ಕನ್ನಡಪ್ರಭ ವಾರ್ತೆ ಕನಕಗಿರಿ
೩೭೧ಜೆನ ಕೆಕೆಆರ್‌ಡಿಬಿ ಅನುದಾನದಡಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿ ಕೆಲಸ ಮಾಡುತ್ತಿದೆ ಎಂದು ತಹಸೀಲ್ದಾರ ವಿಶ್ವನಾಥ ಮುರುಡಿ ಹೇಳಿದರು.ಪಟ್ಟಣದ ಸರ್ಕಾರಿ ಪಪೂ ಕಾಲೇಜಿನ ಮೈದಾನದಲ್ಲಿ ಮಂಗಳವಾರ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ೭೭ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ಶಾಲಾ, ಕಾಲೇಜು ಅಭಿವೃದ್ಧಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಕಂಪ್ಯೂಟರ್, ತಂತ್ರಜ್ಞಾನ ಸಾಮಗ್ರಿ, ಲ್ಯಾಪ್‌ಟಾಪ್ ವಿತರಣೆ, ರಸ್ತೆ ಅಭಿವೃದ್ಧಿ ಸೇರಿದಂತೆ ಹತ್ತಾರು ಅಭಿವೃದ್ಧಿ ಕಾರ್ಯಗಳಿಗೆ ಈ ಅನುದಾನ ಬಳಕೆಯಾಗುತ್ತಿದ್ದು, ಹಂತ-ಹಂತವಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪರ್ವದತ್ತ ಸಾಗುತ್ತಿದೆ ಎಂದರು.
೧೯೪೭ರ ಪೂರ್ವದಲ್ಲಿ ಭಾರತದ ಒಕ್ಕೂಟ ವ್ಯವಸ್ಥೆಯಿಂದ ದೂರ ಉಳಿದಿದ್ದ ಕಲ್ಯಾಣ ಕರ್ನಾಟಕ ಪ್ರದೇಶ ರಜಾಕಾರರ ಕಪಿಮುಷ್ಠಿಯಲ್ಲಿತ್ತು. ಅನೇಕ ಹೋರಾಟಗಾರರ ಹೋರಾಟಗಳ, ಚಳವಳಿಗಳ ಮೂಲಕ ೧೯೪೮ ಸೆ.೧೭ರಂದು ಈ ಪ್ರದೇಶದ ಜನತೆಗೆ ಸ್ವಾತಂತ್ರ್ಯ ದೊರೆಯುವಂತಾಯಿತು ಎಂದು ತಿಳಿಸಿದರು.ನಂತರ ಉಪನ್ಯಾಸಕ ಶಿವಪುತ್ರಪ್ಪ ಗಳಪೂಜೆ ಮಾತನಾಡಿ, ಹೈದ್ರಬಾದ ನಿಜಾಮನ ದೌರ್ಜನ್ಯ, ದಬ್ಬಾಳಿಕೆ ಹಾಗೂ ಹಿಂಸಾತ್ಮಕ ಕೃತ್ಯಗಳಿಂದ ಆತಂಕಕ್ಕೆ ಒಳಗಾಗಿದ್ದರು. ರಮಾನಂದ ತೀರ್ಥರು ಶಾಂತಿಧೂತರಾಗಿ ಅನೇಕ ಚಳವಳಿ ಹಮ್ಮಿಕೊಂಡು ಜನರನ್ನು ಒಗ್ಗೂಡಿಸಿ ಹೋರಾಟದ ಕಿಚ್ಚು ಹೊತ್ತಿಸಿದರು.
ನಂತರದ ದಿನಗಳಲ್ಲಿ ಈ ಪ್ರದೇಶದಲ್ಲಿ ಸ್ಥಳೀಯ ಹೋರಾಟಗಾರರಿಂದ ಧ್ವಜಾರೋಹಣ ನಡೆಸುವ ಚಳವಳಿ ನಡೆದವು. ಕನಕಗಿರಿಯ ಜಯತೀರ್ಥ ರಾಜಪುರೋಹಿತ, ಮಾಕಣ್ಣ ಕಂಬಳಿ, ವೆಂಕೋಬ ಆಚಾರ್ ಸೇರಿ ಅನೇಕರು ಹೋರಾಟ ನಡೆಸಿದ್ದಾರೆ. ಇವರ ಹೋರಾಟದ ಫಲವಾಗಿ ಕನ್ನಡ ಆಡಳಿತ ಭಾಷೆಯಾಯಿತು ಎಂದು ಸ್ಮರಿಸಿದರು.ರಾಷ್ಟ್ರಪಿತ ಮಹಾತ್ಮಾ ಗಾಂಧಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾದ ನೆಡುತೋಪು ಕಾವಲುಗಾರ ಈರಪ್ಪ ಹಾದಿಮನಿ ಅವರನ್ನು ತಾಲೂಕು ಆಡಳಿತದಿಂದ ಗೌರವಿಸಲಾಯಿತು.
ತಾಪಂ ಕಾರ್ಯನಿರ್ವಾಹಕಾಧಿಕಾರಿ ಟಿ. ರಾಜಶೇಖರ, ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷ, ಶಿಕ್ಷಣ ಸಂಯೋಜಕ ಆಂಜನೇಯ, ಸರ್ಕಾರಿ ಪ್ರೌಢಶಾಲೆಯ ಉಪಪ್ರಾಂಶುಪಾಲ ಜಗದೀಶ ಹಾದಿಮನಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.