ಪರಿಶಿಷ್ಟ ಜಾತಿಗೆ ನ್ಯಾ. ಎಚ್.ಎನ್. ನಾಗಮೋಹನ ದಾಸ್ ಆಯೋಗದ ಶಿಫಾರಸಿನಂತೆ ಯಥಾವತ್ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ದಲಿತಪರ ಸಂಘಟನೆಗಳು, ವಿವಿಧ ಪಕ್ಷಗಳ ಮಾದಿಗ ಸಮುದಾಯದ ಮುಖಂಡರ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ದಿಢೀರ್ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು.

- ಮಾದಿಗರ ಕೂಗನ್ನು ಹತ್ತಿಕ್ಕುವ ದುಸ್ಸಾಹಸ ಬೇಡ: ಪ್ರತಿಭಟನೆಯಲ್ಲಿ ನಿಂಗರಾಜ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಪರಿಶಿಷ್ಟ ಜಾತಿಗೆ ನ್ಯಾ. ಎಚ್.ಎನ್. ನಾಗಮೋಹನ ದಾಸ್ ಆಯೋಗದ ಶಿಫಾರಸಿನಂತೆ ಯಥಾವತ್ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ದಲಿತಪರ ಸಂಘಟನೆಗಳು, ವಿವಿಧ ಪಕ್ಷಗಳ ಮಾದಿಗ ಸಮುದಾಯದ ಮುಖಂಡರ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ದಿಢೀರ್ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು.

ನಗರದ ಹಳೇ ಪ್ರವಾಸಿ ಮಂದಿರದಿಂದ ಶ್ರೀ ಜಯದೇವ ವೃತ್ತದವರೆಗೆ ಬಿಜೆಪಿ ಮಾಯಕೊಂಡ ಕ್ಷೇತ್ರದ ಮುಖಂಡ, ತಾಪಂ ಮಾಜಿ ಸದಸ್ಯ ಆಲೂರು ನಿಂಗರಾಜ ಇತರರ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು. ರಸ್ತೆ ತಡೆ ನಡೆಸಿ, ಪರಿಶಿಷ್ಟ ಜಾತಿ ಜನರು ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಘೋಷಣೆ ಕೂಗಿದರು.

ಆಲೂರು ನಿಂಗರಾಜ ಈ ಸಂದರ್ಭ ಮಾತನಾಡಿ, ಒಳ ಮೀಲಾತಿಗೆ ಒತ್ತಾಯಿಸಿ ಮಾ.6ರಂದು ಮಾದಿಗ ಸಮಾಜದಿಂದ ದಾವಣಗೆರೆ ಬಂದ್‌ಗೆ ಕರೆ ನೀಡಲಾಗಿದೆ. ನ್ಯಾ.ನಾಗಮೋಹನ ದಾಸ್ ಆಯೋಗದ ಶಿಫಾರಸನ್ನು ಯಥಾವತ್ ಅನುಷ್ಠಾನಗೊಳಿಸಿ, ಒಳಮೀಸಲಾತಿ ಕಲ್ಪಿಸಬೇಕು. ಸಚಿವರಾದ ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ ತಮ್ಮ ಹೊಣೆಗಾರಿಕೆ ಸರಿಯಾಗಿ ನಿರ್ವಹಿಸಿಲ್ಲ ಎಂದರು.

