- ಮದ್ಯ, ಗುಟ್ಕಾ ಮಾರಾಟ ನಿಷಿದ್ಧ
- ಇಲ್ಲಿ ಹೋಟೆಲ್ ಸಹ ಇಲ್ಲ, ಮಾಸದಂಗಡಿ ದೂರದ ಮಾತು- ಸಿರಿಧಾನ್ಯದ ಸಮೃದ್ಧ ಬದುಕು ಇವರದು
- ದೇಶಿಯ ಹಸು ಸಾಕುವ ಕುಟುಂಬಗಳು- ಕಾಮನೂರಿಗೆ ಗಾಂಧಿ ಬಳಗದ ಪಾದಯಾತ್ರೆ
ಸೋಮರಡ್ಡಿ ಅಳವಂಡಿಕನ್ನಡಪ್ರಭ ವಾರ್ತೆ ಕೊಪ್ಪಳ
ಇಂದು, ನಿನ್ನೆಯಲ್ಲ, ಕಳೆದ 30 ವರ್ಷಗಳಿಂದ ಈ ಗ್ರಾಮದಲ್ಲಿ ಗುಟ್ಕಾ, ತಂಬಾಕು, ಸಿಗರೇಟು ಸೇರಿದಂತೆ ಮದ್ಯ, ಮಾಂಸ ಮಾರಾಟ ಇಲ್ಲಿ ಸಂಪೂರ್ಣ ನಿಷಿದ್ಧ.ಹಾಗೊಂದು ವೇಳೆ ಯಾರಾದರೂ ಮಾರಾಟ ಮಾಡಲು ಮುಂದಾದರೆ ದಂಡ ಬೀಳೋದು ಗ್ಯಾರಂಟಿ.
ಇದು, ಕೊಪ್ಪಳ ತಾಲೂಕಿನ ಕಾಮನೂರು ಗ್ರಾಮಸ್ಥರೆಲ್ಲ ಸೇರಿ ತೆಗೆದುಕೊಂಡಿರುವ ಒಟ್ಟಾಭಿಪ್ರಾಯದ ನಿರ್ಧಾರ. ಸುಮಾರು ವರ್ಷಗಳ ಹಿಂದೆಯೇ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಈಗಲೂ ಗ್ರಾಮಸ್ಥರು ಬದ್ಧವಾಗಿದ್ದಾರೆ. ಅಷ್ಟೇ ಅಲ್ಲ, ತಮ್ಮ ಬದುಕನ್ನು ಸಹ ಸರಳವಾಗಿ ಕಟ್ಟಿಕೊಂಡು ಮಹಾತ್ಮಾ ಗಾಂಧೀಜಿ ಅವರ ತತ್ವದಡಿಯಲ್ಲಿಯೇ ಇಡೀ ಗ್ರಾಮ ಹೆಜ್ಜೆ ಹಾಕುತ್ತಿದೆ.ಗಾಂಧಿ ಬಳಗದ ಪಾದಯಾತ್ರೆ: ಪ್ರತಿ ವರ್ಷವೂ ಇಲ್ಲಿಯ ಗಾಂಧಿ ಬಳಗವೂ ಒಂದಿಲ್ಲೊಂದು ವಿಶೇಷ ಸ್ಥಳಕ್ಕೆ ಮಹಾತ್ಮಾ ಗಾಂಧೀಜಿ ಅವರ ಜಯಂತಿಯಂದು ಪಾದಯಾತ್ರೆ ಹಮ್ಮಿಕೊಳ್ಳುತ್ತದೆ. ಈ ವರ್ಷ ಗಾಂಧಿ ತತ್ವವನ್ನು ಅನುಸರಿಸುತ್ತಿರುವ ಕಾಮನೂರು ಗ್ರಾಮಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಅ. 2ರಂದು ಬೆಳಗ್ಗೆ 5.30ಕ್ಕೆ ಕೊಪ್ಪಳ ನಗರದ ಅಶೋಕ ವೃತ್ತದಿಂದ ಹೊರಡುವ ಗಾಂಧಿ ಬಳಗದ ಪಾದಯಾತ್ರೆ ಬೆಳಗ್ಗೆ 8.30ಕ್ಕೆ ಕಾಮನೂರು ಗ್ರಾಮಕ್ಕೆ ತಲುಪಿ, ಗಾಂಧೀಜಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಿದೆ.ಎದುರಾದ ಸವಾಲುಗಳು:
