ಆಳಂದದ ಹಣ್ಣು ಮಾರುವವನ ಮಗಳಿಗೆ ಒಲಿದ ಚಿನ್ನದ ಪದಕ!

KannadaprabhaNewsNetwork |  
Published : Nov 09, 2025, 01:15 AM IST
ಫೋಟೋ- ಸೆಂಟ್ರಲ್‌ ಗೋಲ್ಡ್‌ 1ಚಿನ್ನದ ಪದಕದೊಂದಿಗೆ ಶಮ್ಮು ಭಾಗವಾನ್‌- ರಜೀಯಾ ಬೇಗಂ ಜೊತೆ ಸಂತಸದಲ್ಲಿ ಸಾನಿಯಾ ಸಮ್ರೀನ್‌ | Kannada Prabha

ಸಾರಾಂಶ

ವಿಶ್ವವಿದ್ಯಾಲಯ ನಮ್ಮೂರಲ್ಲಿದ್ದರೂ ಅದ್ಯಾಕೆ ನಮ್ಮ ಭಾಗದ ಮಕ್ಕಳು ಇಲ್ಲಿ ಪ್ರವೇಶ ಪಡೆದು ಸಾಧನೆ ಮಾಡೋದಿಲ್ಲ ಎಂದು ಕಡಗಂಚಿ ಕೇಂದ್ರೀಯ ವಿವಿ ಸುತ್ತಮುತ್ತ ಸದಾ ಚರ್ಚೆಯಲ್ಲಿರುವ ಈ ಪ್ರಶ್ನೆಗೆ ಆಳಂದದ ಹಣ್ಣಿನ ವರ್ತಕನ ಮಗಳು ಸಾನಿಯಾ ಸಮರೀನ್‌ ಎಂಕಾಮ್‌ನಲ್ಲಿ ಹೆಚ್ಚಿನ ಅಂಕ ಗಳಿಸಿ ಚಿನ್ನದ ಪದಕ ಬಾಚಿಕೊಂಡು ಸಮರ್ಥ ಉತ್ತರ ನೀಡಿದ್ದಾಳೆ.

-ಕಡಗಂಚಿ ಕೇಂದ್ರೀಯ ವಿವಿ ಮಾಸ್ಟರ್‌ ಆಫ್‌ ಕಾಮರ್ಸ್‌ ನಲ್ಲಿ ಚಿನ್ನದ ಪದಕ ಗೆದ್ದ ಸಾನಿಯಾ ಸಮ್ರೀನ್‌ । ಎಂಕಾಂ ಓದಿ ಚಿನ್ನ ಗೆದ್ದಳು

----

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ವಿಶ್ವವಿದ್ಯಾಲಯ ನಮ್ಮೂರಲ್ಲಿದ್ದರೂ ಅದ್ಯಾಕೆ ನಮ್ಮ ಭಾಗದ ಮಕ್ಕಳು ಇಲ್ಲಿ ಪ್ರವೇಶ ಪಡೆದು ಸಾಧನೆ ಮಾಡೋದಿಲ್ಲ ಎಂದು ಕಡಗಂಚಿ ಕೇಂದ್ರೀಯ ವಿವಿ ಸುತ್ತಮುತ್ತ ಸದಾ ಚರ್ಚೆಯಲ್ಲಿರುವ ಈ ಪ್ರಶ್ನೆಗೆ ಆಳಂದದ ಹಣ್ಣಿನ ವರ್ತಕನ ಮಗಳು ಸಾನಿಯಾ ಸಮರೀನ್‌ ಎಂಕಾಮ್‌ನಲ್ಲಿ ಹೆಚ್ಚಿನ ಅಂಕ ಗಳಿಸಿ ಚಿನ್ನದ ಪದಕ ಬಾಚಿಕೊಂಡು ಸಮರ್ಥ ಉತ್ತರ ನೀಡಿದ್ದಾಳೆ.

