ಗೋವಿನಜೋಳ ಬೆಲೆ ದಿಢೀರ್‌ ಕುಸಿತ: ರೈತರು ಕಂಗಾಲು

KannadaprabhaNewsNetwork |  
Published : Nov 09, 2025, 01:45 AM IST
ಗೋವಿನ ಜೋಳದ ಬೆಲೆ ಕುಸಿತ ಕಂಡಿರುವುದರಿಂದ ಗೋವಿನ ಜೋಳ ಬೆಳೆದ ಅಫಜಲ್ಪುರ ತಾಲೂಕಿನ ರೈತರು ಆತಂಕದಲ್ಲಿದ್ದಾರೆ  | Kannada Prabha

ಸಾರಾಂಶ

ತಾಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ಹೆಸರು ಉದ್ದು ತೊಗರಿ ಬೆಳೆ ಸಂಪೂರ್ಣ ಹಾಳಾಗಿದೆ. ಅಲ್ಪಸ್ವಲ್ಪ ಗೋವಿನಜೋಳದ ಫಸಲು ರೈತರ ಕೈ ಸೇರಿದೆ. ಆದರೆ ರೈತರ ಫಸಲು ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ಬೆಲೆ ಕುಸಿತ ಕಂಡಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.

ಬಿಂದುಮಾಧವ ಮಣ್ಣೂರ

ಕನ್ನಡಪ್ರಭ ವಾರ್ತೆ ಅಫಜಲಪುರ

ತಾಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ಹೆಸರು ಉದ್ದು ತೊಗರಿ ಬೆಳೆ ಸಂಪೂರ್ಣ ಹಾಳಾಗಿದೆ. ಅಲ್ಪಸ್ವಲ್ಪ ಗೋವಿನಜೋಳದ ಫಸಲು ರೈತರ ಕೈ ಸೇರಿದೆ. ಆದರೆ ರೈತರ ಫಸಲು ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ಬೆಲೆ ಕುಸಿತ ಕಂಡಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.

ತಾಲೂಕಿನ ರೈತರು ನೀರಾವರಿ ಮತ್ತು ಖುಷ್ಕಿ ಜಮೀನುಗಳಲ್ಲಿ ಗೋವಿನ ಜೋಳ ಬೆಳೆದಿದ್ದು, ನಿತ್ಯ ಮಾರುಕಟ್ಟೆಗೆ ಗೋವಿನ ಜೋಳ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದೆ. ಸುತ್ತಮುತ್ತಲಿನ ಹಳ್ಳಿಗಳಿಂದ ಪ್ರತಿದಿನ ನೂರಾರು ಚೀಲದಷ್ಟು ಗೋವಿನ ಜೋಳದ ಆವಕವಿದೆ. ಕಳೆದೊಂದು ತಿಂಗಳ ಹಿಂದೆ ಗೋವಿನ ಜೋಳ ಪ್ರತಿ ಕ್ವಿಂಟಲ್ ಗೆ ₹2,485 ಇತ್ತು. ಆದರೆ, ಮಾರುಕಟ್ಟೆಗೆ ರೈತರ ಫಸಲು ಬರುತ್ತಿದ್ದಂತೆ ದರದಲ್ಲಿ ಕುಸಿತವಾಗುತ್ತಿದೆ. ಸದ್ಯ ಪ್ರತಿ ಕ್ವಿಂಟಲ್‌ಗೆ ₹1,700ರಿಂದ ₹1900 ರವರೆಗೆ ಮಾರಾಟವಾಗುತ್ತಿದೆ. ಗುಣಮಟ್ಟವಿಲ್ಲದ ಗೋವಿನಜೋಳ ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹1,300ಕ್ಕೆ ಮಾರಾಟವಾಗುತ್ತಿದೆ.

