ಕಂಪ್ಲಿ ಗಂಗಾವತಿ ಸಂಪರ್ಕ ಸೇತುವೆಗೆ ಒಂದೇ ತಿಂಗಳಲ್ಲಿ 3ನೇ ಬಾರಿ ಮುಳುಗಡೆ ಭೀತಿ

KannadaprabhaNewsNetwork | Published : Aug 12, 2024 1:07 AM

ಸಾರಾಂಶ

ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್‌ನ ಚೈನ್ ಲಿಂಕ್ ತುಂಡಾದ ಹಿನ್ನೆಲೆಯಲ್ಲಿ ಜಲಾಶಯದಿಂದ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿಬಿಡಲಾಗಿದೆ.

ಬಿಎಚ್‌ಎಂ ಅಮರನಾಥ ಶಾಸ್ತ್ರಿ

ಕಂಪ್ಲಿ: ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್‌ನ ಚೈನ್ ಲಿಂಕ್ ತುಂಡಾದ ಹಿನ್ನೆಲೆಯಲ್ಲಿ ಜಲಾಶಯದಿಂದ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿಬಿಡಲಾಗಿದ್ದು, ಇದೀಗ ಒಂದೇ ತಿಂಗಳಲ್ಲಿ 3ನೇ ಬಾರಿ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆಗೆ ಮುಳುಗಡೆಯ ಭೀತಿ ಎದುರಾಗಿದೆ. ಅಲ್ಲದೇ ರೈತರಲ್ಲಿ ಹಾಗೂ ನದಿಪಾತ್ರ ಜನರಲ್ಲಿ ಆತಂಕ ಹೆಚ್ಚಾಗಿದೆ.

ಜು. 25ರಿಂದ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿಯಬಿಡಲಾಗಿದೆ. ಜು. 26ರಿಂದ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇನ್ನು ಜು. 30ರಂದು ನದಿಯಲ್ಲಿನ ನೀರಿನ ಮಟ್ಟ ಕಡಿಮೆಯಾಗಿದ್ದು, ಸೇತುವೆ ಮೇಲೆ ಸಿಕ್ಕಿ ಹಾಕಿಕೊಂಡ ತ್ಯಾಜ್ಯ ತೆರವು ಕಾರ್ಯ ನಡೆಸಲಾಗಿತ್ತು. ಸೇತುವೆಯ ರಕ್ಷಣಾ ಕಂಬಿಗಳಿಗೆ ಅಳವಡಿಸಿರುವ ಕರ್ನಾಟಕ- ಆಂಧ್ರ ಸಂಪರ್ಕಿಸುವ ಆಪ್ಟಿಕಲ್ ಫೈಬರ್‌ ಕೇಬಲ್‌ಗೆ ಹಾನಿಯಾಗಿದ್ದು, ಹೊಸಪೇಟೆ ಬಿಎಸ್‌ಎನ್‌ಎಲ್ ಕಚೇರಿ ಎಇ ಮತ್ತು ಸಿಬ್ಬಂದಿ ಪರೀಕ್ಷಿಸಿ ತಾತ್ಕಾಲಿಕ ದುರಸ್ತಿಗೊಳಿಸಿದ್ದರು. ಇನ್ನೇನು ಸೇತುವೆ ಮೇಲೆ ಹರಿಯುತ್ತಿದ್ದ ನೀರಿನ ಪ್ರಮಾಣ ಕಡಿಮೆಯಾಗಿದ್ದು ಇಂದೋ ನಾಳೆಯೋ ಸೇತುವೆ ಮೇಲೆ ಸಂಚಾರಕ್ಕೆ ಅನುಕೂಲ ಕಲ್ಪಿಸಬಹುದೆಂದು ಸಾರ್ವಜನಿಕರು ಕಾಯುತ್ತಿದ್ದರು. ಆದರೆ ಜು. 31ರಂದು ನದಿಗೆ ಹೆಚ್ಚಿನ ಮಟ್ಟದಲ್ಲಿ ನೀರು ಹರಿಬಿಟ್ಟ ಹಿನ್ನೆಲೆ ಸೇತುವೆ ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡಿತ್ತು. ಆ. 4ರಿಂದ ನದಿಗೆ ಹರಿಬಿಡುವ ನೀರಿನ ಪ್ರಮಾಣದಲ್ಲಿ ಇಳಿಕೆಯಾದ ಕಾರಣ ಸೇತುವೆ ಜಲದಿಗ್ಬಂಧನದಿಂದ ಮುಕ್ತಿಗೊಂಡಿತ್ತು. ಬಳಿಕ ಸೇತುವೆ ಮೇಲಿನ ಸ್ವಚ್ಛತಾ ಕಾರ್ಯ ನಡೆಸಿ ಆ. 6ರಿಂದ ಸ್ಥಳೀಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೇತುವೆ ಮೇಲೆ ಕಾಲ್ನಡಿಗೆಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಇದರಿಂದಾಗಿ ನಿತ್ಯ ರೈತರು, ವಿದ್ಯಾರ್ಥಿಗಳು, ನೌಕರರು ಹಾಗೂ ಸಾರ್ವಜನಿಕರು ಬಸ್ ನಿಲ್ದಾಣದಿಂದ ಸೇತುವೆ ವರೆಗೂ ಆಟೋ ಅಥವಾ ತಮ್ಮ ವಾಹನಗಳಲ್ಲಿ ಸಂಚರಿಸಿ ಸೇತುವೆ ಮೇಲೆ ನಡೆದುಕೊಂಡು ಹೋಗಿ ಬಳಿಕ ಚಿಕ್ಕ ಜಂತಕಲ್‌ನಿಂದ ಆಟೋ ಮೂಲಕ ಗಂಗಾವತಿಗೆ ತೆರಳುತ್ತಿದ್ದರು.