ಕೇದ್ರೀಯ ವಿವಿ ಆರಂಭದ ವರ್ಷ ಆಳಂದದ ಮದಗುಣಕಿ ಗ್ರಾಮದ ಯುವತಿ ಚಿನ್ನದ ಪದಕ ಗೆದ್ದು ಸುದ್ದಿಯಾಗಿದ್ದು ಬಿಟ್ಟರೆ ನಂತರದ ವರ್ಷಗಳಲ್ಲಿ ಕಲಬುರಗಿ ಮೂಲದವರು ಇಲ್ಲಿಂದ ಚಿನ್ನ ಬಾಚಿದ್ದು ಅಷ್ಟಕ್ಕಷ್ಟೆ.

ಕೇಂದ್ರೀಯ ವಿವಿ 9 ನೇ ಘಟಿಕೋತ್ಸವದಲ್ಲಿ ಜಿಲ್ಲೆಯ ಆಳಂದ ಬಸ್ ನಿಲ್ದಾಣ ಮುಂಭಾಗದಲ್ಲಿ ಹಣ್ಣು ಮಾರುವ ಬಂಡಿ ಇಟ್ಟು ಉಪ ಜೀವನ ನಡೆಸುತ್ತಿರುವ ಶಮ್ಮು ಭಾಗವಾನ್, ರಜೀಯಾ ಬೇಗಂ ದಂಪತಿ ಪುತ್ರಿ ಸಾನಿಯಾ ಸಮ್ರೀನ್ ಎಂ.ಕಾಂ ನಲ್ಲಿ ಚಿನ್ನದ ಪದಕ ಪಡೆದು ಗಮನ ಸೆಳೆದಳು.

ಶಮ್ಮು ಭಾಗವಾನ್‌, ರಜೀಯಾ ಬೇಗಂ ಇಬ್ಬರು ಅನಕ್ಷರಸ್ತರು, ಇವರಿಗೆ ನಾಲ್ಕು ಹೆಣ್ಣು, ಒಂದು ಗಂಡು ಸೇರಿದಂತೆ ಐವರು ಮಕ್ಕಳಲ್ಲಿ ನಾಲ್ಕನೆಯವಳೇ ಚಿನ್ನ ಬಾಚಿರೋ ಸಾನಿಯಾ ಸಮ್ರೀನ್‌. ಈಕೆಯ ಸಾಧನೆ ಶಮ್ಮು ಹಾಗೂ ರಜಿಯಾ ದಂಪತಿಯನ್ನು ಹೆಮ್ಮೆಯಿಂದ ಬೀಗುವಂತೆ ಮಾಡಿದೆ.

ಕಷ್ಟದಲ್ಲಿದ್ದು ಕಲಿಸಿದ್ದಕ್ಕೂ ಸಾರ್ಥಕವಾಯ್ತೆಂದು ಪೋಷಕರು ಸಾನಿಯಾ ಸಾಧನೆ ಕಂಡು ಬೀಗುತ್ತಿದ್ದಾರೆ. ನಿತ್ಯ 3 ಗಂಟೆಯವರಗೂ ಓದುತ್ತಿದ್ದ ಸಾನಿಯಾ ಮನೆ ಗೆಲಸದಲ್ಲೂ ನೆರವಿಗೆ ಬರುತ್ತಿದ್ದಳು. ಆಕೆಯ ಸಾಧನೆ ಖುಷಿಯ ಸಂಗತಿ ಎಂದು ಹೇಳಿದ ಆಕೆಯ ತಾಯಿ ರಜೀಯಾ ಬೇಗಂ, ಮಗಳು ಮುಂದೆ ಓದಿ ಕುಟುಂಬಕ್ಕೆ ನೆರವಾಗುತ್ತಾಳೆಂಬ ಭರವಸೆಯನ್ನು ಹೊರಹಾಕಿದರು.

ಆಳಂದವಳಾದ ಸಾನಿಯಾ ಸಮ್ರೀನ್‌ ತನ್ನ ಹೈಸ್ಕೂಲ್‌ ಶಿಕ್ಷಣ ಆಳಂದದಲ್ಲೇ ಮುಗಿಸಿ ರಾಮ ಮನೋಹರ ಲೋಹಿಯಾ ಕಾಲೇಜಲ್ಲಿ ಪಿಯುಸಿ ಓದಿದವಳು. ಆಳಂದದಲ್ಲೇ ಸರ್ಕಾರಿ ಕಾಲೇದಲ್ಲಿ ಬಿಕಾಂ ಪದವಿಯಲ್ಲಿ ಬೆಸ್ಟ್ ಕಾಮರ್ಸ್ ವಿದ್ಯಾರ್ಥಿ ಅವಾರ್ಡ್ ಪಡೆದಿದ್ದೇ ಸಿ.ಯು.ಕೆ.ನಲ್ಲಿ ಪ್ರವೇಶ ಪಡೆಯಲು ಸ್ಫೂರ್ತಿಯಾಯಿಯಿತು. ಮುಂದೆ ಪಿಎಚ್‌ಡಿ ಮಾಡಿ ಪ್ರೊಫೆಸರ್ ಆಗುವೆ ಎಂದು ಸಾನಿಯಾ ಸಮ್ರೀನ್ ಕನ್ನಡಪ್ರಭ ಜೊತೆ ಅನಿಸಿಕೆ ಹಂಚಿಕೊಂಡರು.

ಆಳಂದದಲ್ಲೇ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿ 1 ವರ್ಷ ಕೆಲಸ ಮಾಡಿರುವ ಸಾನಿಯಾ ಕೆಸೆಟ್‌, ನ್ಯಾಶನಲ್‌ ಎಂಟ್ರನ್ಸ್‌ ಟೆಸ್ಟ್‌ ಪರೀಕ್ಷೆ ಅರ್ಹತೆ ಪಡೆದವಳು. ವಿವಿಧ ಸ್ಪರ್ಧಾ ಪರೀಕ್ಷೆಗಳನ್ನು ಬರೆಯುವ ಸಿದ್ಧತೆಯಲ್ಲಿದ್ದಾಳೆ. ತನ್ನೆಲ್ಲ ಶೈಕ್ಷಣಿಕ ಯಶಸ್ಸಿನ ಹಿಂದೆ ಶ್ರಮಪಡುವ ಪೋಷಕರಾದ ಶಮ್ಮು ಭಾಗವಾನ್‌, ರಜೀಯಾ ಬೇಗಂ ಇದ್ದಾರೆಂದು ಹುಮ್ಮಸ್ಸಿನಿಂದ ಹೇಳುವ ಸಾನಿಯಾ ಸಮರೀನ್‌ ಕಾಮರ್ಸ್‌ನಲ್ಲೇ ಬೋಧಕಿಯಾಗಿ ಸಾಧಿಸುವ ಛಲ ಹೊಂದಿದ್ದಾಳೆ.

ನಾವಂತೂ ಏನೂ ಕಲಿತಿಲ್ಲ, ನಮ್ಮ ಮಗಳು ಸಾನಿಯಾ ಸಾಧನೆಗೆ ನಾವು ಏನೂ ಹೇಳಬೋಕು ಗೊತ್ತಾಗವಲ್ತು. ಫ್ರುಟ್‌ ಮರ್ಚಂಟ್‌ ಆಗಿ ಆಳಂದದಲ್ಲಿ ಕೆಲಸ ಮಾಡುತ್ತಿದ್ದೇನೆ. ಮಗಳ ಸಾಧನೆ ಹೆಮ್ಮೆಯ ಸಂಗತಿ. ಆಕೆ ಇನ್ನೂ ಓದಿದರೆ ಓದಿಸುವೆ. ಆಕೆ ನಮ್ಮ ಮನೆತನದ ಕೀರ್ತಿ ಬೆಳಗಿಸುತ್ತಿದ್ದಾಳೆ.

