ಕನಕದಾಸರು ಸಮಾನತೆಯ ಹರಿಕಾರ: ತಂಗಡಗಿ

KannadaprabhaNewsNetwork |  
Published : Nov 28, 2026, 01:45 AM IST
DKS | Kannada Prabha

ಸಾರಾಂಶ

ಕನಕದಾಸರ ಕೀರ್ತನೆಗಳು, ಹೊಗಳುವಿಕೆಗೆ ಸೀಮಿತವಾಗಿರದೆ ಸಮಾಜದ ಅಂಕು-ಡೊಂಕು ತಿದ್ದುವ ಕೃತಿಗಳಾಗಿ ಸಾಮಾಜಿಕ ಸಮಾನತೆಯ ಹೊಸ ದಾರಿ ತೋರುತ್ತಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ಅಭಿಪ್ರಾಯಪಟ್ಟಿದ್ದಾರೆ.

-ಅವರ ಜೀವನ, ಸಾಹಿತ್ಯ ಇಂದಿಗೂ ಪ್ರಸ್ತುತ: ಸಚಿವ । ಡಾ.ಎಚ್‌.ದಂಡಪ್ಪರಿಗೆ ಕನಕಶ್ರೀ ಪ್ರಶಸ್ತಿ ಪ್ರದಾನ । ಕನಕರ ಸಾಹಿತ್ಯದ ಮರು ಮುದ್ರಣಕ್ಕೆ ಕ್ರಮ

ಕನ್ನಡಪ್ರಭ ವಾರ್ತೆ ಬೆಂಗಳೂರು

ಕನಕದಾಸರ ಕೀರ್ತನೆಗಳು, ಹೊಗಳುವಿಕೆಗೆ ಸೀಮಿತವಾಗಿರದೆ ಸಮಾಜದ ಅಂಕು-ಡೊಂಕು ತಿದ್ದುವ ಕೃತಿಗಳಾಗಿ ಸಾಮಾಜಿಕ ಸಮಾನತೆಯ ಹೊಸ ದಾರಿ ತೋರುತ್ತಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಡಾ.ಎಚ್‌.ದಂಡಪ್ಪ ಅವರಿಗೆ ಕನಕಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಕನಕದಾಸರ ಜೀವನ, ಸಾಹಿತ್ಯ ಮತ್ತು ಸಾಮಾಜಿಕ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ. ತಮ್ಮ ಬದುಕನ್ನು ಭಕ್ತಿ, ಸಾಹಿತ್ಯ ಮತ್ತು ಸಾಮಾಜಿಕ ಜಾಗೃತಿಗಾಗಿ ಮುಡಿಪಾಗಿಟ್ಟರು. ಅವರು ಜಾತಿ ತಾರತಮ್ಯ, ಮೇಲು-ಕೀಳು ಭಾವನೆ, ಸಾಮಾಜಿಕ ಅಸಮಾನತೆ ಮತ್ತು ಶೋಷಣೆ ವಿರುದ್ಧ ತಮ್ಮ ಸಾಹಿತ್ಯದ ಮೂಲಕ ಎತ್ತಿದ ಮಹಾನ್ ಸಾಮಾಜಿಕ ಚಿಂತಕ ಕನಕದಾಸರು ಎಂದು ಹೇಳಿದರು.

ಭಕ್ತಿಗೆ ಜಾತಿಯಿಲ್ಲ:

ಉಡುಪಿಯ ಶ್ರೀಕೃಷ್ಣನ ದರ್ಶನಕ್ಕೆ ತೆರಳಿದ್ದ ಕನಕದಾಸರಿಗೆ ಅಂದಿನ ಸಾಮಾಜಿಕ ನಿರ್ಬಂಧಗಳಿಂದಾಗಿ ದೇವಾಲಯದೊಳಗೆ ಪ್ರವೇಶಿಸಲು ಅವಕಾಶ ದೊರೆಯದ ಘಟನೆ ಹಾಗೂ ಅವರ ಭಕ್ತಿಗೆ ಶ್ರೀಕೃಷ್ಣನೇ ತಿರುಗಿ ದರ್ಶನ ನೀಡಿದ ಐತಿಹ್ಯ ಸಾಮಾಜಿಕ ಸಮಾನತೆಯ ಮಹತ್ವ ಸಾರುತ್ತದೆ. ದೇವರು ಎಲ್ಲರಿಗೂ ಸೇರಿದವನು. ಭಕ್ತಿಗೆ ಜಾತಿಯಿಲ್ಲ, ಮಾನವೀಯತೆಗೆ ಗಡಿಯಿಲ್ಲ, ಆತ್ಮಗೌರವಕ್ಕೆ ಅಡ್ಡಗೋಡೆಯಿಲ್ಲ ಎಂಬ ಸಂದೇಶ ಈ ಘಟನೆ ನೀಡುತ್ತದೆ. ದೇವರ ಸನ್ನಿಧಿಯಲ್ಲಿಯೂ ಮನುಷ್ಯರನ್ನು ಜಾತಿಯ ಆಧಾರದ ಮೇಲೆ ವಿಭಜಿಸುವುದು ಅರ್ಥಹೀನ ಎಂಬುದನ್ನು ನಾವು ಅರಿತುಕೊಳ್ಳಬೇಕು ಎಂದು ತಿಳಿಸಿದರು.

