ಕೋಲಾರದಲ್ಲಿ ವಿಜೃಂಭಣೆಯ ದಾಸಶ್ರೇಷ್ಠ ಕನಕ ಜಯಂತಿ;ಕನಕ ಭವನ ನಿರ್ಮಾಣಕ್ಕೆ ೫ ಎಕರೆ ಜಮೀನು ಮಂಜೂರಾತಿಗೆ ಒತ್ತಾಯ
ಕನಕದಾಸರು, ಕೈವಾರ ತಾತಯ್ಯ ಹಾಗೂ ವೀರಬ್ರಹ್ಮೇಂದ್ರರಂತಹ ಮಹನೀಯರು ತಮ್ಮ ವಚನಗಳು, ಕೀರ್ತನೆಗಳು ಮತ್ತು ಸಂದೇಶಗಳ ಮೂಲಕ ಸಮಾಜಕ್ಕೆ ಸತ್ಯ ಹಾಗೂ ಸನ್ಮಾರ್ಗದ ಹಾದಿಯನ್ನು ತೋರಿಸಿದ್ದಾರೆ. ಇಂತಹ ದಾರ್ಶನಿಕರ ಆದರ್ಶಗಳನ್ನು ಪ್ರತಿಯೊಬ್ಬರೂ ಗೌರವಿಸುವುದರ ಜೊತೆಗೆ, ಅವರ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ನಗರದ ಎಸ್.ಎನ್.ಆರ್ ಆಸ್ಪತ್ರೆ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೋಲಾರ ಜಿಲ್ಲಾ ಕುರುಬರ ಸಂಘ, ರಾಯಣ್ಣ ಯುವ ವೇದಿಕೆ ಹಾಗೂ ಕನಕ ನೌಕರರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಿಂದ ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕನಕದಾಸರು ನಮಗೆ ನೀಡಿರುವ ತಂಬೂರಿ ಕೇವಲ ಒಂದು ಸಂಗೀತ ಸಾಧನವಲ್ಲ, ಅದರ ಹಿಂದೆ ಅನೇಕ ಗೂಢಾರ್ಥಗಳು ಹಾಗೂ ವಿಶೇಷತೆಗಳು ಅಡಗಿವೆ. ತಂಬೂರಿಯಿಂದ ಹೊರಹೊಮ್ಮುವ ಪ್ರತಿಯೊಂದು ನಾದಕ್ಕೂ ತನ್ನದೇ ಆದ ಅರ್ಥವಿದೆ. ಇಂತಹ ಮಹಾನ್ ಪರಂಪರೆ ನಮಗೆ ಕೊಡುಗೆಯಾಗಿ ನೀಡಿದ ಕನಕದಾಸರಿಗೆ ಸಮಾಜ ಸದಾ ಕೃತಜ್ಞವಾಗಿರಬೇಕು. ಜಯಂತಿಯಂದು ಅವರ ಆದರ್ಶಗಳನ್ನು ಕೇವಲ ಸ್ಮರಿಸುವುದಕ್ಕೆ ಸೀಮಿತವಾಗದೆ, ಆ ತತ್ವಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಕನಕದಾಸರ ಜಯಂತಿ ಕೇವಲ ವರ್ಷಕ್ಕೊಮ್ಮೆ ಆಚರಿಸುವ ಸಾಂಪ್ರದಾಯಿಕ ಕಾರ್ಯಕ್ರಮಕ್ಕೆ ಸೀಮಿತಗೊಳಿಸಬಾರದು. ಅವರ ಹೆಸರಿನಲ್ಲಿ ಕೋಲಾರ ಜಿಲ್ಲೆಯಲ್ಲಿ ಐದು ಎಕರೆ ಜಮೀನು ಮಂಜೂರು ಮಾಡಿ, ಅಲ್ಲಿ ಸುಸಜ್ಜಿತವಾದ ಶಾಶ್ವತ ಭವನ ಅಥವಾ ಸಭಾಂಗಣ ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಚುನಾಯಿತ ಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದರು.
ಮಾಜಿ ಸಚಿವ ವರ್ತೂರು ಪ್ರಕಾಶ್ ಮಾತನಾಡಿ, ಮುಂದಿನ ವರ್ಷ ಕನಕದಾಸರ ಜಯಂತಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಆಚರಿಸುವ ಮೂಲಕ ಸಮುದಾಯದ ಒಗ್ಗಟ್ಟು ಮತ್ತು ಶಕ್ತಿ ಪ್ರದರ್ಶಿಸಬೇಕು. ಜಯಂತಿ ಆಚರಣೆಯ ಸಂದರ್ಭದಲ್ಲಿ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಬಿ.ಎಸ್.ಯಡಿಯೂರಪ್ಪ ಸಮುದಾಯಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಗೋಪಾಲ್ ಗೌಡ, ವಿಧಾನ ಪರಿಷತ್ ಸದಸ್ಯ ನಸೀರ್ ಅಹಮ್ಮದ್, ಸಂಸದ ಎಂ.ಮಲ್ಲೇಶ್ ಬಾಬು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಜಿಪಂ ಸಿಇಓ ಡಾ.ಪ್ರವೀಣ್ ಪಿ.ಬಾಗೇವಾಡಿ, ಕೂಡಾ ಅಧ್ಯಕ್ಷ ಹನೀಫ್, ಮುಖಂಡರಾದ ಸಿಎಂಆರ್ ಶ್ರೀನಾಥ್, ಹರಿಪ್ರಸಾದ್, ತಂಬಿಹಳ್ಳಿ ಮುನಿಯಪ್ಪ, ಜೆ.ಕೆ.ಜಯರಾಮ್, ತಂಬಹಳ್ಳಿ ಮುನಿಯಪ್ಪ ಇದ್ದರು.