ಕನಕದಾಸರು ತಳ ಸಮುದಾಯದ ಜಾಗೃತ ಧ್ವನಿ

KannadaprabhaNewsNetwork |  
Published : Nov 09, 2025, 02:00 AM IST
ಕನಕದಾಸರು ತಳ ಸಮುದಾಯದ ಜಾಗೃತ ಧ್ವನಿ-ಎಆರ್‌ಕೆ | Kannada Prabha

ಸಾರಾಂಶ

ದಾಸ ಶ್ರೇಷ್ಟ ಕನಕದಾಸ ತಳ ಸಮುದಾಯದ ಜಾಗೃತ ಧ್ವನಿಯಾಗಿದ್ದರು, ಇವರು ಹಾಕಿಕೊಟ್ಟ ಮಾರ್ಗ ಇಂದಿಗೂ ಪ್ರಸ್ತುತವಾಗಿದ್ದು ಈ ದಾರಿಯಲ್ಲಿ ನಾವು ಸಾಗಬೇಕಿದೆ ಎಂದು ಶಾಸಕ ಎ.ಆರ್‌. ಕೃಷ್ಣಮೂರ್ತಿ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ, ಯಳಂದೂರು

ದಾಸ ಶ್ರೇಷ್ಟ ಕನಕದಾಸ ತಳ ಸಮುದಾಯದ ಜಾಗೃತ ಧ್ವನಿಯಾಗಿದ್ದರು, ಇವರು ಹಾಕಿಕೊಟ್ಟ ಮಾರ್ಗ ಇಂದಿಗೂ ಪ್ರಸ್ತುತವಾಗಿದ್ದು ಈ ದಾರಿಯಲ್ಲಿ ನಾವು ಸಾಗಬೇಕಿದೆ ಎಂದು ಶಾಸಕ ಎ.ಆರ್‌. ಕೃಷ್ಣಮೂರ್ತಿ ಸಲಹೆ ನೀಡಿದರು.

