ಮೇ. 16, 17ರಂದು ಕನಕಗಿರಿ ಉತ್ಸವ: ಸಚಿವ ತಂಗಡಗಿ

KannadaprabhaNewsNetwork |  
Published : Apr 22, 2026, 02:30 AM IST
ಪೋಟೋಕನಕಗಿರಿ ಉತ್ಸವ-2026ರ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಸಚಿವ ಶಿವರಾಜ ತಂಗಡಗಿ ಮಾತನಾಡಿದರು.    | Kannada Prabha

ಸಾರಾಂಶ

ಹಂಪಿ ಸೇರಿದಂತೆ ರಾಜ್ಯದ ಹಲವೆಡೆ ನಡೆದ ಉತ್ಸವಗಳಲ್ಲಿ ಹೆಲಿಕಾಪ್ಟರ್ ವ್ಯವಸ್ಥೆಯೂ ಮಾಡಲಾಗಿತ್ತು. ಅದರಂತೆ ನಮ್ಮ ಉತ್ಸವದಲ್ಲಿಯೂ ಮಾಡಲಾಗುವುದು.

ಕನಕಗಿರಿ: ಮೇ 16 ಹಾಗೂ 17 ಎರಡು ದಿನಗಳ ಕಾಲ ಕನಕಗಿರಿ ಉತ್ಸವವನ್ನು ವಿಭಿನ್ನವಾಗಿ ಆಚರಿಸಲಾಗುತ್ತಿದ್ದು, ಸರ್ಕಾರ ಇದಕ್ಕೆ ₹6 ಕೋಟಿ ಅನುದಾನ ನೀಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

ಅವರು ಪಟ್ಟಣದ ಶ್ರೀಕನಕಾಚಲಪತಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕನಕಗಿರಿ ಉತ್ಸವ 2026ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.

ಕನಕಾಚಲಪತಿ ಜಾತ್ರೆ ಮತ್ತು ಉತ್ಸವ ಎರಡು ಏಕಕಾಲಕ್ಕೆ ನಡೆದರೆ ಜಾತ್ರೆಗೆ ಸೇರುವ ಜನತೆಗೆ ಉತ್ಸವ ನೋಡಲು ಹಾಗೂ ಉತ್ಸವಕ್ಕೆ ಬರುವ ಜನತೆ ಜಾತ್ರೆ ಕೂಡಾ ನೋಡಬೇಕು ಎಂದು ಯೋಚಿಸಿ ಜಾತ್ರೆಯಲ್ಲಿ ಎರಡು ಕಾರ್ಯಕ್ರಮ ನಡೆಸಲು ಇಚ್ಚಿಸಿದ್ದೆ. ಸಾರ್ವಜನಿಕರ ಸಲಹೆಯಂತೆ ಮೇ.9 ಮತ್ತು 10ರಂದು ಸ್ಥಳೀಯವಾಗಿ ದುರ್ಗಾದೇವಿ ಜಾತ್ರೆ ಇರುವುದರಿಂದ ಮೇ 16 ಮತ್ತು ಮೇ 17 ರಂದು ಉತ್ಸವ ಆಚರಿಸಲಾಗುವುದು ಎಂದರು.

ಇನ್ನೂ ಬಿಸಿಲಿನ ಪ್ರಖರತೆ ಹೆಚ್ಚಿರುವುದರಿಂದ ಹಗಲು ಬದಲಾಗಿ ರಾತ್ರಿ ವೇಳೆ ಹೊನಲು ಬೆಳಕಿನಲ್ಲಿ ಕ್ರೀಡಾಕೂಟ ನಡೆಸಲಾಗುವುದು. ಮೇ 14 ಹಾಗೂ 15ರಂದು ಸಂಜೆಯಿಂದ ಮಧ್ಯರಾತ್ರಿವರೆಗೆ ವಾಲ್ಹಿಬಾಲ್‌ ಹಾಗೂ ಕಬಡ್ಡಿ ಪಂದ್ಯಾವಳಿ ನಡೆಸಲಾಗುವುದು. ಉತ್ಸವದ ಎರಡೂ ದಿನಗಳ ಕಾಲ ಗೋಷ್ಠಿ ಆಯೋಜಿಸಲಾಗುವುದು. ತಾಲೂಕಿನಲ್ಲಿ ತೋಟಗಾರಿಕೆ ಬೆಳೆ ಬೆಳೆಯುವುದು ಹೆಚ್ಚಾಗಿರುವುದರಿಂದ ತೋಟಗಾರಿಕೆ ಹಾಗೂ ಆಧುನಿಕ ಕೃಷಿ ಸಾಮಗ್ರಿ ರೈತರಿಗೆ ಪರಿಚಯಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅಲ್ಲದೇ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳ ಬಳಿ ಕನಕಗಿರಿ ಉತ್ಸವದ ಪ್ಲೆಕ್ಸ್ ಅಳವಡಿಸುವುದು, ಸರ್ಕಾರಿ ಬಸ್ ಗಳಿಗೆ ಪೋಸ್ಟರ್ ಅಂಟಿಸಿ ಪ್ರಚಾರ ಕೈಗೊಳ್ಳಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೇ ಸಾಂಸ್ಕೃತಿಕವಾಗಿ ನಿಯಮ ಜಾರಿಗೊಳಿಸುವ ನಿಟ್ಟಿನಲ್ಲಿ ಯೋಚಿಸಿದ್ದು, ಸ್ಥಳೀಯ ಕಲಾವಿದರಿಗೆ ಶೇ. 50 ರಷ್ಟು, ರಾಷ್ಟ್ರೀಯ ಕಲಾವಿದರಿಗೆ 40 ರಷ್ಟು ಹಾಗೂ ಅಂತಾರಾಷ್ಟ್ರೀಯ ಕಲಾವಿದರಿಗೆ ಶೇ.10 ರಷ್ಟು ನಿಗದಿಗೊಳಿಸುವ ಹೊಸ ನಿಯಮ ಜಾರಿಗೆ ತರಲು ಮುದಾಗಿದ್ದೇನೆ ಎಂದರು.

