತಿ, ಕೊಪ್ಪ ಎಪಿಎಂಸಿ ನಿರ್ದೇಶಕ ಎಚ್.ಎಂ.ಶಿವಣ್ಣ, ತಾಲೂಕು ಒಕ್ಕಲಿಗರ ಸಂಘದ ಖಜಾಂಚಿ ಕಟಗಳಲೆ ಲೋಕೇಶ್, ವಾಲ್ಮೀಕಿ ಸಂಘದ ಶೃಂಗೇರಿ ಕ್ಷೇತ್ರ ಅಧ್ಯಕ್ಷ ವಾಲ್ಮೀಕಿ ಶ್ರೀನಿವಾಸ್, ದಲಿತ ಸಂಘರ್ಷ ಸಮಿತಿಯ ಮುಖಂಡ ಡಿ.ರಾಮು,ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ರಶ್ಮಿ ದಯಾನಂದ್,ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಎಂ.ಪಿ.ಮನು ಇದ್ದರು.ಶಾಸಕ ಟಿ.ಡಿ.ರಾಜೇಗೌಡ ಕಳಿಸಿದ್ದ ಸಂದೇಶವನ್ನು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಮಂಜುನಾಥ್ ವಾಚಿಸಿದರು.ಮುಖ್ಯ ಅತಿಥಿಗಳು ಕೆಂಪೇಗೌಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಇದೇ ಸಂದರ್ಭದಲ್ಲಿ ಕೆಂಪೇಗೌಡ ಜಯಂತಿ ಅಂಗವಾಗಿ ಶಿಕ್ಷಣ ಇಲಾಖೆ ಶಾಲೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಂಗೋಲಿ, ಚಿತ್ರಕಲೆ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ನಿಷ್ಮಾಜೈನ್ ಕಾರ್ಯಕ್ರಮ ನಿರೂಪಿಸಿದರು.