ಅವರು ಶನಿವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ದಾಸರ ವಾಣಿ ಅನುಸರಣೆ ಇಂದಿನ ಪೀಳಿಗೆಯ ಅನಿವಾರ್ಯತೆಯಾಗಿದೆ. ಇವರು ನಾಡು ಕಂಡ ಒಬ್ಬ ಶ್ರೇಷ್ಟ ಕವಿ, ದಾರ್ಶನಿಕ, ಸಾಮಾಜಿಕ ಹೋರಾಟಗಾರರಾಗಿದ್ದಾರೆ. ಜಾತಿ,ಮತ, ಧರ್ಮಗಳ ಮೌಢ್ಯತೆ ನಮ್ಮನ್ನು ಇಂದಿಗೂ ಕೂಡ ಆಳುತ್ತಿದೆ. ಇದರಿಂದ ಹೊರ ಬರಬೇಕು. ಈ ನಿಟ್ಟಿನಲ್ಲಿ ಕನಕದಾಸರ ಪದಗಳು, ಇವರ ಜೀವನ ನಮಗೆ ಆದರ್ಶವಾಗಬೇಕು. ಭಕ್ತಿಗೆ ಎಲ್ಲವನ್ನೂ ಓಲೈಸಿಕೊಳ್ಳುವ ಶಕ್ತಿ ಇದೆ ಎಂಬುದ ಪ್ರತೀಕವಾಗಿ ಇವರು ಎಂದೆಂದಿಗೂ ಪ್ರಸ್ತುತವಾಗಿ ನಿಂತಿದ್ದಾರೆ. ಈ ನೆಲೆಗಟ್ಟಿನಲ್ಲೇ ನಮ್ಮ ನಾಡಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಡಳಿವನ್ನು ನಡೆಸುತ್ತಿದ್ದಾರೆ. ಸಮಾಜದಲ್ಲಿ ತುಡಿತಕ್ಕೊಳಗಾದವರ ಗಟ್ಟಿ ಧ್ವನಿಯಾಗಿ ನಿಂತಿದ್ದಾರೆ. ನಾನು ಇಂದು ನನ್ನ ೧೯ ವರ್ಷಗಳ ಸುದೀರ್ಘ ರಾಜಕೀಯ ಸನ್ಯಾಸದಿಂದ ಹೊರ ಬರಲೂ ಕೂಡ ಸಿದ್ಧರಾಮಯ್ಯ ಕಾರಣವಾಗಿದ್ದಾರೆ. ಕನಕದಾಸರ ನೆಲವೀಡಾದ ಕಾಗಿನೆಲೆ ಅಭಿವೃದ್ಧಿಗೆ ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿವೆ. ನನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೌಡಹಳ್ಳಿ, ಹೆದ್ದೆಡೆಹುಂಡಿ, ಗುಂಬಳ್ಳಿ, ತೆಳ್ಳನೂರು, ಸೂರಾಪುರ, ಚಂಗಚಹಳ್ಳಿಗಳ ಕನಕ ಭವನಗಳಿಗೆ ಅನುದಾನವನ್ನು ನಾನು ಹಾಕಿದ್ದೇನೆ. ಕೊಳ್ಳೇಗಾಲದ ಕನಕ ಭವನಕ್ಕೂ ೫೦ ಲಕ್ಷ ರು. ಹಣವನ್ನು ನೀಡಿದ್ದೇನೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹಣವನ್ನು ನೀಡಿ ಇದನ್ನು ಪೂರ್ಣಗೊಳಿಸಲಾಗುವುದು ಎಂದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಎಚ್.ಎಸ್. ಪದ್ಮ ಮುಖ್ಯ ಭಾಷಣಕಾರರಾಗಿ ಮಾತನಾಡಿ, ನಾವು ಸಮಾಜ ಕಂಡ ಶ್ರೇಷ್ಟರ ಜೀವದಂತೆ ಸಾಗುವ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕನಕದಾಸರು ಮೊದಲು ತಮ್ಮನ್ನು ತಾವು ತಿದ್ದುಕೊಂಡು ನಂತರ ಸಮಾಜ ತಿದ್ದುವ ಕೆಲಸವನ್ನು ಮಾಡಿದವರು ಇವರ ನಮಗೆ ಆದರ್ಶವಾಗಬೇಕು. ದೇವರು, ಜಾತಿ, ಧರ್ಮ, ಆಹಾರ, ನಾವು ಇರಬೇಕಾದ ರೀತಿ ಬಗ್ಗೆ ಜಾಗೃತಿ ಮೂಡಿಸಿದ ಸಂತರಾಗಿದ್ದಾರೆ. ನಮ್ಮ ಕುಲವೇ ಆತ್ಮ ಎಂದು ವೈಚಾರಿಕ ನೆಲೆಯನ್ನು ಹುಟ್ಟು ಹಾಕಿದೆ ಮಹಾನ್ ನಾಯಕರಾಗಿದ್ದಾರೆ. ಭಕ್ತಿ ಮಾರ್ಗಕ್ಕೆ ಹೊಸ ರೂಪವನ್ನು ಕೊಟ್ಟ ವ್ಯಕ್ತಿಯಾಗಿದ್ದಾರೆ. ಪುರೋಹಿತ ಶಾಹಿಯಿಂದ ಸಾಮಾನ್ಯರಿಗೆ ದೇವರು ತಂದ ಮಹಾಸಂತರಾಗಿದ್ದಾರೆ. ಇವರ ಕೀರ್ತನೆಗಳಲ್ಲಿ ಜೀವನ ಸಾರ ಅಡಗಿದೆ. ಇವರ ನಳ ಚರಿತ್ರೆ ವಿಚ್ಚೇದನೆ ನೀಡುವ ಸತಿಪತಿಗಳನ್ನು ಕೂಡಿಸುವ ಮಹಾನ್ ಕೃತಿಯಾಗಿದೆ. ತಮ್ಮ ರಾಮಧಾನ್ಯ ಚರಿತೆ ಮೂಲಕ ಆಹಾರ ಸಂಸ್ಕೃತಿಯ ಜೊತೆಗೆ ಒಳಿತು-ಕೆಡಲು, ಮೇಲು-ಕೀಳು, ಕಪ್ಪು-ಬಿಳುಪು ಸೇರಿದಂತೆ ಅನೇಕ ಪ್ರಶ್ನೆಗಳಿಗೆ ಧಾನ್ಯಗಳನ್ನು ಉದಾಹರಿಸಿಕೊಂಡು ಸತ್ಯದ ದರ್ಶನ ಮಾಡಿಸಿದರಾಗಿದ್ದು ಇವರು ನಮಗೆ ಮಾದರಿಯಾಗಬೇಕು ಎಂದರು.

ಜಿಲ್ಲಾ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಎಚ್.ವಿ. ಚಂದ್ರು, ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಪಪಂ ಮಾಜಿ ಅಧ್ಯಕ್ಷೆ ಎಸ್. ಲಕ್ಷ್ಮಿಮಲ್ಲು, ಕುರುಬರ ಸಂಘದ ಅಧ್ಯಕ್ಷ ಕೊಂಡೇಗೌಡ, ಮಾದೇಗೌಡ, ಬಿಳಿಗಿರಿರಂಗನಾಥಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ. ಶ್ರೀನಿವಾಸ್, ತಹಸೀಲ್ದಾರ್ ಎಸ್.ಎಲ್. ನಯನ, ಬಿಇಒ ಮಾರಯ್ಯ, ಯದುಗಿರಿ ಸೇರಿದಂತೆ ಅನೇಕರು ಇದ್ದರು.

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