-ಶಮ್ಮು ಭಾಗವಾನ್‌, ರಜೀಮಾ ಬೇಗಂ, ಸಿಯುಕೆ ಚಿನ್ನದ ಹುಡುಗಿ ಸಾನಿಯಾ ಪೋಷಕರು, ಆಳಂದ

ನಂದ್ಯಾಳ ಹುಡುಗಿಗೆ ಒಲಿದ 2 ಗೋಲ್ಡ್ ಮೆಡಲ್

ಆಂಧ್ರಪ್ರದೇಶದ ನಂದ್ಯಾಳ ಮೂಲದ ವಿದ್ಯಾರ್ಥಿನಿ ಶಿವಸಾಹಿತಿ ಸೋಮಶೆಟ್ಟಿ ಬಿ.ಇ.(ಇ&ಸಿ) ಕೋರ್ಸ್ ನಲ್ಲಿ ಪ್ರಥಮ ರ‍್ಯಾಂಕಿನ ಚಿನ್ನದ ಪದಕ ಪಡೆಯುವುದರ ಜೊತೆಗೆ ಪ್ರೊ.ಎ.ಎಂ.ಪಠಾನ್ ಗೋಲ್ಡ್ ಮೆಡಲ್ ಸಹ ಪಡೆದು ನಗೆ ಬೀರಿದರು. ಶ್ರಮಪಟ್ಟಿದ್ದೆ, ಚಿನ್ನದ ಪದಕ ನಿರೀಕ್ಷಿಸಿರಲಿಲ್ಲ. ಎರಡು ಗೋಲ್ಡ್ ಮೆಡಲ್ ಖುಷಿ ತಂದಿದೆ. ತಂದೆ-ತಾಯಿಯ ಸಹಕಾರದಿಂದಲೆ ಇದೆಲ್ಲ ಸಾಧ್ಯವಾಗಿದೆ. ಮದ್ರಾಸ್ ಐ.ಐ.ಟಿ.ಯಲ್ಲಿ ಸ್ನಾತಕೋತ್ತರ ಪದವಿ ಮಾಡುವ ಆಸೆ ಹೊಂದಿದೇನೆ ಎಂದು ವಿದ್ಯಾರ್ಥಿನಿ ಶಿವಸಾಹಿತಿ ಸೋಮಶೆಟ್ಟಿ ತಮ್ಮ ಅಭಿಪ್ರಾಯವನ್ನು ಪತ್ರಕರ್ತರೊಂದಿಗೆ ಹಂಚಿಕೊಂಡರು. ನನಗೆ ಓದಕ್ಕೆ ಆಗಲಿಲ್ಲ, ಮಗಳ ಓದಿನಲ್ಲೆ ಖುಷಿ ಕಂಡಿರುವೆ ಎಂದು ನಂದ್ಯಾಳದಲ್ಲಿ ಕಿರಾಣಿ ಅಂಗಡಿ ನಡೆಸುವ ವಿದ್ಯಾರ್ಥಿನಿಯ ತಂದೆ ಯತೀಂದ್ರ ಬಾಬು ಮಗಳ ಸಾಧನೆ ಕುರಿತು ಹೇಳಿದರು. ತಾಯಿ ಜಾಹ್ನವಿ ಸಹ ಸಂತಸದ ಕ್ಷಣ ಕಣ್ತುಂಬಿಕೊಂಡರು.

18 ಪಿ.ಎಚ್.ಡಿ. ಸೇರಿ 756 ಜನರಿಗೆ ಪದವಿ ಪ್ರದಾನ

ಘಟಿಕೋತ್ಸವದ ಭಾಗವಾಗಿ ವಿವಿಧ 27 ವಿಭಾಗದ 737 ವಿದ್ಯಾರ್ಥಿಗಳಿಗೆ ಪದವಿ ಮತ್ತು ಸ್ನಾತಕೋತ್ತರ ಪದವಿ, 18 ಅಭ್ಯರ್ಥಿಗಳಿಗೆ ಪಿ.ಎಚ್.ಡಿ, ಓರ್ವರಿಗೆ ಎಂ.ಫಿಲ್ ಪದವಿ ಸೇರಿದಂತೆ ಒಟ್ಟು 756 ಅಭ್ಯರ್ಥಿಗಳಿಗೆ ನ್ಯಾ. ದಿನೇಶ ಮಹೇಶ್ವರಿ ಅವರು ಪದವಿ ಪ್ರದಾನ ಮಾಡಿದರು.

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