ಮೈಸೂರು ಭಾಗಕ್ಕೆ ಸಿಗುವ ಸೌಲಭ್ಯಗಳು ಕಲ್ಯಾಣ ಕರ್ನಾಟಕಕ್ಕೆ ಸಿಗುತ್ತಿಲ್ಲ: ಶಾಸಕ ದೊಡ್ಡನಗೌಡ ಪಾಟೀಲ

KannadaprabhaNewsNetwork | Published : Sep 18, 2024 1:48 AM

ಸಾರಾಂಶ

ಅನೇಕ ಹೋರಾಟಗಾರರ ತ್ಯಾಗ, ಬಲಿದಾನಗಳಿಂದ ಹೈದ್ರಾಬಾದ ಕರ್ನಾಟಕಕ್ಕೆ ಸ್ವಾತಂತ್ರ್ಯ ದೊರಕಿದ್ದು, ಅಂತಹ ಹೋರಾಟಗಾರರ ಆದರ್ಶ ಅಳವಡಿಸಿಕೊಂಡು ಬದುಕನ್ನು ಕಟ್ಟಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕುಷ್ಟಗಿ

ಅನೇಕ ಹೋರಾಟಗಾರರ ತ್ಯಾಗ, ಬಲಿದಾನಗಳಿಂದ ಹೈದ್ರಾಬಾದ ಕರ್ನಾಟಕಕ್ಕೆ ಸ್ವಾತಂತ್ರ್ಯ ದೊರಕಿದ್ದು, ಅಂತಹ ಹೋರಾಟಗಾರರ ಆದರ್ಶ ಅಳವಡಿಸಿಕೊಂಡು ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತದ ವತಿಯಿಂದ ನಡೆದ 77ನೇ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೈದ್ರಾಬಾದ ಕರ್ನಾಟಕ ಸ್ವತಂತ್ರಗೊಳ್ಳುವಲ್ಲಿ ಸರ್ದಾರ ವಲ್ಲಭಾಯಿ ಪಟೇಲರವರ ಶ್ರಮ ಬಹಳಷ್ಟಿದೆ ಎಂದರು.

ಹೈದ್ರಾಬಾದ್ ಕರ್ನಾಟಕ ಕಲ್ಯಾಣ ಕರ್ನಾಟಕವಾಗಿ ಹೆಸರಿನಲ್ಲಿ ಮಾತ್ರ ಬದಲಾವಣೆಯಾಗಿದೆ. ಹೊರತು ಅಭಿವೃದ್ಧಿಯಲ್ಲಿ ಬದಲಾವಣೆಯಾಗಿಲ್ಲ. ಇಂದಿಗೂ ಸಹಿತ ಮೈಸೂರು ಭಾಗಕ್ಕೆ ನೀಡುವ ಅನುದಾನ, ಸೌಲಭ್ಯಗಳು ನಮ್ಮ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಿಗುತ್ತಿಲ್ಲ. ಅನುದಾನ ನೀಡುವಲ್ಲಿಯೂ ತಾರತಮ್ಯ ಮಾಡಲಾಗುತ್ತಿದೆ. ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಅಭಿವೃದ್ಧಿ ಕಂಡಿಲ್ಲ ಎಂದರು.

ತಹಸೀಲ್ದಾರ ಅಶೋಕ ಶಿಗ್ಗಾವಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಹೈದ್ರಾಬಾದ್ ನಿಜಾಮನ ದುರಾಡಳಿತ ಹಾಗೂ ರಜಾಕರ ಹಾವಳಿಯಿಂದ ಕಲ್ಯಾಣ ಕರ್ನಾಟಕವು ಸ್ವತಂತ್ರಗೊಂಡು 77 ವರ್ಷಗಳು ಗತಿಸಿದರೂ ಸಹಿತ ಅಂದುಕೊಳ್ಳುವಂತಹ ಅಭಿವೃದ್ಧಿ ನಡೆದಿಲ್ಲ. ಹಾಗಾಗಿ ಸರ್ಕಾರ ಈ ಭಾಗದ ಅಭಿವೃದ್ಧಿಗಾಗಿ 371ಜೆ ಕಲಂ ಜಾರಿಗೆ ತಂದಿದೆ. ಇದನ್ನು ಸಾರ್ವಜನಿಕರು ಸಮರ್ಪಕವಾಗಿ ಉಪಯೋಗ ಮಾಡಿಕೊಳ್ಳುವ ಮೂಲಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.

ಕುಷ್ಟಗಿ ಪಟ್ಟಣದ ಬಾಲಕಿಯರ ಮಾದರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಾಗೂ ಎಸ್‌ವಿಸಿ ಶಾಲೆಯ ಮಕ್ಕಳು ದೇಶ ಭಕ್ತಿಗೀತೆಗೆ ನೃತ್ಯ ಮಾಡಿ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ತಾಪಂ ಇಒ ಪಂಪಾಪತಿ ಹಿರೇಮಠ, ಗ್ರೇಡ್-2 ತಹಸೀಲ್ದಾರ ಮುರುಳೀಧರ ಮುಕ್ತೇದಾರ, ಸಿಡಿಪಿಒ ಯಲ್ಲಮ್ಮ ಹಂಡಿ, ಶ್ರೀನಿವಾಸ ನಾಯಕ, ಬಾಲಚಂದ್ರ ಸಂಗನಾಳ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಜಮೀರ ಅಲಿ, ಪಿಎಸ್‌ಐ ಹನಮಂತಪ್ಪ ತಳವಾರ, ಅಬಕಾರಿ ಅಧಿಕಾರಿ ಶಂಕರ ದೊಡ್ಡಮನಿ, ಸಮನ್ವಯಾಧಿಕಾರಿ ಜಗದೀಶ ಮೆಣೇದಾಳ, ಜಗದೀಶ ಸೂಡಿ, ನಾಗಪ್ಪ ಬಿಳಿಯಪ್ಪನವರು ಸೇರಿದಂತೆ ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು ಇದ್ದರು. ದೈಹಿಕ ಪರಿವೀಕ್ಷಕಿ ಬಿ. ಸರಸ್ವತಿ ಸ್ವಾಗತಿಸಿ, ಸಂಪನ್ಮೂಲ ವ್ಯಕ್ತಿ ಜೀವನಸಾಬ ಬಿನ್ನಾಳ ನಿರ್ವಹಿಸಿದರು.

Share this article