ಕಲ್ಯಾಣ ಕರ್ನಾಟಕದವರ ‘ನಾನಲ್ಲ, ನಾನಲ್ಲ’ ಟ್ರಿಕ್‌!

KannadaprabhaNewsNetwork |  
Published : Aug 31, 2026, 02:00 AM IST
ಕಲ್ಯಾಣ ಕರ್ನಾಟಕ | Kannada Prabha

ಸಾರಾಂಶ

ಕಲ್ಯಾಣ ಕರ್ನಾಟಕ ಭಾಗಕ್ಕೆ 371ಜೆ ವಿಶೇಷ ಸ್ಥಾನಮಾನ ಲಭಿಸಿದ ಮೇಲೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಮುನ್ನ ''ನಾನು ಕಲ್ಯಾಣ ಕರ್ನಾಟಕದ ಅಭ್ಯರ್ಥಿ'' ಎಂದು ಅರ್ಜಿ ಸಲ್ಲಿಸಿದವರು ಸರ್ಕಾರಿ ನೌಕರಿ ಬಂದ ಮೇಲೆ, ಕಲ್ಯಾಣ ಕರ್ನಾಟಕದಲ್ಲಿ ಸೇವೆಗೆ ಹಾಜರಾಗುವ ವೇಳೆ ''ಕಲ್ಯಾಣ ಕರ್ನಾಟಕದವ ನಾನಲ್ಲ, ನಾನಲ್ಲ'' ಎಂದು ಹೇಳತೊಡಗಿದ್ದಾರೆ.

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ:ಕಲ್ಯಾಣ ಕರ್ನಾಟಕ ಭಾಗಕ್ಕೆ 371ಜೆ ವಿಶೇಷ ಸ್ಥಾನಮಾನ ಲಭಿಸಿದ ಮೇಲೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಮುನ್ನ ''''ನಾನು ಕಲ್ಯಾಣ ಕರ್ನಾಟಕದ ಅಭ್ಯರ್ಥಿ'''' ಎಂದು ಅರ್ಜಿ ಸಲ್ಲಿಸಿದವರು ಸರ್ಕಾರಿ ನೌಕರಿ ಬಂದ ಮೇಲೆ, ಕಲ್ಯಾಣ ಕರ್ನಾಟಕದಲ್ಲಿ ಸೇವೆಗೆ ಹಾಜರಾಗುವ ವೇಳೆ ''''ಕಲ್ಯಾಣ ಕರ್ನಾಟಕದವ ನಾನಲ್ಲ, ನಾನಲ್ಲ'''' ಎಂದು ಹೇಳತೊಡಗಿದ್ದಾರೆ.ಹೌದು, 371 ಜೆ ವಿಶೇಷ ಸ್ಥಾನಮಾನದಡಿಯಲ್ಲಿ ನೇಮಕವಾದವರು ಬಡ್ತಿಯಲ್ಲಿ ಇರುವ ಅವೈಜ್ಞಾನಿಕ ನಿಯಮದಿಂದ ನಾನು ಕಲ್ಯಾಣ ಕರ್ನಾಟಕದವನು ಅಲ್ಲ ಎಂದು ತಮ್ಮ ಎಸ್‌ಆರ್‌ (ಸೇವಾ ದಾಖಲಾತಿ) ಪುಸ್ತಕದಲ್ಲಿ ಬರೆಸುತ್ತಿದ್ದಾರೆ.

