ಮಹಾತ್ಮರ ಜಯಂತಿಗೆ ಶಾಲೆಗೆ ರಜೆ ಬೇಡ: ಹೊರಟ್ಟಿ

KannadaprabhaNewsNetwork | Published : Nov 19, 2024 12:50 AM

ಸಾರಾಂಶ

ಸಂತರ ಜಯಂತಿಯ ದಿನದಲ್ಲಿ ಶಾಲೆ-ಕಾಲೇಜುಗಳು ರಜೆ ಘೋಷಿಸಬಾರದು. ಬದಲು ಯುವ ಜನಾಂಗಕ್ಕೆ ಮಹಾತ್ಮರ ಉದ್ದೇಶಗಳು, ತತ್ವಗಳ ಬಗ್ಗೆ ಜೀವನದಲ್ಲಿ ಅಳವಡಿಸಿಕೊಳ್ಳಲು ಅಂದು ಇಡೀ ದಿನ ಅವಕಾಶ ನೀಡಬೇಕೆಂದು ಬಸವರಾಜ ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಧಾರವಾಡ:

ಇತ್ತೀಚಿನ ದಿನಗಳಲ್ಲಿ ಮಹಾನ್ ವ್ಯಕ್ತಿಗಳನ್ನು ತಮ್ಮ ಜಾತಿ, ಜಾತಿಗಾಗಿ ಮಾತ್ರ ಸೀಮಿತ ಮಾಡಿಕೊಂಡಿದ್ದಾರೆ. ಕನಕದಾಸರು ಕೇವಲ ಕುರುಬರ ಸಮಾಜಕ್ಕೆ ಮಾತ್ರ ಸೀಮಿತರಲ್ಲ. ವಾಲ್ಮೀಕಿ ಸಮಾಜಕ್ಕೂ ಅವರು ಯಾವ ರೀತಿಯಲ್ಲಿ ಕೊಡುಗೆ ಕೊಟ್ಟಿದ್ದಾರೆ ಎಂಬುದು ಅರಿಯಬೇಕೆಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಜಿಲ್ಲಾಡಳಿತವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಲೂರು ವೆಂಕಟರಾವ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ದಾಸ ಶ್ರೇಷ್ಠ ಕನಕದಾಸರ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಅವರು, ಜಯಂತಿಯ ದಿನದಲ್ಲಿ ಶಾಲೆ-ಕಾಲೇಜುಗಳು ರಜೆ ಘೋಷಿಸಬಾರದು. ಬದಲು ಯುವ ಜನಾಂಗಕ್ಕೆ ಮಹಾತ್ಮರ ಉದ್ದೇಶಗಳು, ತತ್ವಗಳ ಬಗ್ಗೆ ಜೀವನದಲ್ಲಿ ಅಳವಡಿಸಿಕೊಳ್ಳಲು ಅಂದು ಇಡೀ ದಿನ ಅವಕಾಶ ನೀಡಬೇಕೆಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಕನಕದಾಸರು 15-16ನೇ ಶತಮಾನದ ದಾಸ ಶ್ರೇಷ್ಠರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಭಕ್ತಿ ಗೀತೆ ರಚಿಸಿದ ಅವರು, ತಮ್ಮ ಗೀತೆಗಳಲ್ಲಿ ದೇವರ ಮೊರೆ ಹೋಗುತ್ತಾರೆ. ಇವರು ಬರೆದಂತಹ ಅನೇಕ ಕೃತಿಗಳಲ್ಲಿ ಪ್ರಮುಖವಾಗಿ ಮೋಹನ ತರಂಗಿಣಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. 316 ಕೀರ್ತನೆಗಳನ್ನು ರಚಿಸಿದ್ದಾರೆ ಎಂದರು.ಉಪನ್ಯಾಸಕ ಡಾ. ಗೋವಿಂದರಾಜ ತಲಕೋಡ ಕನಕದಾಸರ ಜೀವನ, ಸಾಧನೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮನಸೂರು ರೇವಣಸಿದ್ದೇಶ್ವರ ಮಠದ ಡಾ. ಬಸವರಾಜ ದೇವರು ಸಾನ್ನಿಧ್ಯ ವಹಿಸಿದ್ದರು. ಶಾಸಕ ಎನ್.ಎಚ್. ಕೋನರಡ್ಡಿ, ಹುಡಾ ಅಧ್ಯಕ್ಷ ಶಾಕಿರ್ ಸನದಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಅಪರ ಜಿಲ್ಲಾಧಿಕಾರಿ ಗೀತಾ ಸಿಡಿ, ಜಿಲ್ಲಾ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಯಲ್ಲಮ್ಮ ಡಿ. ನಾಯ್ಕರ, ಕುರುಬರ ಸಂಘದ ನಿರ್ದೇಶಕ ದೇವರಾಜ ಕಂಬಳಿ, ನಿರ್ದೇಶಕ ಬಸವರಾಜ ಮಲಕಾರಿ ಮತ್ತಿತರರು ಇದ್ದರು.

Share this article