ಇಂದು ರಾಜ್ಯದಲ್ಲಿ ಬಿಜೆಪಿ ಈ ಮಟ್ಟದಲ್ಲಿ ಬೆಳೆಯಲು ಪ್ರಮುಖವಾಗಿ ಯಡಿಯೂರಪ್ಪನವರ ಶ್ರಮ ಕಾರಣ. ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರಿಗೆ ಯಡಿಯೂರಪ್ಪನವರ ಬದುಕು ಹಾಗೂ ಹೋರಾಟ ಪಾಠವಾಗಲಿ.
ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಸಾರ್ವಜನಿಕ ಸೇವೆಗೆ, ಬಿಜೆಪಿ ಸಂಘಟನೆಗೆ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ರಾಜ್ಯಕ್ಕೆ ಹಾಗೂ ಪಕ್ಷಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಪಕ್ಷನಿಷ್ಠೆ ಕಾರ್ಯ ಕರ್ತರಿಗೆ ಪ್ರೇರಣೆಯಾಗಿದೆ ಎಂದು ಮಾಜಿ ಶಾಸಕ ಎಂ.ವಿ.ನಾಗರಾಜು ಹೇಳಿದರು.ನೆಲಮಂಗಲ ವಿಧಾನಸಭಾ ಕ್ಷೇತ್ರದ ಗುಡೇಮಾರನಹಳ್ಳಿ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
50 ವರ್ಷಗಳ ಕಾಲ ವಿರಮಿಸದೆ ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಶ್ರೇಯಸ್ಸು ಯಡಿಯೂರಪ್ಪನವರಿಗೆ ಸಲ್ಲುತ್ತದೆ. ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 2008ರಲ್ಲಿ ನಾನು ಶಾಸಕನಾಗಬೇಕಾದರೆ ಬಿಜೆಪಿಯ ಜತೆಗೆ ಯಡಿಯೂರಪ್ಪನವರ ವರ್ಚಸ್ಸು ಪ್ರಮುಖ ಕಾರಣವಾಯಿತು. ಅವರು ನೀಡಿದ ಅನುದಾನದಿಂದ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಯಿತು. ಬಿಜೆಪಿಯನ್ನು ಸದೃಢವಾಗಿ ಕಟ್ಟಿ ಮತ್ತೆ ಅಧಿಕಾರಕ್ಕೆ ತರುವ ಮೂಲಕ ಕಾರ್ಯಕರ್ತರು ಯಡಿಯೂರಪ್ಪನವರಿಗೆ ಜನ್ಮದಿನದ ಕೊಡುಗೆ ನೀಡಬೇಕು ಎಂದರು.ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, ಹೊಸ ಸೂರ್ಯ ಉದಯಿಸಿದಂತೆ ಕರ್ನಾಟಕದಲ್ಲಿ ಯಡಿಯೂರಪ್ಪನವರು ಬಂದು ಬಿಜೆಪಿಯನ್ನು ಬಲವರ್ಧನೆಗೆ ತರಲು ಶ್ರಮಿಸಿದರು. ರೈತಪರ ನಾಯಕರಾಗಿ ಯಡಿಯೂರಪ್ಪನವರು ದೇಶದಲ್ಲಿ ಮೊದಲ ಬಾರಿಗೆ ಕೃಷಿ ಬಜೆಟ್ ಮಂಡನೆ ಮಾಡಿದ್ದಲ್ಲದೆ ಅನೇಕ ಜನರ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ ಜನರಿಗೆ ಕೊಡುಗೆ ನೀಡಿದರು ಎಂದರು.
ರೈತಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ.ಬೃಂಗೀಶ್ ಮಾತನಾಡಿ, ಇಂದು ರಾಜ್ಯದಲ್ಲಿ ಬಿಜೆಪಿ ಈ ಮಟ್ಟದಲ್ಲಿ ಬೆಳೆಯಲು ಪ್ರಮುಖವಾಗಿ ಯಡಿಯೂರಪ್ಪನವರ ಶ್ರಮ ಕಾರಣ. ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರಿಗೆ ಯಡಿಯೂರಪ್ಪನವರ ಬದುಕು ಹಾಗೂ ಹೋರಾಟ ಪಾಠವಾಗಲಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಎಸ್‍ಸಿ ಮೋರ್ಚಾ ತಾಲೂಕು ಅಧ್ಯಕ್ಷ ಉಮೇಶ್, ರಮೇಶ್, ಶಾಂತಕುಮಾರಿ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಪೋಟೋ 1 : ನೆಲಮಂಗಲ ವಿಧಾನಸಭಾ ಕ್ಷೇತ್ರದ ಗುಡೇಮಾರನಹಳ್ಳಿ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಉದ್ಯೋಗ ಮೇಳಕ್ಕೆ ಮಾಜಿ ಶಾಸಕ ಎಂ.ವಿ.ನಾಗರಾಜು ಚಾಲನೆ ನೀಡಿದರು.