ವಿಜೃಂಭಣೆಯ ಕನಕಾಚಲಪತಿ ರಥೋತ್ಸವ

KannadaprabhaNewsNetwork |  
Published : Mar 12, 2026, 01:30 AM IST
ಕನಕಗಿರಿಯ ಶ್ರೀ ಕನಕಾಚಲಪತಿ ಜಾತ್ರೆ ನಿಮಿತ್ತ ಗುರುವಾರ ಮೂಲಾ ನಕ್ಷತ್ರದಲ್ಲಿ ಮಹಾ ರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. | Kannada Prabha

ಸಾರಾಂಶ

ಬೆಳಗ್ಗೆ ರಥದ ಮುಂಭಾಗದಲ್ಲಿ ಹೋಮ, ಹವನ, ಅನ್ನಬಲಿ ಹಾಕುವ ಕಾರ್ಯಕ್ರಮ ನಡೆದವು. ಮೂಲಾ ನಕ್ಷತ್ರದಲ್ಲಿ ೪.೩೦ಕ್ಕೆ ಆರಂಭಗೊಂಡ ರಥೋತ್ಸವವು ೫.೫೦ರ ಸುಮಾರಿಗೆ ತನ್ನ ಮೂಲ ಸ್ಥಾನ ಸೇರಿಕೊಂಡಿತು.

ಕನಕಗಿರಿ: ದಕ್ಷಿಣ ಭಾರತದ ಎತ್ತರದ ತೇರು, ಐತಿಹಾಸಿಕ, ಪೌರಾಣಿಕ ಹಿನ್ನೆಲೆಯುಳ್ಳ ಶ್ರೀ ಕನಕಾಚಲಪತಿ ಲಕ್ಷ್ಮೀ ನರಸಿಂಹಸ್ವಾಮಿ ರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಗುರುವಾರ ವಿಜೃಂಭಣೆಯಿಂದ ನೆರವೇರಿತು.

ಬೆಳಗ್ಗೆ ರಥದ ಮುಂಭಾಗದಲ್ಲಿ ಹೋಮ, ಹವನ, ಅನ್ನಬಲಿ ಹಾಕುವ ಕಾರ್ಯಕ್ರಮ ನಡೆದವು. ಮೂಲಾ ನಕ್ಷತ್ರದಲ್ಲಿ ೪.೩೦ಕ್ಕೆ ಆರಂಭಗೊಂಡ ರಥೋತ್ಸವವು ೫.೫೦ರ ಸುಮಾರಿಗೆ ತನ್ನ ಮೂಲ ಸ್ಥಾನ ಸೇರಿಕೊಂಡಿತು. ರಥೋತ್ಸವ ಹಿನ್ನೆಲೆಯಲ್ಲಿ ರಾಜಬೀದಿ ಸಾಗರದಿಂದ ತುಂಬಿತ್ತು.ಮನೆಯ ಮೇಲ್ಛಾವಣಿಗಳ ಮೇಲಿದ್ದ ಜನ ರಥ ಸಾಗುವುದನ್ನು ಕಣ್ತುಂಬಿಕೊಂಡರು.

ಭಕ್ತರು ಗೋವಿಂದಾ... ಗೋವಿಂದ ಎನ್ನುತ್ತಾ ಉರಿ ಬಿಸಿಲನ್ನು ಲೆಕ್ಕಿಸದೆ ರಥ ಎಳೆದು ಸಂಭ್ರಮಿಸಿದರು. ಜಾತ್ರೆಗೆ ಬಂದ ಭಕ್ತರ ನೀರಿನ ದಾಹ ತೀರಿಸಲು ರಾಜಬೀದಿಯ ಅಲ್ಲಲ್ಲಿ ತೆರೆಯಲಾಗಿತ್ತು.ಇದೇ ವೇಳೆ ಮಜ್ಜಿಗೆ,ಪಾನಕ ವಿತರಿಸಲಾಯಿತು. ರಥವು ತೇರಿನ ಹನಮಪ್ಪ ದೇವಸ್ಥಾನಕ್ಕೆ ತೆರಳಿದಾಗ ಸುವರ್ಣಗಿರಿ ಸಂಸ್ಥಾನ ಮಠದ ಪೀಠಾಧಿಪತಿ ಡಾ. ಚನ್ನಮಲ್ಲಶ್ರೀಗಳು ರಥಕ್ಕೆ ಹೂಮಾಲೆ ಹಾಕಿ ಭಕ್ತಿ ಸಮರ್ಪಿಸಿದರು.

