ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ಎರಡನೇ ಬೆಳೆಗೆ ನೀರು ಬಿಡುವ ಕುರಿತು ಸರ್ಕಾರ ತಕ್ಷಣ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದಲ್ಲಿ ನವೆಂಬರ್ 3ರಂದು ಕಂಪ್ಲಿಯಲ್ಲಿ ಸಂಪೂರ್ಣ ಬಂದ್ ಹಾಗೂ ನವೆಂಬರ್ 7ರಂದು ಹೊಸಪೇಟೆ ಹೈವೇ ಬಂದ್ ನಡೆಸಿ ಪ್ರತಿಭಟಿಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಎಚ್ಚರಿಸಿದರು.ಪಟ್ಟಣದ ಅತಿಥಿಗೃಹ ಆವರಣದಲ್ಲಿ ಶುಕ್ರವಾರ ನಡೆದ ರೈತರ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ನಿರ್ಲಕ್ಷ್ಯ ಧೋರಣೆ ವಿರುದ್ಧ ರೈತರು ಏಕತೆಯಿಂದ ಹೋರಾಟ ನಡೆಸಬೇಕೆಂದು ಕರೆ ನೀಡಿದರು.
ಮುನಿರಾಬಾದಿನಲ್ಲಿ ಐಸಿಸಿ ಸಭೆ ತಕ್ಷಣ ಕರೆಯಬೇಕು. ರೈತರೊಂದಿಗೆ ನೇರವಾಗಿ ಚರ್ಚಿಸಿ ಎರಡನೇ ಬೆಳೆಗೆ ನೀರು ಬಿಡುಗಡೆ ಮಾಡುವ ದಿನಾಂಕ ಪ್ರಕಟಿಸಬೇಕು. ಇಲ್ಲದಿದ್ದರೆ ರೈತರು ಹೋರಾಟದ ಹಾದಿ ಹಿಡಿಯುವುದು ನಿಶ್ಚಿತ. ನವೆಂಬರ್ ಕ್ರಾಂತಿಯ ಹೆಸರಲ್ಲಿ ರೈತರಲ್ಲಿ ಭ್ರಾಂತಿ ಹುಟ್ಟಿಸುತ್ತಿದ್ದಾರೆ. ರೈತರ ಹಿತದ ಬಗ್ಗೆ ಯಾವ ರಾಜಕಾರಣಿಗಳಿಗೂ ಕಾಳಜಿ ಇಲ್ಲ. ಜಲಾಶಯದ ರಕ್ಷಣೆ ಎಂಬ ನೆಪದಲ್ಲಿ ರೈತರಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.ಜಲಾಶಯದಲ್ಲಿ ಪ್ರಸ್ತುತ 80 ಟಿಎಂಸಿ ನೀರು ಲಭ್ಯವಿದೆ. ಫೆಬ್ರವರಿವರೆಗೆ ಬಳಕೆ ಸಾಧ್ಯವಿದೆ. ಫೆಬ್ರವರಿಯೊಳಗೆ ಗೇಟ್ ಕೂಡಿಸುವ ಕೆಲಸ ಮುಗಿಸಿದರೆ ಎರಡನೇ ಬೆಳೆಗೆ ನೀರು ಬಿಡಬಹುದು. ತಂತ್ರಜ್ಞ ಕನ್ನಯ್ಯ ನಾಯ್ಡು ಸಲಹೆಯಂತೆ ಮೂರು ತಿಂಗಳಲ್ಲೇ ಎಲ್ಲ ಗೇಟ್‌ಗಳನ್ನು ಕೂಡಿಸುವುದು ತಾಂತ್ರಿಕವಾಗಿ ಸಾಧ್ಯ ಎಂದರು.
ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ರೈತರೊಂದಿಗೆ ಯಾವುದೇ ಚರ್ಚೆ ನಡೆಸದೇ ಏಕಾಏಕಿ ಎರಡನೇ ಬೆಳೆಗೆ ನೀರು ಕೇಳಬೇಡಿ ಎಂಬ ಹೇಳಿಕೆ ನೀಡಿರುವುದು ರೈತ ವಿರೋಧಿ ಕ್ರಮವಾಗಿದೆ.ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರು ರೈತರ ಪರ ಧ್ವನಿ ಎತ್ತಬೇಕು, ಸರ್ಕಾರದ ಮೌನವನ್ನು ಮುರಿಯಬೇಕು. ವ್ಯಾಪಾರಸ್ಥರು ಹಾಗೂ ಎಲ್ಲ ಸಂಘ ಸಂಸ್ಥೆಗಳಿಗೆ ಕಂಪ್ಲಿ ಬಂದ್‌ಗೆ ಸಹಕಾರ ನೀಡುವಂತೆ ಮನವಿ ಮಾಡಿದರು.ಸಭೆಯಲ್ಲಿ ರೈತ ಸಂಘದ ಪ್ರಮುಖರಾದ ವಿ.ವೀರೇಶ, ತಿಮ್ಮಪ್ಪ ನಾಯಕ, ಚೆಲ್ಲಾ ವೆಂಕಟನಾಯ್ಡು, ಕೊಟ್ಟೂರು ರಮೇಶ್, ಡಿ.ಮುರಾರಿ, ಟಿ.ಗಂಗಣ್ಣ, ವೆಂಕಟರಮಣ, ನಾಗರಾಜ, ವಿ.ಟಿ.ರಾಜು, ಬಿಂಗಿ ವಿರುಪಣ್ಣ, ಈರಣ್ಣ, ಮಲ್ಲಪ್ಪ ಸೇರಿದಂತೆ ಅನೇಕ ರೈತರು ಹಾಜರಿದ್ದರು.