ಸಿಎಂ ಸಿದ್ದರಾಮಯ್ಯ, ಡಾ.ಎಚ್.ಸಿ.ಮಹದೇವಪ್ಪ, ಪ್ರಿಯಾಂಕ ಖರ್ಗೆ, ಡಾ.ಜಿ.ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ ಅಣತಿಯಂತೆ ಮೀಸಲಾತಿ ಜಾರಿಗೊಳಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿಗಾಗಿ ನೇಮಿಸಿದ್ದ ನಾಗಮೋಹನ ದಾಸ್ ಆಯೋಗವು ಶೇ.56 ಮೀಸಲಾತಿಯಲ್ಲಿ ಮಾದಿಗರಿಗೆ ಶೇ.6, ಹೊಲಯ ಸಂಬಂಧಿತ ಸಮುದಾಯಕ್ಕೆ ಶೇ.6, ಭೋವಿ- ಲಂಬಾಣಿ- ಕೊರಚ- ಕೊರಮ ಇತ್ಯಾದಿ ಜಾತಿಗಳಿಗೆ ಶೇ.5 ಮೀಸಲಾತಿ ನೀಡಿತ್ತು. ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದರಿಂದ ಒಳ ಮೀಸಲಾತಿ ಕಾಯ್ದೆಯಾಗಿ ರೂಪುಗೊಂಡಿದೆ. ಸರ್ಕಾರ ಕೆಲವರ ಒತ್ತಡಕ್ಕೆ ಮಣಿದು, ಒಳಮೀಸಲಾತಿ ಕಾಯ್ದೆ ಗಾಳಿಗೆ ತೂರಿದೆ. ಒಳಮೀಸಲಾತಿ ಸಿಗೋವರೆಗೂ ನಾವು ಸುಮ್ಮನಿರೊಲ್ಲ. ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಶೇ.6:6:5 ಅನುಪಾತದಂತೆ ಸಂಪೂರ್ಣ ಜಾರಿಗೆ ಬಜೆಟ್‌ನಲ್ಲಿ ಸಚಿವರು, ಶಾಸಕರು ಪಕ್ಷಾತೀತವಾಗಿ ಧ್ವನಿ ಎತ್ತಬೇಕು. 56 ಸಾವಿರಕ್ಕೂ ಅಧಿಕ ಹುದ್ದೆಗಳನ್ನು ಒಳಮೀಸಲಾತಿ ಇಲ್ಲದೇ, ಕೇವಲ ಶೇ.50ರ ಮೀಸಲಾತಿ ಆಧಾರಿತವಾಗಿ ಹಳೇ ರೋಸ್ಟರ್ ಪದ್ಧತಿಯಲ್ಲಿ ತುಂಬಲು ಹೊರಟಿದ್ದು ಸರಿಯಲ್ಲ ಎಂದ ಅವರು, ರಾಜ್ಯವ್ಯಾಪಿ ಹೋರಾಟದ ಕಿಚ್ಚು ಹೆಚ್ಚಿಸುವ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಎಂ.ಹಾಲೇಶ, ಜೆಡಿಎಸ್ ಮುಖಂಡ ಎಚ್.ಸಿ.ಗುಡ್ಡಪ್ಪ, ಕಡತಿ ಅಂಜಿನಪ್ಪ, ಎ.ಕೆ.ಭೂಮೇಶ, ಅಲೆಮಾರಿ ಸಮುದಾಯದ ರಾಜ್ಯಾಧ್ಯಕ್ಷ, ವಕೀಲ ವೀರೇಶ ವಿಭೂತಿ, ರವಿಕುಮಾರ, ಮಾದಿಗ ಸಮುದಾಯದ ಮುಖಂಡ ಪಾಂಡೋಮಟ್ಟಿ ಪ್ರಭಾಕರ, ಜಗಳೂರು ಕುಬೇರಪ್ಪ, ಹರಿಹರ ಪಿ.ಜೆ.ಮಹಾಂತೇಶ, ಉಚ್ಚಂಗಿ ಪ್ರಸಾದ, ಪೌರ ಚಾಲಕರ ಸಂಘದ ದುಗ್ಗೇಶ, ನಿಂಗರಾಜ, ಸಂತೇಬೆನ್ನೂರು ಎಸ್.ಆರ್.ನಾಗರಾಜಪ್ಪ, ಚನ್ನಗಿರಿ ಗೋವಿಂದಪ್ಪ, ಬಿ.ನಿಂಗಪ್ಪ, ಜಿಗಣಿ ಹಾಲೇಶ, ನರಗನಹಳ್ಳಿ ರಾಮಣ್ಣ, ಕರಿಯಪ್ಪ, ದುರುಗೇಶ ಅರಸೀಕೆರೆ, ಎಚ್.ಮಹಾಂತೇಶ, ಎಚ್.ಎಂ.ಗುಡದಯ್ಯ, ಚನ್ನಗಿರಿ ಮೂರ್ತಿ, ರಾಘವೇಂದ್ರ ಕಡೇಮನಿ ಇತರರು ಇದ್ದರು.

