ಲಕ್ಷಾಂತರ ಭಕ್ತರ ನಡುವೆ ಕನಕಾಚಲಪತಿ ರಥೋತ್ಸವ

KannadaprabhaNewsNetwork | Published : Mar 22, 2025 2:02 AM

ಸಾರಾಂಶ

ಮೂಲಾ ನಕ್ಷತ್ರದಲ್ಲಿ ಸಂಜೆ (೪.೨೦ಕ್ಕೆ) ಆರಂಭಗೊಂಡ ರಥವು ೫.೩೫ರ ಸುಮಾರಿಗೆ ತನ್ನ ಮೂಲ ಸ್ಥಾನ ಸೇರಿತು. ರಥೋತ್ಸವ ವೀಕ್ಷಣೆಗೆ ಆಗಮಿಸಿದ್ದ ಜನರಿಂದ ರಾಜಬೀದಿಯು ತುಂಬಿಕೊಂಡಿತ್ತು.

ಕನಕಗಿರಿ:

ದಕ್ಷಿಣ ಭಾರತದ ಎತ್ತರ ತೇರು, ಐತಿಹಾಸಿಕ, ಪೌರಾಣಿಕ ಹಿನ್ನೆಲೆಯುಳ್ಳ ಶ್ರೀ ಕನಕಾಚಲಪತಿ ಲಕ್ಷ್ಮೀ ನರಸಿಂಹಸ್ವಾಮಿಯ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

ಬೆಳಗ್ಗೆ ರಥಕ್ಕೆ ಯಾಜ್ಞಿಕರಿಂದ ಹೋಮ, ಹವನ, ಅನ್ನಬಲಿ ಹಾಕುವ ಕಾರ್ಯಕ್ರಮ ನಡೆದವು. ಮೂಲಾ ನಕ್ಷತ್ರದಲ್ಲಿ ಸಂಜೆ (೪.೨೦ಕ್ಕೆ) ಆರಂಭಗೊಂಡ ರಥವು ೫.೩೫ರ ಸುಮಾರಿಗೆ ತನ್ನ ಮೂಲ ಸ್ಥಾನ ಸೇರಿತು. ರಥೋತ್ಸವ ವೀಕ್ಷಣೆಗೆ ಆಗಮಿಸಿದ್ದ ಜನರಿಂದ ರಾಜಬೀದಿಯು ತುಂಬಿಕೊಂಡಿತ್ತು.

ಮನೆಯ ಮೇಲ್ಚಾವಣಿಗಳ ಮೇಲೆ ಹತ್ತಿ ರಥ ಸಾಗುವುದನ್ನು ಭಕ್ತರು ಕಣ್ತುಂಬಿಕೊಂಡರು. ಹಗ್ಗ ಹಿಡಿದುಕೊಂಡಿದ್ದ ಭಕ್ತರು ಗೋವಿಂದಾ... ಗೋವಿಂದ... ಎನ್ನುತ್ತ ರಥ ಎಳೆದು ಧನ್ಯರಾದರು. ಉರಿ ಬಿಸಿಲನ್ನು ಲೆಕ್ಕಿಸದ ಭಕ್ತರು ತೇರನೆಳೆದರು. ಇನ್ನೂ ರಾಜಬೀದಿಯ ಅಲ್ಲಲ್ಲಿ ಅರವಟ್ಟಿಗೆ ನಿರ್ಮಿಸಿ ಭಕ್ತರಿಗೆ ಮಜ್ಜಿಗೆ, ಪಾನಕ ವಿತರಿಸಿದರು.

ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ, ದೇವರಿಗೆ ವಿಶಿಷ್ಟ ಹರಕೆ, ಸೇವೆ ಸಲ್ಲಿಸಿ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾದರು. ರಥವು ತೇರಿನ ಹನುಮಪ್ಪ ದೇವಸ್ಥಾನಕ್ಕೆ ತೆರಳುತ್ತಿದ್ದಂತೆ ಸುವರ್ಣಗಿರಿ ಸಂಸ್ಥಾನ ಮಠದ ಪೀಠಾಧಿಪತಿ ಡಾ. ಚನ್ನಮಲ್ಲಶ್ರೀಗಳು ಶ್ರೀಮಠದಿಂದ ರಥಕ್ಕೆ ಹೂಮಾಲೆ ಹಾಕಿ ಭಕ್ತಿ ಸಮರ್ಪಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು.

ಅಲ್ಲದೆ ವಿವಿಧ ಸಂಘಟನೆಯವರು, ಸ್ನೇಹಿತರ ಬಳಗದವರು, ಭಕ್ತರು ಹೂವಿನಹಾರಗಳನ್ನು ಮೆರವಣಿಗೆ ಮೂಲಕ ತಂದು ರಥಕ್ಕೆ ಅರ್ಪಿಸಿದರು.