ಸೇತುವೆಯ ರಕ್ಷಣಾ ಕಂಬಿಗಳ ದುರಸ್ತಿ ಕಾರ್ಯ ಭರದಿಂದ ಸಾಗಿತ್ತು. ಇನ್ನೇನು ಕೆಲವು ದಿನಗಳು ಕಳೆದರೆ ದ್ವಿಚಕ್ರ ವಾಹನಕ್ಕೂ ಅವಕಾಶ ಕಲ್ಪಿಸಬಹುದೆಂಬ ಭರವಸೆಯಲ್ಲಿಯೇ ಸಾರ್ವಜನಿಕರಿದ್ದರು. ಇದೀಗ ಜಲಾಶಯದ ಗೇಟ್ ನಲ್ಲಿ ಚೈನ್ ಲಿಂಕ್ ತುಂಡಾದ ಹಿನ್ನೆಲೆ ಮತ್ತೆ ಸೇತುವೆಗೆ ಮುಳುಗಡೆ ಭೀತಿ ಎದುರಾಗಿದೆ.

ರಾತ್ರೋರಾತ್ರಿ ಅಧಿಕಾರಿಗಳು ಸೇತುವೆ ಮೇಲೆ ಕಾಲ್ನಡಿಗೆಗೂ ನಿರ್ಬಂಧ ಹೇರಿದ್ದಾರೆ. ಭಾನುವಾರ ಬೆಳಗ್ಗೆ ಗಂಗಾವತಿಗೆ ತೆರಳಲೆಂದು ಸೇತುವೆ ಬಳಿ ಆಗಮಿಸಿದ್ದಂತಹ ಸಾರ್ವಜನಿಕರೆಲ್ಲ ವಾಪಸಾಗಿದ್ದಾರೆ. ನದಿ ಪಾತ್ರದ ಜಮೀನುಗಳಿಗೆ ಮತ್ತೆ ನೀರು ನುಗ್ಗಿದ್ದು, ಕಬ್ಬು, ಬಾಳೆ, ಬತ್ತ, ಸೊಪ್ಪು ಇತರ ಬೆಳೆ ಜಲಾವೃತಗೊಂಡಿವೆ. ಉತ್ತರಾದಿಕ್ರಿಯಾ ಮಂಟಪ, ಹೊಳೆ ಆಂಜನೇಯ ಗುಡಿ, ಮಾಧವ ತೀರ್ಥರ ಬೃಂದಾವನ ಮುಳುಗಡೆ ಭೀತಿಯಲ್ಲಿವೆ.

ಸೇತುವೆ ಮೇಲಿನ ವಾಹನಗಳ ಸಂಚಾರ ಸ್ಥಗಿತಗೊಂಡು ಈ ವರೆಗೆ 17 ದಿನಗಳು ಕಳೆದಿವೆ. ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಉಲ್ಬಣವಾಗಿದೆ. ನದಿ ಪಾತ್ರದ ಬಳಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಸ್ಥಳಕ್ಕೆ ಎಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಲ್ಲೋ ಸುರಿದ ಮಳೆಗೆ ಇಲ್ಲಿನ ಜನ ಪ್ರವಾಹದ ಭೀಕರತೆ ಎದುರಿಸುತ್ತಿದ್ದಾರೆ. ಕಡೆಬಾಗಿಲು ಸೇತುವೆ ಮೂಲಕ ಗಂಗಾವತಿ ತೆರಳುವ ಪರಿಸ್ಥಿತಿ ಮಾತ್ರ ಬದಲಾಗುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ರೋಸಿ ಹೋಗಿದ್ದಾರೆ.

Share this article