ಕನ್ನಡಪ್ರಭ ವಾರ್ತೆ ಅರಸೀಕೆರೆ
ಹಲವು ವರ್ಷಗಳಿಂದ ಬರದ ಬವಣೆಯನ್ನು ಅನುಭವಿಸುತ್ತಿರುವ ಈ ಭಾಗದ ರೈತರಿಗೆ ಕಳೆದ ಎರಡು ವರ್ಷಗಳ ಉತ್ತಮ ಮಳೆಯು ಸ್ವಲ್ಪ ನೆಮ್ಮದಿ ನೀಡಿತ್ತು. ಆದರೆ ಪ್ರಸಕ್ತ ವರ್ಷ ಮತ್ತೆ ಮಳೆಯ ಕೊರತೆ ಎದುರಾಗಿರುವುದರಿಂದ ರೈತರಲ್ಲಿ ಆತಂಕ ಮನೆ ಮಾಡಿದೆ. ಮೇ ತಿಂಗಳ ಕೊನೆಯಲ್ಲಿ ಸುರಿದ ಮುಂಗಾರು ಪೂರ್ವ ಮಳೆಯನ್ನು ನಂಬಿ ರೈತರು ಲಕ್ಷಾಂತರ ರುಪಾಯಿ ಸಾಲ ಮಾಡಿ ಬಿತ್ತನೆ ಬೀಜ, ಗೊಬ್ಬರ ಹಾಗೂ ಕೃಷಿ ಸಾಮಗ್ರಿಗಳನ್ನು ಖರೀದಿಸಿ ಬಿತ್ತನೆ ನಡೆಸಿದ್ದರು. ಆದರೆ ಜೂನ್ ಮೊದಲ ವಾರದ ನಂತರ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಬೆಳೆಗಳು ಒಣಗುವ ಸ್ಥಿತಿಗೆ ತಲುಪಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೊಂದೆಡೆ ಬೀಜ, ಗೊಬ್ಬರ ಹಾಗೂ ಕೃಷಿ ಕೂಲಿ ವೆಚ್ಚ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಬೆಳೆ ನಷ್ಟ, ಉತ್ಪಾದನಾ ವೆಚ್ಚದ ಏರಿಕೆ, ಕೃಷಿ ಉತ್ಪನ್ನಗಳಿಗೆ ಸಮರ್ಪಕ ಬೆಲೆ ಸಿಗದಿರುವುದು ಹಾಗೂ ಪರಿಹಾರ ವಿತರಣೆಯಲ್ಲಿನ ವಿಳಂಬದಿಂದ ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಕೆಲವು ಸಂದರ್ಭಗಳಲ್ಲಿ ಗುಣಮಟ್ಟದ ಪರಿಶೀಲನೆಯಿಲ್ಲದೆ ವಿತರಿಸಲಾಗುವ ಬಿತ್ತನೆ ಬೀಜಗಳಿಂದಲೂ ಬೆಳೆ ಹಾನಿಯಾಗುತ್ತಿರುವುದಾಗಿ ರೈತರು ಆರೋಪಿಸಿದ್ದಾರೆ. ಕೃಷಿ ಇಲಾಖೆ ಈ ಕುರಿತು ಸೂಕ್ತ ತನಿಖೆ ನಡೆಸಿ, ಬೀಜದ ದೋಷದಿಂದ ಬೆಳೆ ಹಾನಿಯಾದ ರೈತರಿಗೆ ಪರಿಹಾರ ನೀಡಬೇಕು ಎಂಬುದು ಅವರ ಆಗ್ರಹವಾಗಿದೆ.ಪ್ರಕೃತಿಯ ವೈಪರೀತ್ಯ, ಮಳೆಯ ಅಭಾವ, ಕಾಡುಪ್ರಾಣಿಗಳ ಹಾವಳಿ ಹಾಗೂ ಹೆಚ್ಚುತ್ತಿರುವ ಕೃಷಿ ವೆಚ್ಚಗಳ ನಡುವೆ ರೈತರ ಬದುಕು ಇಕ್ಕಟ್ಟಿನ ಪರಿಸ್ಥಿತಿಗೆ ತಲುಪಿದೆ. ಇಂತಹ ಸಂದರ್ಭದಲ್ಲಿ ಕಚೇರಿಗಳಲ್ಲೇ ಕುಳಿತು ವರದಿ ಸಲ್ಲಿಸುವ ಬದಲು ಸಂಬಂಧಪಟ್ಟ ಅಧಿಕಾರಿಗಳು ಕಣಕಟ್ಟೆ ಹೋಬಳಿ ಸೇರಿದಂತೆ ಉತ್ತರ ಭಾಗದ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಬೆಳೆ ಹಾನಿಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.ಪ್ರಸ್ತುತ ಹಾಸನ ಜಿಲ್ಲೆಯ ಮಟ್ಟದಲ್ಲಿ ನಡೆಸುವ ಸಾಮಾನ್ಯ ಸಮೀಕ್ಷೆಯಿಂದ ಅರಸೀಕೆರೆ ತಾಲೂಕಿನ ಉತ್ತರ ಭಾಗದ ನೈಜ ಪರಿಸ್ಥಿತಿ ಸರ್ಕಾರದ ಗಮನಕ್ಕೆ ಬರುತ್ತಿಲ್ಲ. ಹೀಗಾಗಿ ಕಣಕಟ್ಟೆ ಹೋಬಳಿ ಸೇರಿದಂತೆ ತೀವ್ರ ಬರಪೀಡಿತ ಪ್ರದೇಶಗಳಲ್ಲಿ ವಿಶೇಷ ಸಮೀಕ್ಷೆ ನಡೆಸಿ, ಬೆಳೆ ನಷ್ಟ ಪರಿಹಾರ, ಬೆಳೆ ಸಾಲ ಮರುಪಾವತಿಗೆ ವಿನಾಯಿತಿ, ಬ್ಯಾಂಕ್ ಸಾಲ ಮರುಹೊಂದಿಕೆ ಹಾಗೂ ಅಗತ್ಯವಿದ್ದಲ್ಲಿ ರೈತರ ಸಾಲಮನ್ನಾ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.ಮಳೆಯ ನಿರೀಕ್ಷೆಯಲ್ಲಿ ಕೃಷಿ ಮಾಡಿದ್ದ ರೈತರು ಇಂದು ಬೆಳೆ ಒಣಗುತ್ತಿರುವುದನ್ನು ಅಸಹಾಯಕರಾಗಿ ನೋಡುವಂತಾಗಿದೆ. ಸರ್ಕಾರ ತಕ್ಷಣ ಸ್ಪಂದಿಸಿ ರೈತರ ನೆರವಿಗೆ ಧಾವಿಸದಿದ್ದರೆ ಈ ಭಾಗದ ರೈತ ಸಮುದಾಯ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.