ಕೀರ್ತನೆಗಳ ಮೂಲಕ ಸಮಾಜ ತಿದ್ದಿದ ಕನಕದಾಸರು

KannadaprabhaNewsNetwork | Published : Nov 19, 2024 12:48 AM

ಸಾರಾಂಶ

ಕನಕದಾಸರು ಸದಾ ನೆನೆಯುವಂಥ ಕೀರ್ತನೆಗಳನ್ನು ಸಮಾಜಕ್ಕೆ ನೀಡಿದ್ದಾರೆ. ದಾಸರಾಗಿ ಅವರು ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅನನ್ಯವಾದದ್ದು.

ಯಲ್ಲಾಪುರ: ಕನಕದಾಸರು ಕೇವಲ ವ್ಯಕ್ತಿಯಾಗಿರಲಿಲ್ಲ. ಸಮಾಜವನ್ನು ತಿದ್ದುವ ಗುರುವಾಗಿದ್ದರು ಎಂದು ಯಕ್ಷಗಾನ ತಾಳಮದ್ದಳೆ ಕಲಾವಿದೆ ಚಂದ್ರಕಲಾ ಭಟ್ಟ ತಿಳಿಸಿದರು.ನ. ೧೮ರಂದು ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಮೂಹದ ಗಂಗಾಧರೇಂದ್ರ ಸರಸ್ವತಿ ಸಭಾಭವನದಲ್ಲಿ ಕನಕದಾಸ ಜಯಂತಿ ಪ್ರಯುಕ್ತ ಉಪನ್ಯಾಸ ನೀಡಿದ ಅವರು, ಕನಕದಾಸರು ಸದಾ ನೆನೆಯುವಂಥ ಕೀರ್ತನೆಗಳನ್ನು ಸಮಾಜಕ್ಕೆ ನೀಡಿದ್ದಾರೆ. ದಾಸರಾಗಿ ಅವರು ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅನನ್ಯವಾದದ್ದು. ಸಮಾಜದ ಆಗುಹೋಗುಗಳನ್ನು ಕೀರ್ತನೆಗಳ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದರು.

ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಸಿಇಒ ಅಜಯ್ ಅವರು ಕನಕದಾಸರ ಸಾಧನೆಗಳು ಸಮಾಜಕ್ಕೆ ಆದರ್ಶ ಪೂರ್ಣವಾಗಿದೆ ಎಂದರು.ವಿಶ್ವದರ್ಶನ ಪಿಯು ಕಾಲೇಜಿನ ಪ್ರಾಚಾರ್ಯ ದತ್ತಾತ್ರೆಯ ಗಾಂವ್ಕರ್ ಅಧ್ಯಕ್ಷತೆಯನ್ನು ವಹಿಸಿ, ಮಾತನಾಡಿ, ವಿಶ್ವದರ್ಶನದಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಹಾಗೂ ಸಂಸ್ಕೃತ ಭಾಷೆಗಳಿಗೆ ಸಮಾನ ಮಹತ್ವ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ತಾವು ಕಲಿತ ಭಾಷೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಕಲ್ಪಿಸಲಾಗಿದೆ ಎಂದರು.ಉಪನ್ಯಾಸಕ ಜಗನ್ನಾಥ್ ನಿರ್ವಹಿಸಿದರು. ಉಪನ್ಯಾಸಕ ರವೀಂದ್ರ ಶರ್ಮ ಸ್ವಾಗತಿಸಿದರು. ಉಪನ್ಯಾಸಕ ಪ್ರಭು ಅಗಡಿ ವಂದಿಸಿದರು.ಕನಕರು ಸಮಾನತೆಯ ಹರಿಕಾರರು

ಶಿರಸಿ: ಮನುಕುಲದ ಸಮಾನತೆಯ ಹರಿಕಾರ ಕನಕದಾಸರು. ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರ ಎಂದು ಪ್ರಾಂಶುಪಾಲರಾದ ಗಿರಿಜಾ ಪೂಜಾರಿ ಅಭಿಪ್ರಾಯಪಟ್ಟರು.ತಾಲೂಕಿನ ಇಸಳೂರಿನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.ಕುಲ ಕುಲ ಕುಲವೆಂದು ಹೊಡೆದಾಡಬೇಡಿ. ನಮ್ಮ ಕುಲದ ನೆಲೆಯನ್ನು ಏನಾದರೂ ಬಲ್ಲಿರಾ? ಆತ್ಮ ಯಾವ ಕುಲ? ಜೀವ ಯಾವ ಕುಲ? ತತ್ವೇಂದ್ರಿಯಗಳ ಕುಲ ಯಾವುದು ಹೇಳಿರಯ್ಯ? ಎಂದು ಮನುಕುಲದ ಸಮಾನತೆಯ ಬಗ್ಗೆ ಸಾರಿ ಹೇಳಿದ ಮಹಾನ್ ಸಂತ ಕನಕದಾಸರು. ಅವರ ಬೋಧನೆಗಳು ಇಂದಿಗೂ ಪ್ರಸ್ತುತ. ಪ್ರತಿಯೊಬ್ಬರೂ ಅದರ ಅರ್ಥವನ್ನು ಅರಿತು ಬಾಳಬೇಕು ಎಂದರು.

ಶಿಕ್ಷಕಿ ರೂಪಾ ನಾಯ್ಕ ಮಾತನಾಡಿ, ಸುಮಾರು ೩೧೬ ಕೀರ್ತನೆಗಳನ್ನು ರಚಿಸಿದ ಕನಕದಾಸರು ನಮಗೆಲ್ಲರಿಗೂ ಆದರ್ಶಪ್ರಾಯರು. ಮೋಹನ ತರಂಗಿಣಿ, ನಳಚರಿತ್ರೆ, ರಾಮಧ್ಯಾನ ಚರಿತೆ, ಹರಿಭಕ್ತಿಸಾರ, ನೃಸಿಂಹಸ್ತವ ಎಂಬ ಐದು ಪ್ರಮುಖ ಕಾವ್ಯಕೃತಿಗಳನ್ನು ರಚಿಸಿ, ಸಾಹಿತ್ಯ ಜಗತ್ತನ್ನು ಶ್ರೀಮಂತಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.ವಸತಿಶಾಲೆಯ ನಿಲಯಪಾಲಕ ಬಸವರಾಜ ಧರಿಗೊಂಡ ಮಾತನಾಡಿ, ವಿದ್ಯಾರ್ಥಿಗಳು ಕನಕದಾಸರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸಂಗೀತ ಶಿಕ್ಷಕ ವಿಶ್ವನಾಥ್ ಹಿರೇಮಠ ಹಾಗೂ ವಿದ್ಯಾರ್ಥಿ ತಂಡದವರು ನಡೆಸಿ ಕೊಟ್ಟ ಕನಕದಾಸರ ಸಂಗೀತ ಗೋಷ್ಠಿಯು ಕಾರ್ಯಕ್ರಮದ ಸಾರ್ಥಕತೆಗೆ ಹಿಡಿದ ಕನ್ನಡಿಯಾಗಿತ್ತು. ಕೀರ್ತಿ ಸ್ವಾಗತಿಸಿದರರು. ವಿದ್ಯಾರ್ಥಿನಿ ಶ್ರೀನಿಧಿ ನಾಯ್ಕ ನಿರೂಪಿಸಿದರು. ಗೋಪಿಕಾ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಇತರ ಸಿಬ್ಬಂದಿ ಉಪಸ್ಥಿತರಿದ್ದರು.

Share this article