ಇದಕ್ಕೂ ಪೂರ್ವದಲ್ಲಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಮಾತನಾಡಿ, ಉತ್ಸವ ಅಚ್ಚುಕಟ್ಟಾಗಿ ನಡೆಸಲು 18 ಸಮಿತಿ ರಚಿಸಲಾಗಿದೆ. ಈ ಭಾರಿಯೂ ಎರಡು ವೇದಿಕೆಗಳ ನಿರ್ಮಾಣ, ಸ್ಥಳೀಯ ಹಾಗೂ ರಾಜ್ಯದ ಕಲಾವಿದರ ಆಹ್ವಾನಕ್ಕೆ ಕ್ರಮ ವಹಿಸಿದ್ದೇವೆ. ಕ್ರೀಡಾಕೂಟ ಸೇರಿದಂತೆ ಸಭೆಯಲ್ಲಿ ಚರ್ಚೆಯಾಗಿ ನಿರ್ಣಯಿಸುವ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುವುದಾಗಿ ತಿಳಿಸಿದರು.

20 ನಿಮಿಷ ಹೆಲಿಕಾಪ್ಟರ್ ಸುತ್ತಾಟ: ಹಂಪಿ ಸೇರಿದಂತೆ ರಾಜ್ಯದ ಹಲವೆಡೆ ನಡೆದ ಉತ್ಸವಗಳಲ್ಲಿ ಹೆಲಿಕಾಪ್ಟರ್ ವ್ಯವಸ್ಥೆಯೂ ಮಾಡಲಾಗಿತ್ತು. ಅದರಂತೆ ನಮ್ಮ ಉತ್ಸವದಲ್ಲಿಯೂ ಮಾಡಲಾಗುವುದು. ಎರಡರಿಂದ ಮೂರು ಸಾವಿರ ನಿಗದಿಯಾಗಬಹುದು. ಕನಕಗಿರಿಯನ್ನು ಬಾನಂಗಳದಲ್ಲಿ ಕಣ್ತುಂಬಿಕೊಳ್ಳಲು ಇದೇ ಮೊದಲ ಬಾರಿಗೆ ಈ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಚಿವ ತಂಗಡಗಿ ಸ್ಪಷ್ಟಪಡಿಸಿದರು. ಈ ವೇಳೆ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್ ಅರಸಿದ್ದಿ, ಪಪಂ ಅಧ್ಯಕ್ಷ ತನುಶ್ರೀ ರಾಮಚಂದ್ರ, ಉಪಾಧ್ಯಕ್ಷ ಕಂಠರಂಗಪ್ಪ ನಾಯಕ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಡಿವೈಎಸ್ಪಿ ನ್ಯಾಮಗೌಡರ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಮೈಸೂರು ದಸರಾ ಮಾದರಿಯಲ್ಲಿ ಇಡೀ ಕನಕಗಿರಿ ನಗರದ ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪಾಲಂಕಾರ ಮಾಡಲಾಗುವುದು. ಹಂಪಿ ಮಾದರಿ ಲೇಸರ್, ದ್ರೋಣ್ ಸೇರಿದಂತೆ ನಾನಾ ಬಗೆಯ ಲೈಟ್ಸ್ ಅಳವಡಿಸುವ ಮೂಲಕ ಈ ಬಾರಿ ಉತ್ಸವವನ್ನು ವೈಶಿಷ್ಟವಾಗಿ ಆಚರಿಸಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.

ನನ್ನ ವಯಕ್ತಿಕ ಪ್ರತಿಷ್ಠೆ ಇಲ್ಲ: ಸಚಿವ

ವೈಯಕ್ತಿಕ ಪ್ರತಿಷ್ಠೆ ತೆಗೆದುಕೊಂಡು ಉತ್ಸವ ಆಚರಿಸಬೇಕೆನ್ನುವ ಪ್ರತಿಷ್ಠೆ ನನಗಿಲ್ಲ. ಜನರ ಆಶಯಗಳಿಗೆ ಗೌರವ ನೀಡಿ ಉತ್ಸವ ಆಚರಿಸಲು ಮುಂದಾಗಿದ್ದೇನೆ. ಪ್ರತಿಷ್ಠೆ ತೆಗೆದುಕೊಂಡಿದ್ದರೆ ಉತ್ಸವ ಯಾವತ್ತೊ ಮಾಡುತ್ತಿದ್ದೆ. ಪ್ರತಿಷ್ಠೆ ಇಲ್ಲದ ಕಾರಣಕ್ಕೆ ನಾನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉತ್ಸವವನ್ನು ಅರ್ಥಪೂರ್ಣವಾಗಿ ಮಾಡುತ್ತಿದ್ದೇನೆ, ಹೊರತು ರಾಜಕೀಯಕ್ಕಾಗಿ ಅಲ್ಲ ಎಂದು ಸಚಿವ ತಂಗಡಗಿ ವೇದಿಕೆಯಲ್ಲಿಯೇ ಪ್ರತಿಕ್ರಿಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೋಷ ತಿದ್ದಿಕೊಂಡು ನಡೆಯುವಂತಾಗಲಿ: ಮಾಧವಾನಂದಭಾರತೀ ಸ್ವಾಮಿಗಳು
ವಿಜೃಂಭಣೆಯ ಉಜ್ಜಯನಿ ಮರಳುಸಿದ್ದೇಶ್ವರ ಮಹಾರಥೋತ್ಸವ