ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ನಂತರವೇ ವಿವಾಹ ಮಾಡಿ

KannadaprabhaNewsNetwork |  
Published : Dec 29, 2025, 03:15 AM IST
ಕನಕ ಜಯಂತಿ ಕಾರ್ಯಕ್ರಮ ಉದ್ಘಾಟಿಸುತ್ತಿರುವ ಸ್ವಾಮೀಜಿ. | Kannada Prabha

ಸಾರಾಂಶ

ಉರ್ವಸ್ಟೋರ್‌ ತುಳು ಭವನದಲ್ಲಿ ಕರಾವಳಿ ಕುರುಬರ ಸಂಘದ ಆಶ್ರಯದಲ್ಲಿ 538ನೇ ಕನಕ ಜಯಂತಿ ಆಚರಣೆಯ ಕಾರ್ಯಕ್ರಮ

ಮಂಗಳೂರು: ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ, ಅವರನ್ನು ವಿದ್ಯಾವಂತರನ್ನಾಗಿಸಿ. ಅವರು ಮುಂದೆ ಉತ್ತಮ ಉದ್ಯೋಗ ಸಂಪಾದಿಸಿಕೊಳ್ಳುತ್ತಾರೆ. ನಂತರ ಅವರಿಗೆ ಮದುವೆ ಮಾಡಿಸಿ ಎಂದು ಶ್ರೀ ಕನಕ ಗುರು ಪೀಠ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದ ಪುರಿ ಮಹಾಸ್ವಾಮೀಜಿ ಅವರು ಕರೆ ನೀಡಿದ್ದಾರೆ.

ನಗರದ ಉರ್ವಸ್ಟೋರ್‌ ತುಳು ಭವನದಲ್ಲಿ ಕರಾವಳಿ ಕುರುಬರ ಸಂಘದ ಆಶ್ರಯದಲ್ಲಿ 538ನೇ ಕನಕ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ದೇವರು ನಮ್ಮಲ್ಲಿರುವ ನಿಷ್ಕಲ್ಮಶ ಭಕ್ತಿಯನ್ನು ಮಾತ್ರ ಸ್ವೀಕರಿಸುತ್ತಾನೆ. ದೇವರಿಗೆ ಅಧಿಕಾರ, ಅಂತಸ್ತು ಬೇಕಾಗಿಲ್ಲ. ನಿಷ್ಕಲ್ಮಶವಾದ ಭಕ್ತಿಯನ್ನು ಸಮರ್ಪಣಾ ಭಾವದಿಂದ ಸ್ವೀಕರಿಸುವ ಹೃದಯ ವೈಶಾಲ್ಯತೆ ಭಗವಂತನಲ್ಲಿದೆ ಎಂದು ಹೇಳಿದ ಅವರು, ಜ್ಞಾನವಿಲ್ಲದ ಬದುಕು ಯಾತಕೋ ಮನುಜ ಎಂದು ಭಕ್ತ ಕನಕದಾಸರು ಕೇಳುತ್ತಿದ್ದರು. ಜ್ಞಾನವೇ ಪ್ರಧಾನವಾದುದು. ಹಾಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದರು.

ಹಿಂದಿನ ಕಾಲದಲ್ಲಿ ಧಾರ್ಮಿಕ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿದುಕೊಳ್ಳಲು ಕಷ್ಟವಾಗುತ್ತಿತ್ತು. ಬಸವಣ್ಣ, ಕನಕದಾಸರು, ಪುರಂದರದಾಸರು ಮೊದಲಾದ ದಾಸವರೇಣ್ಯರು ಧಾರ್ಮಿಕ ವಿಚಾರಗಳನ್ನೊಳಗೊಂಡ ಪದ್ಯಗಳನ್ನು ಸರಳವಾದ ಭಾಷೆಯಲ್ಲಿ ಬರೆದು ಹಾಡಿ ಜನರ ಮಧ್ಯೆ ಪಸರಿಸುತ್ತಿದ್ದರು ಎಂದರು.

ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌ ಶ್ರೀಧರ್‌ ಟಿ.ಡಿ. ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಯುವ ಸಾಹಿತಿ ಪ್ರವೀಣ ವೈ. ಬೆನಕನವಾರಿ ಕನಕ ಸಂದೇಶ ನೀಡಿದರು. ಕರಾವಳಿ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗುರುಮೂರ್ತಿ ಶುಭ ಹಾರೈಸಿದರು. ಕರಾವಳಿ ಕುರುಬರ ಸಂಘದ ಅಧ್ಯಕ್ಷ ನಿರಂಜನ್‌ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಡಾ.ಕೆ.ಇ. ಪ್ರಕಾಶ್‌, ಪ್ರಧಾನ ಕಾರ್ಯದರ್ಶಿ ನವೀನ್ ಗಾಂಧಿನಗರ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.

ಕನಕದಾಸರ ಭಾವಚಿತ್ರ ಮೆರವಣಿಗೆ:

ಕಾರ್ಯಕ್ರಮದ ಆರಂಭದಲ್ಲಿ ಉರ್ವಸ್ಟೋರ್‌ನ ಶಾರದಾ ಮಾನಸ ಮಂಟಪದಿಂದ ತುಳು ಭವನದ ತನಕ ಕುಣಿತ ಭಜನೆ, ಡೊಳ್ಳು ಕುಣಿತ, ಕಲಶ, ಕುಂಭ ಸಹಿತ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಯಿತು. ಲೋಕೋಪಯೋಗಿ ಇಲಾಖೆಯ ಎಇಇ ಶ್ರೀಧರ್ ಟಿ.ಡಿ ಮೆರವಣಿಗೆಗೆ ಚಾಲನೆ ನೀಡಿದರು. ಕಾರ್ಯಕ್ರಮ ಆರಂಭಕ್ಕೆ ಮೊದಲು ಶೃಂಗೇರಿಯ ಶಾರದಾ ಅಂಧ ಕಲಾವಿದರಿಂದ ಭಕ್ತಿ ಗೀತೆಗಳ ಗಾಯನ ನಡೆಯಿತು.

ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಶಿವಾನಂದ ಯರಝೇರಿ ಪ್ರಾಯೋಜಿಸಿದ ವಿದ್ಯಾರ್ಥಿ ವೇತನವನ್ನು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯ ಸಾಧಕ 29 ವಿದ್ಯಾರ್ಥಿಗಳಿಗೆ ನೀಡಲಾಯಿತು. ಎಜುಕಾರುಣ್ಯ ಎಜುಕೇಶನಲ್‌ ಮತ್ತು ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ಶ್ರೀಶಾ ಶೆಟ್ಟಿ ಅಬ್ಬೆಟ್ಟು ಅವರಿಗೆ 50 ಸಾವಿರ ರು. ಪ್ರೋತ್ಸಾಹಕ ನಗದು ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕ ಸಂಸ್ಕೃತಿ ಸಂವೇದನೆಗೆ ಸಂಬಂಧಿಸಿದ್ದು: ಬರಗೂರು
ಜಿಬಿಎ ಚುನಾವಣೆಗೆ ಕಾಂಗ್ರೆಸ್‌ ಅರ್ಜಿಗೆ ₹50 ಸಾವಿರ!