ತಾಸಿನಲ್ಲೆ ಸ್ವಸ್ಥಾನಕ್ಕೆ ಸೇರಿದ ತೇರು:

ರಾಜಬೀದಿಯಲ್ಲಿ ರಥ ಸಿಲುಕುವುದು, ಟ್ರ್ಯಾಕ್ಟರ್, ಜೆಸಿಬಿಯಿಂದ ಎಳೆಸುವ ಮೂಲಕ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟು ಪ್ರಸಂಗಗಳು ಈ ಹಿಂದೆ ನಡೆದಿದ್ದವು. ಸಂಜೆ ಕತ್ತಲಾದರೂ ರಥ ಸ್ವಸ್ಥಾನಕ್ಕೆ ತರಲು ಸಾಧ್ಯವಾಗದೇ ಹರಸಾಹಸಪಟ್ಟ ಘಟನೆಗಳು ನಡೆದಿದ್ದವು. ಆದರೆ, ಈ ಬಾರಿ ರಥ ತಾಸಿನಲ್ಲೆ ತನ್ನ ಮೂಲ ಸ್ಥಾನಕ್ಕೆ ಬರುತ್ತಿದ್ದಂತೆ ನೆರೆದಿದ್ದ ಭಕ್ತ ಸಮೂಹ ಚಪ್ಪಾಳೆ ತಟ್ಟಿ ನಮಸ್ಕರಿಸಿದರು.

೨ ದಿನ ದಾಸೋಹ:

ಜಾತ್ರೆಗೆ ಆಗಮಿಸುವ ಭಕ್ತರಿಗೆ ದೇವಸ್ಥಾನ ಸಮಿತಿ ವತಿಯಿಂದ ಮಾ. ೨೦, ೨೧ರಂದು ದಾಸೋಹ ಹಮ್ಮಿಕೊಳ್ಳಲಾಗಿತ್ತು. ಭಕ್ತರಿಗಾಗಿ ರೊಟ್ಟಿ, ಪಲ್ಯ, ಅನ್ನ-ಸಾಂಬರ್‌, ಹುಗ್ಗಿ ಪಾಯಸ ಸಿದ್ಧಪಡಿಸಲಾಗಿತ್ತು. ಸಾವಿರಾರು ಜನ ಪ್ರಸಾದ ಸ್ವೀಕರಿಸಿದರು.

ಬಾಳೆಹಣ್ಣು ಎಸೆತಕ್ಕಿಲ್ಲ ಬ್ರೇಕ್:

ರಥೋತ್ಸವ ಸಂದರ್ಭದಲ್ಲಿ ಬಾಳೆಹಣ್ಣು ಎಸೆಯದೇ ಉತ್ತತ್ತಿ ಎಸೆದು ಸ್ವಚ್ಛತೆ ಕೈ ಜೋಡಿಸುವಂತೆ ತಾಲೂಕು ಆಡಳಿತ ಹೊರಡಿಸಿದ್ದ ಆದೇಶಕ್ಕೆ ಭಕ್ತರು ಸ್ಪಂದಿಸಿಲ್ಲ. ಪ್ರತಿವರ್ಷದಂತೆ ಈ ವರ್ಷವೂ ಹೂ-ಹಣ್ಣನ್ನು ಎಸೆದಿದ್ದು, ರಾಜಬೀದಿ ಬಾಳೆಹಣ್ಣಿನಿಂದ ತುಂಬಿಕೊಂಡಿರುವುದು ಕಂಡು ಬಂದಿತು.

ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ ಪಾಟೀಲ್, ಸಿಪಿಐ ರಂಗಪ್ಪ, ಪಿಐ ಎಂ.ಡಿ. ಫೈಜುಲ್ಲಾ, ತಹಸೀಲ್ದಾರ್ ವಿಶ್ವನಾಥ ಮುರಡಿ, ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ತಾಪಂ ಇಒ ರಾಜಶೇಖರ, ದೇವಸ್ಥಾನ ಸಮಿತಿ ಅಧ್ಯಕ್ಷ ನಾಗರಾಜ ತೆಗ್ಗಿಹಾಳ, ಕಾರ್ಯದರ್ಶಿ ಸಿದ್ದಲಿಂಗಸ್ವಾಮಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯವರು ಇದ್ದರು.ಎತ್ತಿನ ಬಂಡಿಯಲ್ಲಿ ಜಾತ್ರೆಗೆ ಬಂದ್ರು....

ಬಸ್, ಬೈಕ್‌ಗಳ ಸೌಕರ್ಯಗಳ ನಡುವೆಯೂ ಕೊಪ್ಪಳ ತಾಲೂಕಿನ ಚಾಮಲಾಪುರ ಗ್ರಾಮಸ್ಥರು ಎತ್ತಿನ ಬಂಡಿಯಲ್ಲಿ ಬಂದು ಕನಕಾಚಲನ ಜಾತ್ರೆ ಮಾಡಿದರು. ಇಲ್ಲಿನ ಎಪಿಎಂಸಿ ಯಾರ್ಡ್‌ನಲ್ಲಿ ಇಳಿದುಕೊಂಡು ಸ್ವತಃ ತಾವೇ ಅಡುಗೆ ತಯಾರಿಸಿ ದೇವರಿಗೆ ನೈವೇದ್ಯ ಅರ್ಪಿಸಿ ಭಕ್ತಿಭಾವ ಮೆರೆದರು.

Share this article