ಒಂದುವರೆ ತಾಸಿನಲ್ಲೆ ಸ್ವಸ್ಥಾನ ಸೇರಿದ ರಥ:

ರಾಜಬೀದಿಯಲ್ಲಿ ರಥ ಸಿಲುಕುವುದು, ಟ್ರ್ಯಾಕ್ಟರ್, ಜೆಸಿಬಿಯಿಂದ ಎಳೆಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಪ್ರಸಂಗಗಳ ನಡುವೆಯೂ ಸಂಜೆ ಕತ್ತಲಾದರೂ ರಥವನ್ನು ಹರಸಾಹಸ ಪಟ್ಟು ತನ್ನ ಸ್ಥಾನಕ್ಕೆ ತರುವ ಪ್ರಯತ್ನ ಈ ಹಿಂದೆ ನಡೆದಿದ್ದವು.ಆದರೆ ಕಳೆದ ವರ್ಷದಿಂದ ರಥವು ತಾಸಿನಲ್ಲೆ ತನ್ನ ಮೂಲ ಸ್ಥಾನ ಸೇರಿಕೊಳ್ಳುತ್ತಿದೆ. ರಥ ತನ್ನ ಸ್ಥಾನಕ್ಕೆ ತಲುಪುತ್ತಿದ್ದಂತೆ ನೆರೆದಿದ್ದ ಭಕ್ತ ಸಮೂಹ ಚಪ್ಪಾಳೆ ತಟ್ಟಿ ಖುಷಿಪಟ್ಟರು.

೨ದಿನ ದಾಸೋಹ: ಜಾತ್ರೆಗೆ ಆಗಮಿಸುವ ಭಕ್ತರಿಗೆ ದೇವಸ್ಥಾನ ಸಮಿತಿಯಿಂದ ಮಾ.೧೦ಹಾಗೂ ೧೧ರಂದು ಎರಡೂ ದಿನ ಅನ್ನಸಂತರ್ಪಣೆ ನಡೆಯಿತು. ಲಕ್ಷಾಂತರ ಭಕ್ತರು ರೊಟ್ಟಿ, ಪಲ್ಯ, ಅನ್ನ-ಸಾಂಬರ್ ಹುಗ್ಗಿ ಪಾಯಸ ಸ್ವೀಕರಿಸಿದರು.

ಎತ್ತಿನ ಬಂಡಿಯಲ್ಲಿ ಜಾತ್ರೆಗೆ ಬಂದ್ರು: ಬಸ್,ಬೈಕ್ ಸೌಕರ್ಯಗಳ ನಡುವೆಯೂ ಕೊಪ್ಪಳ ತಾಲೂಕಿನ ಚಾಮಲಾಪೂರ, ಅರಿಸಿನಕೇರಿ, ಕುಷ್ಟಗಿ ತಾಲೂಕಿನ ವಣಿಗೇರಿ ಗ್ರಾಮಸ್ಥರು ಎತ್ತಿನ ಬಂಡಿಯಲ್ಲಿ ಬಂದು ಕನಕರಾಯನ ಜಾತ್ರೆ ಮಾಡಿದರು. ಇಲ್ಲಿನ ಎಪಿಎಂಸಿ ಪರಿಸರದಲ್ಲಿ ಇಳಿದುಕೊಂಡು ಸ್ವತಃ ತಾವೇ ಅಡುಗೆ ತಯಾರಿಸಿ ದೇವರಿಗೆ ನೈವೈದ್ಯ ಅರ್ಪಿಸಿ ಭಕ್ತಿ ಮೆರೆದರು.

ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಸೇರಿ ರಾಜ್ಯದ ಹಲವು ಜಿಲ್ಲೆಗಳಿಂದ ಸಾವಿರಾರು ಭಕ್ತರು ಜಾತ್ರೆಯಲ್ಲಿ ಭಾಗಿಯಾಗಿದ್ದರು.

ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಹೆಚ್ಚುವರಿ ವರಿಷ್ಠಾಧಿಕಾರಿ ಹೇಮಂತಕುಮಾರ, ಡಿವೈಎಸ್‌ಪಿ ಜೆ.ಎಸ್.ನ್ಯಾಮಗೌಡ, ಡಿಆರ್‌ಡಿಎಸ್‌ಪಿ ಶಶಿಧರಯ್ಯಸ್ವಾಮಿ, ಪಿಐ ವಿ.ನಾರಾಯಣ, ತಹಸೀಲ್ದಾರ ವಿಶ್ವನಾಥ ಮುರುಡಿ, ಇಒ ರಾಜಶೇಖರ, ಸಿಡಿಪಿಒ ವಿರೂಪಾಕ್ಷಿ, ದೇವಸ್ಥಾನ ಕಾರ್ಯದರ್ಶಿ ಸಿದ್ದಲಿಂಗಯ್ಯಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಯವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದರೆ ನನ್ನ ವಿರುದ್ಧವೂ ಕ್ರಮ ಆಗಲಿ: ಜಮೀರ್‌
ಈಗಾಗಲೇ ಸಾಕಷ್ಟು ಅನುಭವಿಸಿದ್ದೇವೆ, ಜಮೀರ್‌ರನ್ನು ಮತ್ತೆ ಸೇರ್ಸಿಕೊಳ್ಳಲ್ಲ: ಎಚ್ಡಿಕೆ