ಕಲ್ಯಾಣ ಕರ್ನಾಟಕ ಸಮಗ್ರಾಭಿವೃದ್ಧಿಗೆ ಒತ್ತಾಯಿಸಿ ಧರಣಿ

KannadaprabhaNewsNetwork |  
Published : Sep 09, 2026, 02:30 AM IST
ಹೊಸಪೇಟೆ ನಗರದಲ್ಲಿ ಸೋಮವಾರ ತಹಸೀಲ್ದಾರ್ ಕಚೇರಿ ಮುಂದೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೋರಾಟ ಸಮಿತಿ ವಿಜಯನಗರ ಜಿಲ್ಲಾ ಸಮಿತಿಯಿಂದ ಕಲ್ಯಾಣ ಕರ್ನಾಟಕ 371ಜೆ ಜಾರಿಗೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸಿದರು | Kannada Prabha

ಸಾರಾಂಶ

ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲಾ ಕೇಂದ್ರಗಳಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ.

ಹೊಸಪೇಟೆ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೋರಾಟ ಸಮಿತಿ ವಿಜಯನಗರ ಜಿಲ್ಲಾ ಸಮಿತಿಯಿಂದ ಕಲ್ಯಾಣ ಕರ್ನಾಟಕ 371ಜೆ ಜಾರಿಗೆ ಒತ್ತಾಯಿಸಿ ನಗರದ ತಹಸೀಲ್ದಾರ್‌ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಿದರು.

ಧರಣಿ ಸತ್ಯಾಗ್ರಹ ಉದ್ದೇಶಿಸಿ ಸಮಿತಿಯ ಗೌರವಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಮಾತನಾಡಿ, ದೇಶದಲ್ಲಿ ಅನೇಕ ಹಿಂದುಳಿದ ಮತ್ತು ಅಭಿವೃದ್ಧಿಗೊಳ್ಳದ ಪ್ರದೇಶಗಳಿದ್ದು, ಕರ್ನಾಟಕದಲ್ಲಿ ಏಳು ಜಿಲ್ಲೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುದಾನ ಬಿಡುಗಡೆ ಮಾಡುತ್ತಿಲ್ಲ. ಕಳೆದ 12 ವರ್ಷಗಳಿಂದ ಸಂವಿಧಾನದ ಕಲಂ 371 (ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಬೇಕು ಎಂದು ಮಂಡಳಿ ರಚಿಸಲಾಗಿದ್ದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆದಿಲ್ಲ ಎಂದು ಆರೋಪಿಸಿದರು.

ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲಾ ಕೇಂದ್ರಗಳಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಇದೇ ತಿಂಗಳ 17ರಂದು ಕಲಬುರಗಿ ಚಲೋ ಚಳವಳಿಯಲ್ಲಿ ವಿಜಯನಗರ ಜಿಲ್ಲೆಯಿಂದ ಕನಿಷ್ಠ 1 ಸಾವಿರ ಜನರು ಭಾಗವಹಿಸಲಿದ್ದಾರೆ ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ದಶಕಗಳಿಂದ ಖಾಲಿ ಇರುವ 30 ಸಾವಿರ ಶಿಕ್ಷಕರ ಹುದ್ದೆಗಳನ್ನು ತಕ್ಷಣವೇ ನೇಮಿಸಬೇಕು. ಇತರ ಇಲಾಖೆಯ ಖಾಲಿ ಹುದ್ದೆ ಪೂರ್ಣ ಪ್ರಮಾಣದಲ್ಲಿ ನೇಮಕಾತಿ ಮಾಡಬೇಕು. ವಿಜಯನಗರ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕು. ಸಕ್ಕರೆ ಕಾರ್ಖಾನೆ ಪ್ರಾರಭಿಸಬೇಕು ಎಂದು ಒತ್ತಾಯಿಸಿದರು.

ಸಂಘಟನಾ ಕಾರ್ಯದರ್ಶಿ ಅಕ್ಕಿ ಮಲ್ಲಿಕಾರ್ಜುನ ಮಾತನಾಡಿ, ಈ ಭಾಗದ ಎಲ್ಲ ವಿಶ್ವವಿದ್ಯಾಲಯಗಳಿಗೆ ಅಗತ್ಯ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಧಾನ ಕಾರ್ಯದರ್ಶಿ ಜೆ.ಎಂ. ಚನ್ನಬಸಯ್ಯ ಮಾತನಾಡಿ, ಪರ್ಯಾಯ ಕೃಷಿ ಸೌಲಭ್ಯಗಳಾದ ಹೈನುಗಾರಿಕೆ, ಮೀನುಗಾರಿಕೆ, ಕುರಿ​ಕೋಳಿ ಸಾಗಾಣಿಕೆಗೆ ಸೂಕ್ತ ತರಬೇತಿ ಮತ್ತು ಸಬ್ಸೀಡಿ ರೂಪದಲ್ಲಿ ಆರ್ಥಿಕ ನೆರವು ಸಮರ್ಪಕ ವಾಗಿ ಅನುಷ್ಠಾನಗೊಳಿಸಬೇಕು ಎಂದರು.

ಸಮಿತಿಯ ಕೋಶಾಧ್ಯಕ್ಷ ಜಂಬುನಾಥ ಎಚ್.ಎಂ.,ಸಮಿತಿ ಅಧ್ಯಕ್ಷ ಎ. ಕರುಣಾನಿಧಿ, ಜಿಲ್ಲಾ ಸಂಚಾಲಕ ಡಾ. ತಿಪ್ಪೇಸ್ವಾಮಿ ವೆಂಕಟೇಶ, ಹಿರಿಯ ಹೋರಾಟಗಾರ ಬಿ.ತಾಯಪ್ಪ ನಾಯಕ, ತಾಳೂರು ವೀರಭದ್ರಪ್ಪ,ಆರ್. ಭಾಸ್ಕರರೆಡ್ಡಿ, ಸಿದ್ಧಲಿಂಗಪ್ಪ, ಬಿ. ರಮೇಶ, ಸತ್ಯಮೂರ್ತಿ, ರವಿಕುಮಾರ ತಂಬ್ರಹಳ್ಳಿ, ಪವನಕುಮಾರ, ಯಲ್ಲಾಲಿಂಗ, ವಿ. ಸ್ವಾಮಿ, ಎಂ.ಉಮಾಮಹೇಶ್ವರ, ಎಲ್. ಮಂಜುನಾಥ, ಮಾವಿನಹಳ್ಳಿ ಬಸವರಾಜ ಇತರರು ಧರಣಿಯಲ್ಲಿ ಭಾಗವಹಿಸಿದ್ದರು. ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೂಲಿ ಹಣ ಜಮೆಗೆ ಆಗ್ರಹಿಸಿ ಕೂಲಿ ಕಾರ್ಮಿಕರ ಪ್ರತಿಭಟನೆ
ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಪತ್ರ ಚಳವಳಿ