ಬೀದರ್: ಬಸವ ಧರ್ಮ ಪೀಠದ ವತಿಯಿಂದ ಬಸವಕಲ್ಯಾಣದ ಬಸವ ಮಹಾಮನೆ ಆವರಣದಲ್ಲಿ ಅ. 28ರಿಂದ 30ರ ವರೆಗೆ 22ನೇ ಕಲ್ಯಾಣ ಪರ್ವ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಪರ್ವ ಉತ್ಸವ ಸಮಿತಿಯ ಅಧ್ಯಕ್ಷ ಸಂಜೀವಕುಮಾರ ಪಾಟೀಲ ಕೌಡಗಾಂವ್ ಹೇಳಿದರು.
ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಡಾ. ಗಂಗಾದೇವಿ ಅವರ ಸಾನ್ನಿಧ್ಯದಲ್ಲಿ ಮೂರು ದಿನ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧೆಡೆಯ ಒಂದು ಲಕ್ಷ ಬಸವ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.
28ರಂದು ಬೆಳಗ್ಗೆ 6ಕ್ಕೆ ಸಾಮೂಹಿಕ ಇಷ್ಟಲಿಂಗಾರ್ಚನೆ, ಬೆಳಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ, ಸಂಜೆ 4ಕ್ಕೆ ಪ್ರಥಮ ಧರ್ಮ ಚಿಂತನ ಗೋಷ್ಠಿ, ರಾತ್ರಿ 8ಕ್ಕೆ ವಚನ ನೃತ್ಯ, ರೂಪಕ ನಡೆಯಲಿದೆ ಎಂದು ಹೇಳಿದರು.29ರಂದು ಬೆಳಗ್ಗೆ 7.30ಕ್ಕೆ ಶರಣರಿಗೆ ವಂದನೆ, ಶರಣು ಶರಣಾರ್ಥಿ ಕಾರ್ಯಕ್ರಮ, 10ಕ್ಕೆ ದ್ವಿತೀಯ ಧರ್ಮ ಚಿಂತನ ಗೋಷ್ಠಿ, ಪ್ರಶಸ್ತಿ ಪ್ರದಾನ, ಮಧ್ಯಾಹ್ನ 3.30ಕ್ಕೆ ಮಹಿಳಾ ಗೋಷ್ಠಿ, ಸಂಜೆ 7ಕ್ಕೆ ಪ್ರಥಮ ಶೂನ್ಯ ಪೀಠಾರೋಹಣದ 838ನೇ ಸಂಸ್ಮರಣೆ ಮತ್ತು ದ್ವಿತೀಯ ಶೂನ್ಯ ಪೀಠಾರೋಹಣದ 21ನೇ ವಾರ್ಷಿಕೋತ್ಸವ, ಸಂಜೆ 7.30ಕ್ಕೆ ಅಕ್ಕ ನಾಗಲಾಂಬಿಕಾ ಸಂಸ್ಮರಣೆ ನಿಮಿತ್ತ ಬಸವ ಧರ್ಮದ ವಿಜಯೋತ್ಸವ ಹಾಗೂ ಪೀಠಾರೋಹಣ ಸಮಾರಂಭ ಜರುಗಲಿದೆ ಎಂದು ತಿಳಿಸಿದರು.
ಉಸ್ತುವಾರಿ ಸಚಿವರಿಂದ ಚಾಲನೆ: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರು ಅ.28ರಂದು ಬೆಳಗ್ಗೆ 10.30ಕ್ಕೆ ನಡೆಯುವ ಸಮಾರಂಭದಲ್ಲಿ ಬಸವ ಜ್ಯೋತಿ ಬೆಳಗಿಸಿ ಕಲ್ಯಾಣ ಪರ್ವಕ್ಕೆ ಚಾಲನೆ ನೀಡುವರು. ಬಸವಕಲ್ಯಾಣ ಶಾಸಕ ಶರಣು ಸಲಗರ ಬಸವ ಪೂಜೆ ನೆರವೇರಿಸುವರು. ಮಾತೆ ಡಾ. ಗಂಗಾದೇವಿ, ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು, ಡಾ. ಗುರುಬಸವ ಸ್ವಾಮೀಜಿ, ಗುರುಬಸವ ಪಟ್ಟದ್ದೇವರು, ಶಿವಾನಂದ ಸ್ವಾಮೀಜಿ ಸಾನಿಧ್ಯ ವಹಿಸುವರು. ಜಗದ್ಗುರು ಬಸವಕುಮಾರ ಸ್ವಾಮೀಜಿ ಪ್ರಾರ್ಥನೆ ನಡೆಸಿಕೊಡುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತೆ ವಿಜಯಾಂಬಿಕಾ, ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಗಂದಗೆ, ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ್ ಗಾದಗಿ, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಂಟೆಪ್ಪ ಗಂದಿಗುಡಿ, ಮೆರವಣಿಗೆ ಸಮಿತಿ ಅಧ್ಯಕ್ಷ ಸಿದ್ದು ಶೆಟಕಾರ್, ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ, ಬಸವ ದಳದ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿ ಪಾಪಡೆ, ಬೀದರ್ ದಕ್ಷಿಣ ಉಸ್ತುವಾರಿ ಮಹಾಲಿಂಗ ಸ್ವಾಮಿ ಚಟ್ನಳ್ಳಿ, ಜಿಲ್ಲಾ ಯುವ ಘಟಕದ ಜಿಲ್ಲಾ ಅಧ್ಯಕ್ಷ ಗಣೇಶ ಬಿರಾದಾರ ಮತ್ತಿತರರು ಇದ್ದರು.