30 ವರ್ಷಗಳ ಹಿಂದೆ ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧ ಮಾಡಿ ತೀರ್ಮಾನ ತೆಗೆದುಕೊಂಡಿದ್ದರು. ಇದಕ್ಕೆ ಇಡೀ ಗ್ರಾಮಸ್ಥರು ಬೆಂಬಲಿಸಿದ್ದರು. ಆದರೆ, ಗ್ರಾಮದಲ್ಲಿ ಮೂರು ಹೋಟೆಲ್‌ಗಳು ಇದ್ದವು. ಇದಕ್ಕೂ ಪಂಚಾಯಿತಿಯಲ್ಲಿ ಕೆಲವರು ಕ್ಯಾತೆ ತೆಗೆದು ಮದ್ಯ ಸೇವನೆ ಚಟವಾದರೆ ಚಹಾ ಕುಡಿಯುವುದು ಒಂದು ಚಟವಲ್ಲವೇ ಎಂದು ತಗಾದೆ ತೆಗೆದರು. ಆಗ ಗ್ರಾಮದ ಹಿರಿಯರಾಗಿದ್ದ ಯಂಕಣ್ಣ ಅವರು ಆಯಿತು, ನಿಮ್ಮ ಪ್ರಶ್ನೆ ಸರಿಯಾಗಿಯೇ ಇದೆ, ಇಂದಿನಿಂದ ನಮ್ಮೂರಲ್ಲಿ ಹೋಟೆಲ್ ಸಹ ಬೇಡ ಎಂದು ತೀರ್ಮಾನಿಸಿದರು. ಕಳೆದ 20 ವರ್ಷಗಳಿಂದ ಈ ಗ್ರಾಮದಲ್ಲಿ ಚಹಾದಂಗಡಿಯೂ ಇಲ್ಲದಂತೆ ಆಗಿದೆ.ಗ್ರಾಮದಲ್ಲಿರುವ ಕಿರಾಣಿ ಅಂಗಡಿ, ಪಾನಶಾಪ್‌ಗಳಲ್ಲಿ ಯಾರೂ ಸಹ ಗುಟ್ಕಾ, ಸಿಗರೇಟು ಸೇರಿದಂತೆ ಯಾವುದನ್ನೂ ಮಾರಾಟ ಮಾಡುವುದಿಲ್ಲ.
₹ಹತ್ತು ಲಕ್ಷ ತಿರಸ್ಕಾರ:ಗ್ರಾಮದಲ್ಲಿ ಮದ್ಯ ಮಾರಾಟಕ್ಕೆ ಇತ್ತೀಚಿಗೆ ಬಿಡ್ ಮಾಡಲಾಗುತ್ತದೆ. ಇದು ಅನಧಿಕೃತವಾಗಿ ನಡೆಯುವ ವ್ಯವಹಾರವಾಗಿದೆ. ಅದರಂತೆ ಬಿಡ್ ಮಾಡಲು ಬಂದವರು ಗ್ರಾಮದ ದೇಗುಲಕ್ಕೆ ₹10 ಲಕ್ಷ ನೀಡುತ್ತೇವೆ, ನಿಮ್ಮೂರಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಎಂದು ಕೇಳಿದ್ದಾರೆ. ಇದನ್ನು ಗ್ರಾಮಸ್ಥರು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಇಂಥ ಹಣ ಪಡೆದು, ನಮ್ಮೂರಲ್ಲಿ ದೇವಸ್ಥಾನ ನಿರ್ಮಾಣ ಮಾಡುವ ಅಗತ್ಯವಿಲ್ಲ. ಇದ್ದ ದೇವಸ್ಥಾನದಲ್ಲಿಯೇ ನಾವು ನೆಮ್ಮದಿ ಕಾಣುತ್ತೇವೆ ಎಂದು ಹೇಳಿ, ವಾಪಸ್ಸು ಕಳುಹಿಸಿದ್ದಾರೆ.
ಸುಸ್ಥಿರ ಬದುಕು:ಕಾಮನೂರಿನಲ್ಲಿ ಕೇವಲ ಮದ್ಯ, ಮಾಂಸ, ಗುಟ್ಕಾ ಮಾರಾಟ ನಿಷಿದ್ಧ ಮಾಡಿದ್ದಷ್ಟೇ ಸಾಧನೆಯಲ್ಲ. ಇದನ್ನು ಮೀರಿ ಇಡೀ ಗ್ರಾಮ ಸುಸ್ಥಿರ ಬದುಕು ಸಾಗಿಸುತ್ತಾರೆ. ಸಿರಿಧಾನ್ಯ ಬೆಳೆಯುವುದು, ಬಳಕೆ ಮಾಡುವುದು ಹಾಗೂ ಅದರಿಂದಲೇ ತಮ್ಮ ಬದುಕು ಕಟ್ಟಿಕೊಳ್ಳುವ ಮೂಲಕ ಸುಸ್ಥಿರ ಬದುಕು ಸಾಗಿಸುತ್ತಿದ್ದಾರೆ. ಇದರ ಜೊತೆಗೆ ಕುರಿ, ಕೋಳಿ ಸಾಕಾಣಿಕೆ ಸೇರಿದಂತೆ ಹಲವಾರು ಬಗೆಯ ಉಪಜೀವನ ಕ್ರಮ ಅನುಸರಿಸುತ್ತಾರೆ.
