ಅಜೀಜಅಹ್ಮದ ಬಳಗಾನೂರ
ನನ್ನ ಮಗ ಸೈನ್ಯ ಸೇರಬೇಕು ಅನ್ನೊ ಕನಸು ಕಂಡಿದ್ದಾ, ಆದ್ರ ಆ ದೇವ್ರು ನಮ್ಮ ಬಾಳಲ್ಲಿ ಆಟವಾಡಿ ಅವನನ್ನ ತನ್ನತ್ರ ಕರೆದುಕೊಂಡು ಬಿಡ್ತು. ಬಾಳಿ ಬದುಕಿ, ಕುಟುಂಬಕ್ಕೆ ಬೆನ್ನಲುಬು ಆಗಬೇಕಾದ ಮಗನನ್ನ ಕಳಕೊಂಡೀನಿ. ನನ್ನ ಈ ಪಾಡು ಯಾವ ತಾಯಿಗೂ ಬರಬಾಡ್ದು...ಈಚೆಗೆ ಇಲ್ಲಿನ ಸಾಯಿ ನಗರದ ಅಚ್ಚವ್ವನ ಕಾಲನಿಯಲ್ಲಿ ಸಿಲಿಂಡರ್ ಸೋರಿಕೆಯಿಂದ ನಡೆದ ಅಗ್ನಿ ಅವಘಡದಲ್ಲಿ ಗಾಯಗೊಂಡು ಮೃತಪಟ್ಟ ಅಯ್ಯಪ್ಪ ಮಾಲಾಧಾರಿ ಸಂಜಯ್ ಸವದತ್ತಿ (17) ತಾಯಿಯ ನೋವಿನ ನುಡಿಗಳು. ಈ ಅವಘಡದಲ್ಲಿ 9 ಜನ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೇ 8 ಜನ ಮೃತಪಟ್ಟಿದ್ದರು. ಇವರಲ್ಲಿ ಸಂಜಯ್ ಸವದತ್ತಿ ಕೂಡ ಒಬ್ಬ. ಮೃತ ಸಂಜಯ ತಂದೆ ಪ್ರಕಾಶ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪುತ್ರ ಸಂಜಯನನ್ನು ಕಳೆದುಕೊಂಡಿದ್ದು, 13 ವರ್ಷದ ಪುತ್ರಿ ಇದ್ದಾಳೆ.ಸೈನ್ಯ ಸೇರುವ ಕನಸು ಕಂಡಿದ್ದ:
ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಸಂಜಯ್ 9 ಮತ್ತು 10ನೇ ತರಗತಿಯನ್ನು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಕಲಿತಿದ್ದನು. ನಗರದಲ್ಲಿಯೇ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದನು.ಚಿಕ್ಕಂದಿನಿಂದಲೂ ಸಂಜಯನಿಗೆ ಸೈನ್ಯ ಸೇರುವ ಕನಸಿತ್ತು. ಈ ಕುರಿತು ತಮ್ಮ ತಂದೆ-ತಾಯಿ, ದೊಡ್ಡಪ್ಪ ರಾಜಶೇಖರ ಅವರ ಬಳಿಯೂ ಹೇಳಿಕೊಂಡಿದ್ದ. ಕುಟುಂಬಸ್ಥರೂ ಸಹ ಇವನ ಆಸೆಗೆ ಬೆನ್ನುಲುಬಾಗಿ ನಿಂತಿದ್ದರು. ಮಗನ ಆಸೆ ಕಂಡು ತಂದೆ ಹಾಗೂ ದೊಡ್ಡಪ್ಪ ಇಬ್ಬರೂ ಸೇರಿ ಕಳೆದ 6 ತಿಂಗಳಿನಿಂದ ಸೂಕ್ತ ತರಬೇತಿ ನೀಡುತ್ತಿದ್ದರು.ಕೊರೋನಾ ಸಂಕಷ್ಟದಲ್ಲಿ:
ತನಗೆ ತಿಳಿವಳಿಕೆ ಬಂದಾಗಿನಿಂದಲೂ ತಾನೇ ದುಡಿದು ಬಂದ ಹಣದಲ್ಲಿ ಪುಸ್ತಕ, ಬಟ್ಟೆ ಖರೀದಿಸುತ್ತಿದ್ದ. ಉಳಿದ ಹಣವನ್ನು ಮನೆ ನಿರ್ವಹಣೆಗೆ ನೀಡುತ್ತಿದ್ದ. ಬಾಳಿ ಬದುಕಿ ನಮ್ಮ ಜೀವನಕ್ಕೆ ಆಸರೆಯಾಗಬೇಕಿದ್ದ ಮಗನನ್ನು ಕಳೆದುಕೊಂಡಿದ್ದೇನೆ ಎಂದು ಮೃತನ ತಂದೆ ಪ್ರಕಾಶ ಸವದತ್ತಿ ಹೇಳಿದರು.