ಕನಕಗಿರಿ ಉತ್ಸವ ಮುಂದೂಡಿಕೆ, ಜನರಿಗೆ ನಿರಾಸೆ

KannadaprabhaNewsNetwork |  
Published : May 16, 2026, 01:15 AM IST
ಸಸಸ | Kannada Prabha

ಸಾರಾಂಶ

ಉತ್ಸವ ಮುಂದೂಡಲಾಗಿದೆ ಎನ್ನುವ ಜಿಲ್ಲಾಡಳಿತದ ಮೌಖಿಕ ಆದೇಶದಿಂದ ಸರ್ಕಾರದ ಲಕ್ಷಾಂತರ ಅನುದಾನ ನೀರು ಪಾಲಾದಂತಾಗಿದೆ

ಎಂ. ಪ್ರಹ್ಲಾದ್ ಕನಕಗಿರಿ

ಆಡಳಿತಾತ್ಮಕ ಕಾರಣ ನೀಡಿ ಕನಕಗಿರಿ ಉತ್ಸವ-2026ನ್ನು ದಿಢೀರನೇ ಮುಂದೂಡಿರುವ ಜಿಲ್ಲಾಡಳಿತದ ನಡೆಗೆ ಸ್ಥಳೀಯರು ಆಕ್ರೋಶಗೊಂಡಿದ್ದಾರೆ.

ಮೇ 12ರ ಮಂಗಳವಾರ ರಾತ್ರಿ ಜಿಲ್ಲಾಡಳಿತ ದಿಢೀರನೇ ಕನಕಗಿರಿ ಉತ್ಸವವನ್ನು ಆಡಳಿತಾತ್ಮಕ ಕಾರಣ ನೀಡಿ ಮುಂದೂಡಿರುವುದರಿಂದ ಸ್ಥಳೀಯವಾಗಿ ಹಲವು ಬೆಳವಣಿಗೆಗಳು ನಡೆದಿವೆ. ಉತ್ಸವ ಆಚರಣೆಗೆ ಸಾರ್ವಜನಿಕರ ಸಭೆ ಕರೆಯುವ ಜಿಲ್ಲಾಡಳಿತ ಮತ್ತು ಅಧಿಕಾರಿಗಳಿಗೆ ಉತ್ಸವ ಮುಂದೂಡುವಾಗಲೂ ಸಭೆ ಆಯೋಜಿಸಬೇಕು. ಏಕಾಏಕಿ ನಿರ್ಣಯ ಕೈಗೊಳ್ಳಬಾರದು ಎನ್ನುವ ನಿಯಮ ಅಧಿಕಾರಿಗಳು ಅರ್ಥೈಸಿಕೊಳ್ಳಬೇಕು. ದಿಡೀರ್ ನಿರ್ಧಾರ ತೆಗೆದುಕೊಂಡು ಉತ್ಸವ ಮುಂದೂಡಿರುವುದು ಸ್ಥಳೀಯರಿಗೆ ಬೇಸರ ತರಿಸಿದೆ ಅಲ್ಲದೇ ಆಕ್ರೋಶಕ್ಕೂ ಕಾರಣವಾಗಿದೆ.

ಉತ್ಸವ ಆಚರಿಸುವುದಕ್ಕಾಗಿ ನಗರದ ಮೆರವಣಿಗೆ ನಡೆಯುವ ಬೀದಿ, ವೃತ್ತ ಹಾಗೂ ದೇಗುಲಗಳಿಗೆ ವಿದ್ಯುತ್ ದೀಪಾಲಂಕಾರ ಮಾಡುವುದು, ರಾಜಾ ಉಡಚಪ್ಪ ನಾಯಕ ಮುಖ್ಯ ವೇದಿಕೆಯ ನಿರ್ಮಾಣದ ಸಿದ್ಧತೆಯೂ ಎರಡು ದಿನದಲ್ಲೇ ಪೂರ್ಣಗೊಳ್ಳುವ ಹಂತಕ್ಕೆ ಬಂದಿತ್ತು. ಉತ್ಸವಕ್ಕೆ ಬರುವ ಲಕ್ಷಾಂತರ ಜನರಿಗೆ ಊಟದ ಸಿದ್ಧತೆಗಾಗಿ ಆಹಾರ ಧಾನ್ಯ ಹಾಗೂ ತರಕಾರಿ ಸಂಗ್ರಹಕ್ಕಾಗಿ ಮತ್ತು ಜನರು ಊಟ ಮಾಡುವುದಕ್ಕಾಗಿ ಬಿದುರಿನ ಶೆಡ್, ಹೆಲಿಕಾಪ್ಟರ್ ನಿಲುಗಡೆಗೆ ವ್ಯವಸ್ಥೆ ಸೇರಿದಂತೆ ನಾನಾ ಸಿದ್ಧತೆಗಳಿಗಾಗಿ ಉತ್ಸವ ಆಚರಣೆಯ ವಿವಿಧ ಸಮಿತಿಗಳು ಲಕ್ಷಾಂತರ ವೆಚ್ಚ ಮಾಡಿವೆ. ಉತ್ಸವ ಮುಂದೂಡಲಾಗಿದೆ ಎನ್ನುವ ಜಿಲ್ಲಾಡಳಿತದ ಮೌಖಿಕ ಆದೇಶದಿಂದ ಸರ್ಕಾರದ ಲಕ್ಷಾಂತರ ಅನುದಾನ ನೀರು ಪಾಲಾದಂತಾಗಿದೆ.

