- ಕನಕ ಸೇವಾ ಟ್ರಸ್ಟ್‌ನಿಂದ ಕನಕದಾಸ ಜಯಂತ್ಯುತ್ಸವದಲ್ಲಿ ತಹಸೀಲ್ದಾರ್ ನಾಗರಾಜ್
ಕನ್ನಡಪ್ರಭ ವಾರ್ತೆ ಚನ್ನಗಿರಿ
ದಾಸರು, ಶಿವಶರಣರು, ಕವಿಗಳು, ದಾರ್ಶನಿಕರು ಸಮಾಜ ಸುಧಾರಕರು. ಇವರೆಲ್ಲ ಒಂದೇ ಜಾತಿಗೆ ಸೀಮಿತರಲ್ಲ. ಸಮಾಜದಲ್ಲಿದ್ದ ಅಸಮಾನತೆ ವಿರುದ್ಧ ಹೋರಾಡಿದ ಇಂಥ ಮಹಾಪುರುಷರ ಜಯಂತಿ ಕಾರ್ಯಕ್ರಮಗಳನ್ನು ಒಂದು ಜಾತಿ, ಸಮುದಾಯಕ್ಕೆ ಸೀಮಿತವನ್ನಾಗಿ ಮಾಡದೇ ಸಮಾಜದ ಎಲ್ಲ ಜನರು ಸೇರಿ ಆಚರಿಸಬೇಕಾಗಿದೆ ಎಂದು ತಹಸೀಲ್ದಾರ್ ಎನ್.ಜೆ.ನಾಗರಾಜ್ ಹೇಳಿದರು.ಸೋಮವಾರ ಪಟ್ಟಣದ ಕುರುಬರ ಬೀದಿಯಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಾಲಯದ ಬಳಿ ಶ್ರೀ ಕನಕ ಸೇವಾ ಟ್ರಸ್ಟ್, ಕುರುಬ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಪುತ್ಥಳಿ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕುರುಬ ಸಮಾಜದ ನಗರ ಘಟಕದ ಅಧ್ಯಕ್ಷ ಕೆ.ಆರ್.ಗೋಪಿ ಮಾತನಾಡಿ, ಕನಕದಾಸರು ಜನ್ಮತಹ ಕುರುಬ ಸಮಾಜದಲ್ಲಿ ಜನಿಸಿದರೂ ವ್ಯಾಸರಾಯರ ಆಶ್ರಯದಲ್ಲಿ ಬೆಳೆದು ಹರಿದಾಸರೆಂದೇ ಪ್ರಖ್ಯಾತಿ ಪಡೆದವರಾಗಿದ್ದಾರೆ. ಆಗಿನ ಕಾಲದಲ್ಲಿದ್ದ ಜಾತಿ ತಾರತಮ್ಯದ ವಿರುದ್ಧ ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂಬಂಥ ಜಾತ್ಯಾತೀತತೆ ಪೋಷಿಸುವ ಹಲವಾರು ಕೀರ್ತನೆಗಳನ್ನು ರಚಿಸಿ ಹಾಡಿದ್ದಾರೆ. ಸಮಾಜದಲ್ಲಿದ್ದ ಜಾತಿ ಪದ್ಧತಿಯ ವಿರುದ್ಧ ಜನರನ್ನು ಜಾಗೃತಗೊಳಿಸಿದ ಮಹಾನ್ ಸಂತ ಕನಕ ಎಂದರು.
- - -
ಚನ್ನಗಿರಿ ಪಟ್ಟಣದ ಕುರುಬರ ಬೀದಿಯಲ್ಲಿ ಶ್ರೀ ಕನಕ ಸೇವಾ ಟ್ರಸ್ಟ್, ಕುರುಬ ಸಮಾಜದಿಂದ ನಡೆದ ಕನಕ ಜಯಂತಿಯಲ್ಲಿ ಕನಕದಾಸರ ಪುತ್ಥಳಿ ಮೆರವಣಿಗೆಗೆ ತಹಸೀಲ್ದಾರ್ ಎನ್.ಜೆ.ನಾಗರಾಜ್ ಚಾಲನೆ ನೀಡಿದರು.