ಕನ್ನಡಪ್ರಭ ವಾರ್ತೆ ಮೈಸೂರುಸಮಾಜದಲ್ಲಿನ ಜಾತಿ ತಾರತಮ್ಯ ತೊಡೆದು ಹಾಕಲು ಕನಕದಾಸ ಕೀರ್ತನೆಗಳು ಸಹಕಾರಿ ಎಂದು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಜಂಟಿ ಆಯುಕ್ತ ಡಾ.ಬಿ.ಟಿ. ಬಾಣೇಗೌಡ ಹೇಳಿದರು.
ಕನ್ನಡ ಜಾನಪದ ಪರಿಷತ್ [ಕಜಾಪ] ಜಿಲ್ಲಾ ಘಟಕವು ಕುವೆಂಪುನಗರದ ಎಂಎಎಸ್ವಿಎಸ್ ಗುರುಕುಲ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ರಾಜ್ಯೋತ್ಸವ ಹಾಗೂ ಶ್ರೀ ಭಕ್ತ ಕನಕದಾಸರ ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.ದಂಡನಾಯಕರಾಗಿದ್ದ ಕನಕರು ಯುದ್ಧದಿಂದ ಹತಾಶರಾಗಿ ಸಂತರಾಗಿ ಬದಲಾದವರು. ದ್ವೇಷ- ಅಸೂಯೆ, ಮೇಲು- ಕೀಳು ಹೋಗಬೇಕು. ಕುಲಕುಲವೆಂದು ಯಾರೂ ಹೊಡೆದಾಡಬಾರದು ಎಂಬುದು ಅವರ ಆಶಯವಾಗಿತ್ತು ಎಂದರು. ಕನ್ನಡ ನಾಡು- ನುಡಿಯ ಬಗ್ಗೆ ಪ್ರತಿಯೊಬ್ಬರೂ ಪ್ರೀತಿ ಹೊಂದಿರಬೇಕು ಎಂದ ಅವರು, ರಾಜ್ಯದಲ್ಲಿ ಕನ್ನಡ ಭಾಷಿಕರನ್ನು ಒಂದೆಡೆ ತರಲು ನಡೆದ ಏಕೀಕರಣ ಚಳವಳಿಯನ್ನು ವಿವರಿಸಿದರು.ಕಾಲೇಜಿನ ಕನ್ನಡ ಉಪನ್ಯಾಸಕ ಎಸ್. ಬಸವರಾಜು ಪ್ರಾಸ್ತಾವಿಕ ಭಾಷಣ ಮಾಡಿ, ವಚನ ಸಾಹಿತ್ಯದ ನಂತರ ಜನರನ್ನು ಎಚ್ಚರಿಸಿದ್ದು ದಾಸ ಸಾಹಿತ್ಯ ಎಂದು ಹೇಳಿದರು. ಕನಕದಾಸರು ಕಾಲಜ್ಞಾನಿ ಹಾಗೂ ಮಹಾಜ್ಞಾನಿಯಾಗಿದ್ದರು ಎಂದು ಅವರು ಬಣ್ಣಿಸಿದರು.ಕನ್ನಡ ಭಾಷೆಗೆ ಹೆತ್ತ ತಾಯಿಗೆ ನೀಡುವಷ್ಟೇ ಪ್ರೀತಿ ತೋರಿಸಬೇಕು. ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ಸಿಗಬೇಕು ಎಂದು ಅವರು ಹೇಳಿದರು.ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪುರಸ್ಕತ ಪತ್ರಿಕಾ ಛಾಯಾಗ್ರಾಹಕರಾದ ಅನುರಾಗ್ ಬಸವರಾಜ್, ಲಕ್ಷ್ಮೀನಾರಾಯಣ ಯಾದವ್, ಖ್ಯಾತ ಜನಪದ ಗಾಯಕ ಅಮ್ಮ ರಾಮಚಂದ್ರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪತ್ರಿಕಾ ಛಾಯಾಗ್ರಾಹಕ ಗವಿಮಠ ರವಿ, ಕಜಾಪ ಜಂಟಿ ಕಾರ್ಯದರ್ಶಿ ಜಿ. ರವಿಶಂಕರ್, ಕಂಸಾಳೆ ಮಲ್ಲೇಶ್, ಸಜ್ಜೆಹುಂಡಿಯ ತಿರುಮಲ್ಲೇಗೌಡ ಅವರನ್ನು ಕಜಾಪ ಜಿಲ್ಲಾಧ್ಯಕ್ಷ ಕ್ಯಾತನಹಳ್ಳಿ ಎಚ್. ಪ್ರಕಾಶ್ ಸನ್ಮಾನಿಸಿದರು.ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ಡಿ. ಕನ್ನಿಕರ್ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲೆ ಡಾ.ಬಿ.ಜಿ. ತನುಜಾ, ಕಜಾಪ ವಿಭಾಗೀಯ ಸಂಚಾಲಕಿ ಡಾ.ಕಾವೇರಿ ಪ್ರಕಾಶ್ ಮುಖ್ಯ ಅತಿಥಿಯಾಗಿದ್ದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಆಶಯ ಭಾಷಣ ಮಾಡಿದರು.ಕನ್ನಡ ಉಪನ್ಯಾಸಕ ಎಸ್. ಬಸವರಾಜು ಪ್ರಾಸ್ತಾವಿಕ ಭಾಷಣ ಮಾಡಿ, ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಎ.ಎಂ. ಜಗದೀಶ್ ಅವರು ಸನ್ಮಾನಿತರನ್ನು ಪರಿಚಯಿಸಿದರು. ಭೂಮಿಕಾ ನಿರೂಪಿಸಿದರು. ಎಚ್.ಎಲ್. ಚಿತ್ರಾ ಹಾಗೂ ಎಸ್. ವೈಷ್ಣವಿ ಪ್ರಾರ್ಥಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪನ್ನಗ ವಿಜಯಕುಮಾರ್, ಮರಿಸ್ವಾಮಿ ಸರ್ವಾರ್ಥ, ಶ್ರೀಧರ್, ಗೀತಾ ಶ್ರೀಧರ್ ಮತ್ತು ತಂಡದವರು, ಅಮ್ಮ ರಾಮಚಂದ್ರ ಗೀತಗಾಯನ ನಡೆಸಿಕೊಟ್ಟರು.