ಮೇ 16 ಹಾಗೂ17ಕ್ಕೆ ನಿಗದಿಯಾಗಿದ್ದ ಕನಕಗಿರಿ ಉತ್ಸವ ಉದ್ಘಾಟನೆಗೆ ನಾಡದೊರೆ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ ಆದಿಯಾಗಿ ಅನೇಕ ಸಚಿವರು ಆಗಮನಕ್ಕೆ ಕನಕಗಿರಿ ಸಜ್ಜಾಗುತಿತ್ತು. ಈ ನಡುವೆ ಮುಖ್ಯಮಂತ್ರಿಗಳು ಬಿಸಿಲಿನ ಕಾರಣಕ್ಕೆ ಉತ್ಸವ ಮುಂದೂಡಲು ಕಾರಣವಾಗಿದೆ. ಕಳೆದ ವರ್ಷ ಸ್ಥಳೀಯರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಉತ್ಸವ ಆಚರಣೆ ಕೈಬಿಡಲಾಗಿತ್ತು. ಈ ವರ್ಷ ಜನರು ಉತ್ಸವ ಆಚರಿಸುವಂತೆ ಒಕ್ಕೊರಲಿನ ಅಭಿಪ್ರಾಯ ತಿಳಿಸಿದ್ದು, ಸಚಿವರು ಹಾಗೂ ಜಿಲ್ಲಾಡಳಿತ ಉತ್ಸವ ಆಚರಣೆಗಾಗಿ ಸಕಲ ಸಿದ್ಧತೆ ಕೈಗೊಂಡಿದ್ದರು. ಇನ್ನೆನು ಎರಡ್ಮೂರು ದಿನದಲ್ಲಿ ಉತ್ಸವ ನಡೆಯಲಿದೆ ಎನ್ನುವ ಸಂತಸದಲ್ಲಿದ್ದ ಜನರಿಗೆ ಮುಖ್ಯಮಂತ್ರಿಗಳ ಕಚೇರಿ ಬಿಗ್ ಶಾಕ್ ನೀಡಿದೆ.

ಜೂನ್ ನಲ್ಲೂ ಉತ್ಸವ ಅನುಮಾನ?: ಕನಕಗಿರಿ ಉತ್ಸವ ಜೂ.10 ಹಾಗೂ 11ರಂದು ನಡೆಸಲು ಜಿಲ್ಲಾಡಳಿತ ಇಚ್ಛಿಸಿದೆ. ಆದರೆ ಜೂನ್‌ನಲ್ಲೇ ಮುಂಗಾರು ಮಳೆ ಆರಂಭವಾಗಲಿದ್ದು, ರೈತರು ಭಿತ್ತನೆ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಇನ್ನು ಜೂ.10 ರಂದು ಸಚಿವ ತಂಗಡಗಿ ಅವರ ಜನ್ಮದಿನವೂ ಇದೆ. ಜಿಲ್ಲಾ ಕಾಂಗ್ರೆಸ್‌ ಸಚಿವರ ಜನ್ಮದಿನದ ಸಂಭ್ರಮದಲ್ಲಿರುತ್ತದೆ. ಸಚಿವರೂ ಸಹ ದೇವಾಲಯ, ಪೂಜೆ ಎಂದು ಬ್ಯೂಸಿಯಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇಚ್ಛಿಸಿದಂತೆ ಜೂನ್ ನಲ್ಲಿ ಉತ್ಸವ ಆಚರಿಸುವುದು ಅನುಮಾನ ಎಂದೇ ಹೇಳಲಾಗುತ್ತಿದೆ.

ಆಡಳಿತಾತ್ಮಕ ಕಾರಣದಿಂದ ತಾತ್ಕಾಲಿಕವಾಗಿ ಕನಕಗಿರಿ ಉತ್ಸವ ಮುಂದೂಡಲಾಗಿದೆಯೇ ಹೊರತು ಉತ್ಸವ ಆಚರಣೆ ಮಾಡುವುದಿಲ್ಲ ಎಂದು ಹೇಳಿಲ್ಲ.ಉತ್ಸವ ಅಚ್ಚುಕಟ್ಟಾಗಿ ನಡೆಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ತಿಳಿಸಿದ್ದಾರೆ.

ಉತ್ಸವ ಆಚರಣೆಗೆ ಜಿಲ್ಲಾಡಳಿತ ಸಾರ್ವಜನಿಕರನ್ನು ಸಭೆ ಕರೆದು ಚರ್ಚಿಸಿತ್ತು. ಆದರೆ ಮುಂದೂಡುವಾಗ ಯೋಚಿಸಬೇಕಿತ್ತು.

ಜನಪರ ಕೆಲಸ ಮಾಡುವ ಜಿಲ್ಲಾಡಳಿತ ಜನರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ನಿರ್ಣಯ ತೆಗೆದುಕೊಂಡಿರುವುದಕ್ಕೆ ನೋವಾಗಿದೆ. ಉತ್ಸವ ಆಚರಣೆ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು. ಇಲ್ಲವಾದರೆ ಜಿಲ್ಲಾಡಳಿತದ ವಿರುದ್ಧ ಪ್ರತಿಭಟಿಸಬೇಕಾಗುತ್ತದೆ ಎಂದು ಸ್ಥಳೀಯ ಮುಖಂಡ ಅಯ್ಯನಗೌಡ ಅಳ್ಳಳ್ಳಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರ್ಥಿಕ ಸ್ವಾವಲಂಬನೆಗಾಗಿ ದುಡಿಮೆ ಅನಿವಾರ್ಯ
ಗುಳೆ ತಡೆಗಾಗಿ ನರೇಗಾದಡಿಯಲ್ಲಿ ಕೆಲಸ: ಚಿತ್ರಗಾರ