ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಸಾಯವಯ ಮೇಳದ ಅಂಗವಾಗಿ ಹಮ್ಮಿಕೊಂಡ ಸಿರಿಧಾನ್ಯ ನಡಿಗೆಗೆ ಜಿ.ಪಂ ಸಿಇಒ ಶಶೀಧರ ಕುರೇರ ಜತೆಗೆ ಜಂಟಿಯಾಗಿ ಗುರುವಾರ ಚಾಲನೆ ನೀಡಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶೀಧರ ಕುರೇರ ಮಾತನಾಡಿ, ವಿಶ್ವ ಸಂಸ್ಥೆಯು 2023ನ್ನು ವಿಶ್ವ ಸಿರಿಧಾನ್ಯ ದಿನವನ್ನಾಗಿ ಆಚರಿಸುತ್ತಿದ್ದು, ಸಿರಿಧಾನ್ಯಗಳ ಬಳಕೆಯಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಇವುಗಳ ಬಳಕೆಯಿಂದ ಹಲವು ರೋಗಳಿಂದ ಮುಕ್ತರಾಗಬಹುದು ಎಂದು ತಿಳಿಸಿದರು.ಸಿರಿಧಾನ್ಯ ನಡಿಗೆ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ಪೊಲೀಸ್ ಪ್ಯಾಲೇಸ್, ಎಲ್.ಐ.ಸಿ ವೃತ್ತ, ಎಸ್.ಬಿ.ಐ ಬ್ಯಾಂಕ್, ಜಿಲ್ಲಾ ಆಸ್ಪತ್ರೆ, ಕಾಳಿದಾಸ ಸರ್ಕಲ್ ಮಾರ್ಗವಾಗಿ ವಿದ್ಯಾಗಿರಿ ಎಂಜಿನಿಯರಿಂಗ್ ವೃತ್ತಕ್ಕೆ ಆಗಮಿಸಿ ಮುಕ್ತಾಯಗೊಂಡಿತು. ವಿದ್ಯಾಗಿರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಸಿರಿಧಾನ್ಯಗಳ ಬಳಕೆ, ಅವುಗಳ ಮಹತ್ವ ಮತ್ತು ಸಾವಯವ ಕೃಷಿಗೆ ಒತ್ತು ನೀಡಲು ಉತ್ತೇಜಿಸಲಾಯಿತು. ನಡಿಗೆಯಲ್ಲಿ 25 ಸೈಕ್ಲಿಸ್ಟ್ ಗಳು, ಎತ್ತಿನ ಬಂಡಿಗಳು, ಕಿವುಡ ಮತ್ತು ಮೂಕ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ನರ್ಸಿಂಗ್ ವಿದ್ಯಾರ್ಥಿಗಳು ಮಾರ್ಗದುದ್ದಕ್ಕೂ ಸಿರಿಧಾನ್ಯಗಳ ಜಾಗೃತಿ ಘೋಷಣೆಗಳನ್ನು ಕೂಗಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಜಿ.ಪಂ ಮುಖ್ಯ ಯೋಜನಾಧಿಕಾರಿ ಪುನಿತ್, ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟೆ, ಪಶು ಇಲಾಖೆ ಉಪನಿರ್ದೇಶಕ ಎಸ್.ಎಚ್. ಕರಡಿಗುಡ್ಡ, ಕೃಷಿ ಇಲಾಖೆ ಉಪನಿರ್ದೇಶಕ ಎಲ್.ಐ. ರೂಢಗಿ, ಕೆ.ಎಸ್. ಅಗಸಿನಾಳ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಪಿ.ಕೆ. ಪಾಟೀಲ ಸೇರಿದಂತೆ ಇತರರು ಪಾಲ್ಗೊಂಡಿದ್ದರು.