ಯಾಕೆ ಹೀಗೆ?: ಕಲ್ಯಾಣ ಕರ್ನಾಟಕ ಭಾಗದಲ್ಲಿ 371ಜೆ ಸ್ಥಾನಮಾನದಲ್ಲಿ ಬಡ್ತಿಗೆ ಮೀಸಲಾಗಿರುವ ಶೇ.20 ಹುದ್ದೆ ಕಲ್ಯಾಣ ಕರ್ನಾಟಕ ಅಲ್ಲದವರಿಗೆ ಮೀಸಲು ಇಟ್ಟಿರುವುದರಿಂದ ಈ ಸಮಸ್ಯೆ ಎದುರಾಗಿದೆ. ಕಲ್ಯಾಣ ಕರ್ನಾಟಕದವರು ಕಲ್ಯಾಣ ಕರ್ನಾಟಕದಲ್ಲಿ 20 ವರ್ಷ ಸೇವೆ ಸಲ್ಲಿಸಿದರೂ ಒಂದೇ ಒಂದು ಬಡ್ತಿ ದೊರೆಯುತ್ತಿಲ್ಲ. ಆದರೆ ಕಲ್ಯಾಣ ಕರ್ನಾಟಕ ಅಲ್ಲದವರಿಗೆ ಕೇವಲ 6-7 ವರ್ಷಗಳಲ್ಲಿ ಬಡ್ತಿ ಭಾಗ್ಯ ದೊರೆಯುತ್ತಿರುವುದರಿಂದ ಕಲ್ಯಾಣ ಕರ್ನಾಟಕದಲ್ಲಿ ನೇಮಕವಾದವರೂ ಸೇವಾ ದಾಖಲಾತಿ ಪುಸ್ತಕದಲ್ಲಿ ಕಲ್ಯಾಣ ಕರ್ನಾಟಕದವ ನಾನಲ್ಲ ಎಂದು ನಮೂದಿಸಿ ಬಡ್ತಿ ಭಾಗ್ಯ ಪಡೆಯುತ್ತಿದ್ದಾರೆ.ಪೊಲೀಸ್ ಇಲಾಖೆಯಲ್ಲಿ ಕೇವಲ ಏಳು ವರ್ಷ ಸೇವೆ ಸಲ್ಲಿಸಿದ ಕಲ್ಯಾಣ ಕರ್ನಾಟಕದವರಲ್ಲದವರು ಎಎಸ್ ಐ ಹುದ್ದೆಗೆ ಬಡ್ತಿ ಹೊಂದುತ್ತಿದ್ದಾರೆ. ಆದರೆ ಕಲ್ಯಾಣ ಕರ್ನಾಟಕದಲ್ಲಿ 15 ವರ್ಷ ಪೇದೆಯಾಗಿ ಸೇವೆ ಸಲ್ಲಿಸಿದರೂ ಹೆಡ್ ಕಾನ್‌ಸ್ಟೆಬಲ್ ಹುದ್ದೆ ಲಭಿಸುತ್ತಿಲ್ಲ.ಇದೇ ರೀತಿ ಶಿಕ್ಷಣ ಇಲಾಖೆಯಲ್ಲಿ ನಿವೃತ್ತಿ ಅಂಚಿಗೆ ಬಂದರೂ ಶಿಕ್ಷಕರಿಗೆ ಮುಖ್ಯೋಪಾಧ್ಯಾಯ ಹುದ್ದೆಯ ಬಡ್ತಿ ಸಿಕ್ಕಿಲ್ಲ. ಆದರೆ, ಕಲ್ಯಾಣ ಕರ್ನಾಟಕದವರು ಅಲ್ಲದವರಿಗೆ ಕೇವಲ ಹತ್ತೇ ವರ್ಷದಲ್ಲಿ ಶಿಕ್ಷಕರು ಮುಖ್ಯೋಪಾಧ್ಯಾಯರಾಗಿ ಬಡ್ತಿಭಾಗ್ಯ ಪಡೆದಿದ್ದಾರೆ. ಇದು, ಕೇವಲ ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ಇಲಾಖೆಯಲ್ಲಿಯೂ ಕಲ್ಯಾಣ ಕರ್ನಾಟಕದ ಕೊಪ್ಪಳ, ಬಳ್ಳಾರಿ, ವಿಜಯಪುರ, ರಾಯಚೂರು, ವಿಜಯನಗರ, ಬೀದರ್, ಯಾದಗಿರಿ, ಕಲಬುರ್ಗಿ ಜಿಲ್ಲೆಯಲ್ಲಿ ಕಲ್ಯಾಣ ಕರ್ನಾಟಕದವರಿಗೆ ಬಡ್ತಿಯಲ್ಲಿ ಆಗುತ್ತಿರುವ ಅನ್ಯಾಯವಾಗಿದೆ. 23 ವರ್ಷಗಳಿಂದ ಈ ಅನ್ಯಾಯದಿಂದ ರೋಸಿ ಹೋಗಿರುವ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಇಲಾಖೆಯ ನೌಕರರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿರುವುದು ವರವಾಗುವ ಬದಲು ನೌಕರರ ಬಡ್ತಿ ವಿಷಯದಲ್ಲಿ ಶಾಪವಾಗಿ ಪರಿಣಮಿಸಿದೆ.ಏನಿದು ಸಮಸ್ಯೆ?:

ಈ ಭಾಗದ ಕಲ್ಯಾಣಕ್ಕೆ ಬಹು ವರ್ಷಗಳ ಹೋರಾಟದ ಬಳಿಕ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿ ಅದರಡಿ ಮೀಸಲು ಸೌಲಭ್ಯ ಕಲ್ಪಿಸಿದೆ. ಮೀಸಲು ಸೌಲಭ್ಯದಡಿಯಲ್ಲಿ ರೂಪಿಸಿದ ನಿಯಮ ತಪ್ಪಾಗಿ ಅರ್ಥೈಸಿ ಅನ್ಯಾಯ ಮಾಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲ್ಯಾಣ ಕರ್ನಾಟಕದವರಿಗೆ ಶೇ. 80ರಷ್ಟು ಹಾಗೂ ಇತರ ಭಾಗಕ್ಕೆ ಶೇ. 20ರಷ್ಟು ಮೀಸಲು ನೀಡಲಾಗಿದೆ. ಇತರ ಎಂದರೆ ಕಲ್ಯಾಣ ಕರ್ನಾಟಕದವರು ಅಲ್ಲ ಎಂದು ಮೀಸಲಾತಿ ತಪ್ಪಾಗಿ ಅರ್ಥೈಸಲಾಗಿದೆ. ಆದರೆ ಶೇ. 80ರಷ್ಟು ಕಲ್ಯಾಣ ಕರ್ನಾಟಕದವರಿಗೆ ಮೀಸಲು ಹಾಗೂ ಶೇ. 20 ಕಲ್ಯಾಣ ಕರ್ನಾಟಕ ಒಳಗೊಂಡು ಕರ್ನಾಟಕದವರಿಗೆ ಎಂದು ಅರ್ಥೈಸದೆ ಇರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಕಲ್ಯಾಣ ಕರ್ನಾಟಕದವರು ಎಂದು ಕ್ಷಣ ಇತರ ಕರ್ನಾಟಕದವರು ಎಂದಾಗ ಕಲ್ಯಾಣ ಕರ್ನಾಟಕದವರನ್ನು ಹೊರತುಪಡಿಸಲಾಗುತ್ತದೆ. ಇದುವೇ ಸಮಸ್ಯೆಗೆ ಕಾರಣವಾಗಿದ್ದು, ಸಚಿವ ಸಂಪುಟ ಉಪಸಮಿತಿ ಈ ಕುರಿತು ಪರಿಶೀಲನೆ ಮಾಡಬೇಕಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಹವಾಲು ಆಲಿಸಿ ಪರಿಹಾರ ಸೂಚಿಸಿದ ಸಚಿವ ಬಸವಂತಪ್ಪ
ಸುಸ್ಥಿತಿಯ ಕಾಂಪೌಂಡ್ ಕೆಡವಿ, ಮರುನಿರ್ಮಾಣಕ್ಕೆ ತಡೆ