ಸಮಗ್ರ ಸಾಹಿತ್ಯ ಮರುಮುದ್ರಣ:

ಕನಕದಾಸ ಮತ್ತು ತತ್ವಪದಕಾರ ಸಂಶೋಧನಾ ಕೇಂದ್ರದಿಂದ ಕನಕದಾಸರ ಸಮಗ್ರ ಸಾಹಿತ್ಯದ ಐದು ಸಂಕಲನ ಮರು ಮುದ್ರಣಕ್ಕೆ ಕ್ರಮವಹಿಸಲಾಗುತ್ತದೆ. ಮಕ್ಕಳಿಗಾಗಿ ಸಂತಕೋಶ ಕುರಿತು ಐದು ಪುಸ್ತಕ, ಕನಕದಾಸರ ಕಾವ್ಯಗಳ ಜನಪ್ರಿಯ ಆವೃತ್ತಿಗಳನ್ನು ಹೆಚ್ಚು ಮುದ್ರಣ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ, ರಾಷ್ಟ್ರೀಯ ಸಂತ ಕವಿ ಕನಕದಾಸ ಹಾಗೂ ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ, ಇಲಾಖೆ ಕಾರ್ಯದರ್ಶಿ ಮಂಜುಶ್ರೀ, ನಿರ್ದೇಶಕಿ ವಸುಂಧರಾ ಇದ್ದರು. --

ಅಧಿಕಾರಿಗಳ ವಿರುದ್ಧ ಸಮುದಾಯ

ಮುಖಂಡರ ಕಿಡಿ, ಸಭೆಗೆ ಬಹಿಷ್ಕಾರ

ಕನಕದಾಸರ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಬೇಕಿದ್ದ ವಾಹನಕ್ಕೆ ಸಮರ್ಪಕ ಅಲಂಕಾರ ಮಾಡದೆ ನಿರ್ಲಕ್ಷ್ಯಿಸಲಾಗಿದೆ ಎಂದು ಆರೋಪಿಸಿದ ಕುರುಬ ಸಮುದಾಯದ ಮುಖಂಡ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಚಿವ ಶಿವರಾಜ ತಂಗಡಗಿ ಅವರಿಗೂ ದೂರು ನೀಡಿದ್ದಲ್ಲದೆ, ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ ಬಹಿಷ್ಕರಿಸಿ ಹೊರ ನಡೆದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸಚಿವರು ಸಮಾಧಾನಪಡಿಸುವ ಪ್ರಯತ್ನ ಮಾಡಿದರೂ ಫಲಪ್ರದವಾಗಲಿಲ್ಲ. ಘಟನೆಯಿಂದ ಬೇಸರಗೊಂಡ ಸಚಿವರು, ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.---

ನಗರದ ರವೀಂದ್ರ ಕಲಾಕ್ಷೇತ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕನಕದಾಸರ ಜಯಂತಿಯಲ್ಲಿ ಡಾ.ಎಚ್‌.ದಂಡಪ್ಪ ಅವರಿಗೆ ಸಚಿವ ಶಿವರಾಜ ಎಸ್‌.ತಂಗಡಗಿ ಅವರು ‘ಕನಕಶ್ರೀ’ ಪ್ರಶಸ್ತಿ ಪ್ರದಾನ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಚಾರಿ ಕುರಿಗಾಹಿಗಳಿದ್ದಲ್ಲೇ ಪಡಿತರ ವಿತರಣೆಗೆ ಕ್ರಮ- ಸಿಎಂ ಡಿಕೆಶಿ ಭರವಸೆ
ಜಗತ್ತಿಗೆ ಮಾದರಿ ಸಂವಿಧಾನ ಕೊಟ್ಟಿದ್ದು ಅಂಬೇಡ್ಕರ್‌: ಕೆ.ಎಂ.ಸುರೇಶ