ಗೋವಿನಜೋಳದ ಆವಕ ಕಡಿಮೆಯಿದ್ದಾಗ ಕ್ವಿಂಟಲ್‌ಗೆ ₹2,480ಕ್ಕೆ ಮಾರಾಟವಾಗುತ್ತಿತ್ತು. ಮಾರುಕಟ್ಟೆಗೆ ಫಸಲು ಹೆಚ್ಚಿನ ಪ್ರಮಾಣದಲ್ಲಿ ಆವಕ ಆಗುತ್ತಿರುವುದರಿಂದ ಬೆಲೆ ಕಡಿಮೆಯಾಗಿದೆ. ಅಲ್ಲದೆ ಬೇರೆ ರಾಜ್ಯಗಳಲ್ಲಿಯೂ ರೈತರು ಹೆಚ್ಚಿನ ಪ್ರಮಾಣದಲ್ಲಿ ಗೋವಿನಜೋಳ ಬೆಳೆದಿರುವುದರಿಂದ ಹಾಗೂ ಮಾರುಕಟ್ಟೆಗೆ ಒಮ್ಮೆಲೆ ಫಸಲು ಆವಕ ಆಗುವುದರಿಂದ ಬೆಲೆ ಕಡಿಮೆಯಾಗಿದೆ. ಜಮೀನು ಹದಗೊಳಿಸುವುದು, ಬೀಜ-ಗೊಬ್ಬರ, ಆಳು, ಪಿಳಗುಂಟಿ ಹೊಡೆಯುವುದು, ಕಟಾವು ಮಾಡುವುದು ಸೇರಿದಂತೆ ಎಕರೆಗೆ ₹15ಳ0ರಿಂದ ₹15 ಸಾವಿರದಷ್ಟು ಖರ್ಚಾಗುತ್ತದೆ.

ಪ್ರತಿವರ್ಷ ಮಾರುಕಟ್ಟೆಗೆ ಗೋವಿನ ಜೋಳ ಬಂದಾಗಲೆಲ್ಲ ಬೆಲೆ ಕಡಿಮೆಯಾಗುತ್ತದೆ. ಚುನಾವಣೆ ವೇಳೆ ಭರವಸೆ ನೀಡುವ ರಾಜಕಾರಣಿಗಳು ರೈತನ ಫಸಲಿಗೆ ವೈಜ್ಞಾನಿಕ ಬೆಲೆ ಕೊಡಿಸುವಲ್ಲಿ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ದುರಂತ ಎಂದು ದಯಾನಂದನಗರ ರೈತರಾದ ಅಣ್ಣಪ್ಪ ಬಿಜಾಪುರ, ಭೀಮಣ್ಣ ಹಡಲಗಿ, ಮಲ್ಲಪ್ಪ ಬಿಜಾಪುರ, ಶಾಂತಪ್ಪ ಬಿಜಾಪುರ ಬೇಸರ ವ್ಯಕ್ತಪಡಿಸಿದರು.

ರೈತರಿಗಿಂತ ವರ್ತಕರಿಗೆ ಲಾಭ: ಆಕ್ರೋಶ

ಸಾಲ ಮಾಡಿ ಬಿತ್ತನೆ ಮಾಡಿರುವ ರೈತರು ಸಾಲ ತೀರಿಸಿದರೆ ಸಾಕು ಎಂಬ ಹತಾಶೆಯಿಂದ ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಾರೆ. ಆದರೆ, ರೈತರ ಪರವಾಗಿ ಕೆಲಸ ಮಾಡಬೇಕಾದ ಸರ್ಕಾರಗಳು ರೈತರ ಎಲ್ಲ ಫಸಲು ಮಾರಾಟ ಮಾಡಿದ ಮೇಲೆ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ಆರಂಭಿಸುತ್ತಾರೆ. ರೈತರ ಹೆಸರಿನಲ್ಲಿ ವರ್ತಕರು ಲಾಭ ಪಡೆಯುತ್ತಾರೆಯೇ ಹೊರತು ರೈತರಿಗೆ ಯಾವುದೇ ಲಾಭ ಸಿಗುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