ಕೂಡ್ಲಿಗಿ ತಾಲೂಕಿನ ಕಾನಾಮಡಗು ಶ್ರೀ ಶರಣಬಸವೇಶ್ವರ ಸ್ವಾಮಿ ರಥೋತ್ಸವ ಡಿ. 22ರಂದು ಸಂಜೆ 4 ಗಂಟೆಗೆ ನಡೆಯಲಿದೆ. ದಾಸೋಹ ಮಠದ ಆರಾಧ್ಯದೈವ ಶ್ರೀ ಶರಣಬಸವೇಶ್ವರ ಸ್ವಾಮಿಯ ಸುಂದರ ರಥೋತ್ಸವ ಕಾರ್ತೀಕ ಮಾಸದಲ್ಲಿ ನಡೆಯುವುದು ಈ ಭಾಗದಲ್ಲಿ ಅಪರೂಪವೇ ಸರಿ. ಈ ಭಾಗದ ರೈತರು, ಭಕ್ತರು ತಮ್ಮ ಜಮೀನುಗಳಲ್ಲಿ ಬೆಳೆದ ಮೊದಲ ಫಸಲು ಇಲ್ಲಿಯ ದಾಸೋಹಮಠಕ್ಕೆ ತಂದು ಅರ್ಪಿಸುತ್ತಾರೆ.
ಭೀಮಣ್ಣ ಗಜಾಪುರ
ಕೂಡ್ಲಿಗಿ: ಕಲ್ಲುಸೀಮೆಯ ಕಾಶಿ ಎಂದೇ ಜನಪ್ರಿಯವಾಗಿರುವ ತಾಲೂಕಿನ ಗಡಿಗ್ರಾಮ ಕಾನಾಮಡಗು ಶ್ರೀ ಶರಣಬಸವೇಶ್ವರ ಸ್ವಾಮಿಯ ಮಠ ಇಂದಿಗೂ ಸರಿಹೊತ್ತಿನಲ್ಲೂ ಹಸಿದು ಬಂದವರಿಗೆ ಅನ್ನಹಾಕುವ ಸಂಸ್ಕೃತಿ ಬೆಳೆಸಿಕೊಂಡು ಬಂದಿದ್ದು, ಸಹಸ್ರಾರು ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಣದ ಕಾಶಿಯೂ ಆಗಿದೆ. ಇಂತಹ ಪುಣ್ಯದ ನೆಲದಲ್ಲಿ ಡಿ. 22ರಂದು ಸಂಜೆ 4 ಗಂಟೆಗೆ ಶ್ರೀ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ನಡೆಯಲಿದೆ. ರಥೋತ್ಸವ ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಕಾನಾಮಡಗು ದಾಸೋಹ ಮಠದಲ್ಲಿ ನಿತ್ಯಾನ್ನ ದಾಸೋಹ ಕಂಡು 1903ರಲ್ಲಿಯೇ ಅಂದಿನ ಮದ್ರಾಸ್ ಸರ್ಕಾರ ಪ್ರಶಸ್ತಿ ನೀಡಿತ್ತು. ಅಲ್ಲದೇ ಇಂಗ್ಲೆಂಡ್‌ನ ದೊರೆ ಐದನೇ ಎಡ್ವರ್ಡ್ ಸಹ ಕಾನಾಮಡಗು ಮಠವನ್ನು ವೀಕ್ಷಿಸಿ, ಇಲ್ಲಿಯ ಅಕ್ಷರ ದಾಸೋಹ, ಅನ್ನದಾಸೋಹ ಕಂಡು ಬೆರಗಾಗಿ ಮಠಕ್ಕೆ ಪ್ರಶಂಸೆ ಪತ್ರ ನೀಡಿದ್ದರು. ದಾಸೋಹ ಮಠದ ಆರಾಧ್ಯದೈವ ಶ್ರೀ ಶರಣಬಸವೇಶ್ವರ ಸ್ವಾಮಿಯ ಸುಂದರ ರಥೋತ್ಸವ ಕಾರ್ತೀಕ ಮಾಸದಲ್ಲಿ ನಡೆಯುವುದು ಈ ಭಾಗದಲ್ಲಿ ಅಪರೂಪವೇ ಸರಿ. ತಮ್ಮ ಮನೆಯ ಆಕಳು ಕರು ಹಾಕಿದರೆ ಮೊದಲ ಗಿಣ್ಣದ ಹಾಲು ಕೂಡ ಶರಣಪ್ಪನ ಮಠಕ್ಕೆ ತಂದು ಕೊಡುತ್ತಾರೆ. ಈ ಮಠದ ಉಸ್ತುವಾರಿ ನೋಡಿಕೊಳ್ಳುವ ಶರಣಾರ್ಯರ ವಂಶಸ್ಥರು ಇದ್ದು, ರೈತರು ಕೊಟ್ಟ ದವಸ-ಧಾನ್ಯಗಳನ್ನು ಕೆರೆಯ ನೀರನ್ನು ಕೆರೆಗೆ ಚೆಲ್ಲುವಂತೆ ದಿನನಿತ್ಯ ಮಠಕ್ಕೆ ಬರುವ ಭಕ್ತಾದಿಗಳಿಗೆ, ಬಡ ವಿದ್ಯಾರ್ಥಿಗಳಿಗೆ ನಿತ್ಯಾನ್ನ ದಾಸೋಹ ರೂಪದಲ್ಲಿ ಉಣಬಡಿಸುತ್ತಾರೆ. ಈ ಮಠದ ಐಮಡಿ ಶರಣಾರ್ಯರು 50 ವರ್ಷಗಳ ಹಿಂದೆಯೇ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭ ಮಾಡಿದ್ದರಿಂದ ಈ ಗ್ರಾಮದ ಸುತ್ತಮುತ್ತಲ ಪ್ರದೇಶಗಳಲ್ಲೀಗ ಮನೆಗೆ ಕನಿಷ್ಠ ಇಬ್ಬರು ಶಿಕ್ಷಕರಿದ್ದಾರೆ. ಪ್ರಾಥಮಿಕ ಶಾಲೆಯಿಂದ ಪದವಿ ವರೆಗೂ ಕಾನಾಮಡಗು ಗ್ರಾಮದಲ್ಲಿ ವಿದ್ಯಾಸಂಸ್ಥೆಗಳಿದ್ದು, ಈ ಊರೇ ಒಂದು ವಿಶ್ವವಿದ್ಯಾಲಯದಂತಿದೆ. ನೂರಾರು ವರ್ಷಗಳ ಇತಿಹಾಸ: ನಾಡಿನ ಹೆಸರಾಂತ ಸಾಹಿತಿ ಹಿ.ಮ. ನಾಗಯ್ಯ, ಎಚ್.ಎಂ. ಮರುಳಸಿದ್ದಯ್ಯ, ಕೋ. ಚನ್ನಬಸಪ್ಪ, ಎಸ್.ಎಂ. ವೖಷಭೇಂದ್ರಸ್ವಾಮಿ ಸೇರಿದಂತೆ ಹಲವಾರು ದಿಗ್ಗಜ ಸಾಹಿತಿಗಳು, ಉನ್ನತ ಹುದ್ದೆ ಅಲಂಕರಿಸಿರುವ ಗಣ್ಯರು ಸಹ ಈ ಮಠದಲ್ಲಿಯೇ ಓದಿರುವುದು. ಈ ಭಾಗದ ರೈತರು, ಭಕ್ತರು ತಮ್ಮ ಜಮೀನುಗಳಲ್ಲಿ ಬೆಳೆದ ಮೊದಲ ಫಸಲು ಇಲ್ಲಿಯ ದಾಸೋಹಮಠಕ್ಕೆ ತಂದು ಅರ್ಪಿಸುತ್ತಾರೆ. ಹಸಿದು ಬಂದವರಿಗೆ ಮದ್ಯರಾತ್ರಿಯಲ್ಲಿಯೂ ನೂರಾರು ವರ್ಷಗಳ ಕಾಲ ಅನ್ನದಾಸೋಹ ಮಾಡುತ್ತಾ ಬಂದಿದ್ದು, ಜತೆಗೆ ಜ್ಞಾನದಾಸೋಹ ಮಾಡುತ್ತಾ ಬಂದಿದೆ. ಇಟ್ಟಿಗೆ ಗಾರೆಗಳಿಂದ ನಿರ್ಮಿಸಿರುವ ಇಲ್ಲಿಯ ಆರಾಧ್ಯದೈವ ಶ್ರೀ ಶರಣಬಸವೇಶ್ವರ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ ಎನ್ನುತ್ತಾರೆ ಕಾನಾಮಡಗು ದಾಸೋಹ ಮಠದ ಧರ್ಮಾಧಿಕಾರಿ ಶ್ರೀ ಐಮಡಿ ಶರಣಾರ್ಯರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.