ಧಾರವಾಡ: ಕನ್ನಡ ಸಂಶೋಧನಾ ಕ್ಷೇತ್ರಕ್ಕೆ ವಿಶಿಷ್ಟ ಮಾರ್ಗದರ್ಶನ ನೀಡಿದ ಡಾ. ಎಂ.ಎಂ. ಕಲಬುರ್ಗಿ ಅವರ ಸಂಶೋಧನಾ ದೃಷ್ಟಿ, ಕನ್ನಡಪರ ಚಿಂತನೆ ಹಾಗೂ ಜ್ಞಾನದ ಕಾಯಕ ಮುಂದಿನ ಪೀಳಿಗೆಗೆ ಸದಾ ದಾರಿದೀಪ ಎಂದು ಕೊಡಗು ವಿವಿ ಕುಲಪತಿ ಪ್ರೊ. ಅಶೋಕ ಆಲೂರ ಹೇಳಿದರು.
ಹಸ್ತಪ್ರತಿಗಳು, ಶಾಸನಗಳು ಹಾಗೂ ಕನ್ನಡದ ಜೀವಂತ ಪರಂಪರೆಗಳನ್ನು ಜನರಿಗೆ ಪರಿಚಯಿಸುವ ಮೂಲಕ ಜ್ಞಾನ ಪ್ರಸಾರದ ಕಾರ್ಯಕ್ಕೆ ಅವರು ಮಹತ್ವ ನೀಡಿದರು. ಕಲಬುರ್ಗಿ ಅವರು ಬಸವಣ್ಣ ಮತ್ತು ಕನ್ನಡವನ್ನು ತಮ್ಮ ಬದುಕಿನ ಪ್ರಮುಖ ಆಶಯಗಳನ್ನಾಗಿ ಮಾಡಿಕೊಂಡಿದ್ದರು. ಕನ್ನಡದ ಸಂಶೋಧನೆ ಮತ್ತು ವಚನ ಸಾಹಿತ್ಯದ ಅಧ್ಯಯನಕ್ಕೆ ಅವರು ನೀಡಿದ ಕೊಡುಗೆ ಅಪಾರ. ಅವರ ಕೃತಿಗಳು ಹಾಗೂ ಸಂಶೋಧನಾ ಚಿಂತನೆಗಳು ಇಂದಿಗೂ ಸಂಶೋಧಕರಿಗೆ ಮಾರ್ಗದರ್ಶನ ನೀಡುತ್ತಿವೆ ಎಂದರು.
ಹಿರಿಯ ವಿದ್ವಾಂಸ ಡಾ. ಶಾಂತಿನಾಥ ದಿಬ್ಬದ ಮಾತನಾಡಿ, ಪಂಪ ಭಾರತದ ಸಾಂಸ್ಕೃತಿಕ ಅಧ್ಯಯನ ವಿಷಯವನ್ನು ಪಿಎಚ್‌ಡಿ ಸಂಶೋಧನೆಗೆ ನೀಡಿದವರು ಕಲಬುರ್ಗಿಯವರೇ ಆಗಿದ್ದು, ಒಂದು ನಿರ್ದಿಷ್ಟ ಸಂಶೋಧನಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಆಳವಾಗಿ ಅಧ್ಯಯನ ಮಾಡಬೇಕು ಎಂಬ ಅವರ ಬೋಧನೆ ನನ್ನನ್ನು ಹಳಗನ್ನಡ ಅಧ್ಯಯನಕ್ಕೆ ಕೊಂಡೊಯ್ಯಿತು ಎಂದರು.ಸಂಶೋಧನೆಯಲ್ಲಿ ದೊರೆಯುವ ಸತ್ಯ ಶಾಶ್ವತವಾಗಿರುವುದಿಲ್ಲ; ಹೊಸ ಆಧಾರಗಳು ದೊರೆತಂತೆ ಸಂಶೋಧನಾ ಸತ್ಯಗಳು ಬದಲಾಗಬಹುದು. ಕವಿರಾಜಮಾರ್ಗದ ಕರ್ತೃ, ಕನ್ನಡ ಭಾಷೆಯ ಮೂಲ ಹಾಗೂ ವಡ್ಡಾರಾಧನೆಯಂತಹ ಹಲವು ವಿಚಾರಗಳ ಕುರಿತು ಹೊಸ ಆಧಾರಗಳ ಆಧಾರದ ಮೇಲೆ ಬಂದ ಅಭಿಪ್ರಾಯಗಳನ್ನು ಸ್ವೀಕರಿಸುವ ಮನೋಭಾವ ಸಂಶೋಧಕರಲ್ಲಿ ಇರಬೇಕು ಎಂದರು.
ಪ್ರತಿಷ್ಠಾನ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಸದಸ್ಯರಾದ ಹನುಮಾಕ್ಷಿ ಗೋಗಿ ಮಾತನಾಡಿದರು. ಉಪನ್ಯಾಸಕ ಡಾ. ಈರಣ್ಣ ಇಂಜಗನೇರಿ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನ ಸದಸ್ಯ ಪ್ರೊ. ಚಂದ್ರಶೇಖರ ವಸ್ತ್ರದ ವಂದಿಸಿದರು. ಉಮಾದೇವಿ ಎಂ. ಕಲಬುರ್ಗಿ ಇದ್ದರು.