- - -

(ಬಾಕ್ಸ್‌)

* ಬೇಡಿಕೆಗಳೇನೇನು? - ಕಾನೂನುಬದ್ಧ ಒಳ ಮೀಸಲಾತಿ ಕಾಯ್ದೆಯಡಿ ಬರುವ ಪ್ರವರ್ಗ ಈ 6ರ ಅನುಪಾತದಲ್ಲಿ 56 ಸಾವಿರ ಹುದ್ದೆ ತುಂಬಬೇಕು.

- ಒಳಮೀಸಲಾತಿ ಆಧಾರಿತ ರೋಸ್ಟರ್ ಪದ್ಧತಿ ಮಾಡಿ, ಎಲ್ಲಿ ಮೀಸಲಾತಿ ಇದೆಯೋ, ಅಲ್ಲಿ ಒಳ ಮೀಸಲಾತಿ ಅನುಷ್ಠಾನ ಆಗಲೇಬೇಕು.

- ಶಿಕ್ಷಣದಲ್ಲಿ ಕೆ.ಜಿ.ಯಿಂದ ಪಿಎಚ್‌.ಡಿವರೆಗೆ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮಕ್ಕಳು, ಯುವಜನರಿಗೆ 6:6:5ರ ಅನುಪಾತದಲ್ಲಿ ಒಳಮೀಸಲಾತಿ ಸೌಲಭ್ಯ ಸಿಗಬೇಕು.

- ಸಂವಿಧಾನದ ಅನುಚ್ಛೇದ 16(4)ರಂತೆ ಉದ್ಯೋಗ ಮೀಸಲಾತಿಯೆಂದರೆ 56 ಹುದ್ದೆಗಳಲ್ಲಿ ನೇರ ನೇಮಕಾತಿ, ಬಡ್ತಿ, ಬ್ಯಾಕ್‌ಲಾಗ್ ನೇಮಕಾತಿ ಒಳ ಮೀಸಲಾತಿಯಡಿ ಭರ್ತಿ ಮಾಡಬೇಕು.

- - -

(ಟಾಪ್‌ ಕೋಟ್‌) ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿಯಲ್ಲಿ ಅನ್ಯಾಯ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಮಾ.6ರಂದು ದಾವಣಗೆರೆ ಬಂದ್‌ ಕರೆ ನೀಡಲಿದ್ದು, ಇದರ ಪೂರ್ವಭಾವಿಯಾಗಿ ಹಳೇ ಪ್ರವಾಸಿ ಮಂದಿರದಲ್ಲಿ ಮಾ.1ರಂದು ಬೆಳಗ್ಗೆ 11 ಗಂಟೆಗೆ ಮಾದಿಗ ಸಮಾಜದ ಸಭೆ ಕರೆಯಲಾಗಿದೆ. ಮಾದಿಗ ಬಾಂಧ‍ವರು ಮಾ.1ರ ಪೂರ್ವಭಾವಿ ಸಭೆ. ಮಾ.6ರ ದಾವಣಗೆರೆ ಬಂದ್‌ನಲ್ಲಿ ಸ್ವಯಂಪ್ರೇರಣೆಯಿಂದ ಪಾಲ್ಗೊಳ್ಳಬೇಕು.

- ಆಲೂರು ನಿಂಗರಾಜ, ಹಿರಿಯ ಮುಖಂಡ, ಮಾದಿಗ ಸಮಾಜ.

- - -

28ಕೆಡಿವಿಜಿ3, 4:

ರಾಜ್ಯದಲ್ಲಿ 56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳ ಮೀಸಲಾತಿ ಜಾರಿಗಾಗಿ ದಾವಣಗೆರೆ ಜಯದೇವ ವೃತ್ತದಲ್ಲಿ ಮಾದಿಗ ಸಮುದಾಯ ದಿಢೀರನೇ ರಸ್ತೆ ತಡೆ ನಡೆಸಿತು.