ಎಚ್.ಪಿ.ವಿ ಲಸಿಕಾ ಅಭಿಯಾನ ಉದ್ಘಾಟಿಸಿದ ನೇತ್ರತಜ್ಞೆ
ದೇಶದಲ್ಲಿ ಪ್ರತಿ ವರ್ಷ 80 ಸಾವಿರ ಮಹಿಳೆಯರು ಗರ್ಭಾಶಯದ ಮತ್ತು ಗರ್ಭಕಂಠದ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. ಕ್ಯಾನ್ಸರ್ ಎಂದ ತಕ್ಷಣ ಎಲ್ಲರಲ್ಲಿ ಭಯ ಮೂಡುತ್ತದೆ. ಹೆಣ್ಣು ಮಕ್ಕಳಲ್ಲಿ ಮುಖ್ಯವಾಗಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಎಚ್‌ಪಿವಿ ಲಸಿಕೆ ನೀಡಲಾಗುತ್ತಿದೆ ಎಂದು ನೇತ್ರತಜ್ಞೆ ಡಾ. ಸೌಮ್ಯಾ ಕೆ.ವಿ. ಹೇಳಿದರು.
ತಾಲೂಕಾ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರ್.ಸಿ.ಎಚ್ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳ ನಿರ್ದೇಶನದಂತೆ ಎಚ್.ಪಿ.ವಿ (ಹ್ಯೂಮನ್ ಪ್ಯಾಪಿಲೋಮ ವೈರಸ್) ಲಸಿಕಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.ಈ ಲಸಿಕೆಯು ಬಾಯಿ, ಗಂಟಲು, ಕುತ್ತಿಗೆ, ಗರ್ಭಕಂಠ ಮತ್ತು ಗರ್ಭಾಶಯದ ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ. ಸರ್ಕಾರದ ಮಾರ್ಗಸೂಚಿಯಂತೆ ಈಗ ೧೪ ವರ್ಷದ ಮೇಲ್ಪಟ್ಟು ೧೫ ವರ್ಷದ ಒಳಗಿನ ಎಲ್ಲಾ ಹೆಣ್ಣು ಮಕ್ಕಳಿಗೆ ಈ ಲಸಿಕೆ ನೀಡಲಾಗುತ್ತಿದೆ. ಇದು ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಯಾಗಿದೆ. ಎಲ್ಲಾ ಪೋಷಕರು ಸಹಕರಿಸಿ ಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳಿಸಿ. ಏನಾದರೂ ಸಂದೇಹಗಳಿದ್ದಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಲಸಿಕೆ ಪಡೆಯಿರಿ ಎಂದರು.