ಗ್ರಾಮಕ್ಕೆ ಹೊಂದಿಕೊಂಡು ಕೆರೆ ನಿರ್ಮಿಸಿಕೊಂಡು, ಅದರ ಮೂಲಕ ನೀರನ ದಾಹ ನೀಗಿಸಿಕೊಂಡಿದ್ದಾರೆ. ಕೃಷಿ ಪಂಪ್‌ಸೆಟ್‌ಗಳಿಗೂ ಇದರಿಂದ ಅನುಕೂಲವಾಗಿದೆ.ದೇಸಿಯ ಆಕಳು:
ಗ್ರಾಮದಲ್ಲಿ ನಾಲ್ಕಾರು ಕುಟುಂಬಗಳು ದೇಶಿಯ ಆಕಳನ್ನೇ ಜೋಪಾನ ಮಾಡಿಕೊಂಡು ಬಂದಿದ್ದಾರೆ. ಒಬ್ಬೊಬ್ಬರ ಬಳಿ ನಾಲ್ಕೈದು ನೂರು ದೇಶಿಯ ತಳಿಯ ಆಕಳುಗಳಿವೆ. ಇವುಗಳನ್ನು ನಾಡಿನಾದ್ಯಂತ ಮೇಯಿಸಲು ಹೋಗುತ್ತಾರೆ. ಅವುಗಳನ್ನು ಸಂರಕ್ಷಣೆ ಮಾಡಿಕೊಂಡು ಬಂದಿರುವ ಹಿರಿಮೆ ಇವರದು. ಹೀಗಾಗಿಯೇ ಗಾಂಧಿ ತತ್ವದಲ್ಲಿ ಕಾಮನೂರು ಗ್ರಾಮಸ್ಥರು ಹೆಜ್ಜೆ ಹಾಕುತ್ತಾ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ.ಕೋಟ್
ನಮ್ಮೂರಲ್ಲಿ ಸಿರಿಧಾನ್ಯವನ್ನು ಬೆಳೆಯುವ ಮೂಲಕ ಸುಸ್ಥಿರ ಬದುಕು ಕಟ್ಟಿಕೊಂಡಿದ್ದಾರೆ. ನಾನು ಸಹ ಅದನ್ನೇ ಮಾಡುತ್ತಿದ್ದೇನೆ.ಬಸಪ್ಪ ವಂಕಲಕುಂಟಿ ಗ್ರಾಮಸ್ಥ
ಕೋಟ್ನಮ್ಮೂರಲ್ಲಿ ಕಳೆದ 30 ವರ್ಷಗಳಿಂದ ಮದ್ಯ, ಮಾಂಸ, ಗುಟ್ಕಾ, ಸಿಗರೇಟ್ ಸೇರಿದಂತೆ ಯಾವುದೇ ದುಶ್ಚಟಕ್ಕೆ ಅವಕಾಶ ಇಲ್ಲ. ಮಾರಾಟವನ್ನು ಸಂಪೂರ್ಣವಾಗಿ ನಿಷಿದ್ಧ ಮಾಡಿದ್ದೇವೆ.
ಈಶಪ್ಪ ಬಂಗಾರಿ ಗ್ರಾಪಂ ಸದಸ್ಯಕೋಟ್
ಕಾಮನೂರು ಗ್ರಾಮದ ಜನರು ನಿಜಕ್ಕೂ ಗಾಂಧೀಜಿ ಅವರ ಕನಸು ನನಸಾಗುವಂತೆ ಜೀವನ ನಡೆಸುತ್ತಿದ್ದಾರೆ. ಇಂಥ ಕಾಲಘಟ್ಟದಲ್ಲಿಯೂ ಮದ್ಯ, ಗುಟ್ಕಾಗೆ ಅವಕಾಶ ನೀಡದೆ ಇರುವುದು ನಿಜಕ್ಕೂ ಶ್ಲಾಘನೀಯ. ಇದಕ್ಕಾಗಿಯೇ ಗಾಂಧಿ ಬಳಗದಿಂದ ಗ್ರಾಮಕ್ಕೆ ಪಾದಯಾತ್ರೆ ಕೈಗೊಂಡಿದ್ದೇವೆ.ಪ್ರಾಣೇಶ ಪೂಜಾರ ಗಾಂಧಿಬಳಗ
1ಕೆಪಿಎಲ್21 ಕಾಮನೂರು ಗ್ರಾಮದಲ್ಲಿ ಸ್ವಚ್ಛತೆಗೂ ಆದ್ಯತೆ ನೀಡಿರುವುದು.1ಕೆಪಿಎಲ್22 ಕಾಮನೂರು ಗ್ರಾಮದಲ್ಲಿಲ್ಲ ಗುಟ್ಕಾ, ಸಿಗರೇಟು ಮಾರಾಟ.