ಕನ್ನಡಪ್ರಭ ವಾರ್ತೆ ಬೀದರ್
ಕನಕದಾಸರು ತಮ್ಮ ಕಿರ್ತನೆಗಳ ಮೂಲಕ ಸಮಾಜದಲ್ಲಿ ಸುಧಾರಣೆ ತಂದಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿ.ಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಭಕ್ತಶ್ರೇಷ್ಠ ಕನಕದಾಸರ 538ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ಅಂಕುಡೊಂಕು, ಅಸಮಾನತೆ ಜಾತಿ ವ್ಯವಸ್ಥೆಯನ್ನು ತಮ್ಮ ಕಿರ್ತನೆಗಳ ಮೂಲಕ ಕನಕದಾಸರು ಹೋಗಲಾಡಿಸಿದರು.
ಹಳ್ಳಿಹಳ್ಳಿಗೆ ಸಂಚಾರ ಮಾಡುವುದರ ಮೂಲಕ ಜನರಿಗೆ ಸತ್ಯಾಸತ್ಯತೆ ಬಗ್ಗೆ ಅರಿವು ಮೂಡಿಸಿದ್ದಾರೆ. ಮಹಾತ್ಮರು ಯಾವುದೇ ಒಂದು ಜಾತಿಗೆ ಸಂಬಂಧಿಸಿದ ವರಲ್ಲ, ಅವರು ಇಡೀ ಸಮಾಜದ ಏಳಿಗೆಗೆ ದುಡಿವುದರ ಮೂಲಕ ಸಮಾಜದಲ್ಲಿ ಸುಧಾರಣೆ ತಂದು ಶಾಂತಿ ಸಮಾನತೆ, ಭಾತೃತ್ವ ಸಾರಿದ್ದಾರೆ. ನಮ್ಮ ಸರ್ಕಾರ ರೈತರ ಪರವಾಗಿದ್ದು, ಆದಷ್ಟು ಬೇಗ ಸರ್ಕಾರದಿಂದ ಘೋಷಿಸಲ್ಪಟ ಹೆಚ್ಚುವರಿ 8500 ರು.ನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು ಎಂದರು.ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಮಾತನಾಡಿ, ಕನಕದಾಸರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗಿ, ಜಾತಿ, ಕುಲ, ಮತ ಎನ್ನದೆ ಒಂದಾಗಿ ಬಾಳಬೇಕು ಎಂದರು.
ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಜಾತಿ, ಕುಲಕ್ಕಿಂತ ಮಾನವ ಧರ್ಮ ದೊಡ್ಡದು ಎಂದು ವಿಶ್ವಕ್ಕೆ ಸಂದೇಶ ಸಾರಿದ ಕನಕದಾಸರು ನಮ್ಮೆಲ್ಲರಿಗೆ ಮಾದರಿಯಾಗಿದ್ದಾರೆ ಎಂದರು.ಮಾಜಿ ಸಚಿವ ಬಂಡೇಪ್ಪ ಖಾಶಂಪೂರ ಅವರು ಮಾತನಾಡಿ, ಕನಕದಾಸರು ಶ್ರೀಕೃಷ್ಣರ ಭಕ್ತರಾಗಿದ್ದರಿಂದ ಉಡುಪಿಗೆ ಹೋಗಿ ಕೃಷ್ಣನ ದರ್ಶನ ಪಡೆಯಲು ಹೋದಾಗ ಅವರಿಗೆ ದೇವಸ್ಥಾನದ ಒಳಗೆ ಬಿಡಲಿಲ್ಲ. ಅವಾಗ ಹೊರಗಡೆಯಿಂದ ಕಿರ್ತನೆ ಹಾಡುಗಳು ಹಾಡುತ್ತಿರುವಾಗ ಶ್ರೀ ಕೃಷ್ಣನೇ ಗೋಡೆ ಒಡೆದು ಮೂರ್ತಿ ತಿರುಗಿಸಿ ದರ್ಶನ ನೀಡಿದರು. ಆದ್ದರಿಂದ ಭಕ್ತಿ ಎನ್ನುವುದು ಅಂತರಾಳದಲ್ಲಿ ಇರಬೇಕೇ ಹೊರತು ತೋರಿಕೆಗಲ್ಲ ಎಂದರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರದ ಉಪನ್ಯಾಸಕರಾದ ಡಾ.ಸಂಗಪ್ಪಾ ತೌಡಿ ಉಪನ್ಯಾಸ ನೀಡಿದರು. ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪೂಜೆ ಮಾಡಿ ನಂತರ ಬೊಮಗೊಂಡೇಶ್ವರ ವೃತ್ತ ಬಳಿ ಕನಕದಾಸರ ಭಾವಚಿತ್ರ ಹೊತ್ತ ರಥ ಮೆರವಣಿಗೆಗೆ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್, ಶಾಸಕ ಶೈಲೇಂದ್ರ ಬೆಲ್ದಾಳೆ, ಮಾಜಿ ಸಚಿವ ಬಂಡೇಪ್ಪ ಖಾಶಂಪೂರ, ಜಿಲ್ಲಾ ಗ್ಯಾರಂಟಿ ಅಧ್ಯಕ್ಷ ಅಮೃತರಾವ ಚಿಮಕೋಡೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ, ಔಧತಪೂರ ಶ್ರೀಗಳಾದ ಮಚೇಂದ್ರ ಮುತ್ಯಾ, ಬೀದರ ತಹಸಿಲ್ದಾರ್ ರವೀಂದ್ರ ಧಾಮಾ, ಸಮಾಜದ ಮುಖಂಡರಾದ ಬಾಬುರಾವ ಮಲ್ಕಾಪುರೆ, ಸಂಜುಕುಮಾರ ಅತಿಯಾಳೆ, ಪಂಡಿತರಾವ ಚಿದ್ರಿ, ಪೀರಪ್ಪಾ ಔರಾದಕರ್, ಸಂಗಪ್ಪ ಮಲ್ಕಾಪುರೆ, ಸಂತೋಷ ಜೋಳದಾಪಕೆ, ಹನುಮಂತ ಮಲ್ಕಾಪುರೆ, ವಿಜಯಕುಮಾರ ಸೋನಾರೆ, ರಾಜಕುಮಾರ ಕಂದಗುಳೆ ಸೇರಿದಂತೆ ಸಮಾಜದ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.