ಮಡಿಕೇರಿ: ನಗರದ ಗೌಳಿಬೀದಿಯ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.ಶ್ರೀ ಕೃಷ್ಣಾಷ್ಟಮಿ ಪ್ರಯುಕ್ತ ದೇವಾಲಯದಲ್ಲಿ ರಾತ್ರಿ ವಿಶೇಷ ಪೂಜೆ ನೆರವೇರಿತು. ಶ್ರೀ ರಾಮಾಂಜನೇಯ ಭಜನಾ ಮಂಡಳಿಯ ವತಿಯಿಂದ ವಿಶೇಷ ಭಜನಾ ಕಾರ್ಯಕ್ರಮವೂ ನಡೆಯಿತು.
ಮಕ್ಕಳಿಗಾಗಿ ಆಯೋಜಿಸಿದ್ದ ಶ್ರೀ ಕೃಷ್ಣ ಹಾಗೂ ರಾಧೆಯ ಛದ್ಮವೇಷ ಸ್ಪರ್ಧೆ ಕೂಡ ಎಲ್ಲರ ಗಮನ ಸೆಳೆಯಿತು. 30ಕ್ಕೂ ಅಧಿಕ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಛದ್ಮವೇಷ ಸ್ಪರ್ಧೆಯಲ್ಲಿ ಆಯುಷ್ ಪ್ರಥಮ, ರಿಯಾಂಶಿ ದ್ವಿತೀಯ ಹಾಗೂ ಆದಿತ್ ತೃತೀಯ ಸ್ಥಾನ ಪಡೆದುಕೊಂಡರು.
ತೀರ್ಪುಗಾರರಾಗಿ ಉಪನ್ಯಾಸಕಿ ಹಾಗೂ ಸಾಹಿತಿ ಜಯಲಕ್ಷ್ಮಿ ಕೆ., ಮೈಸೂರಿನ ಹಿಂದೂಸ್ತಾನ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರಿಯ ರವಿಕುಮಾರ್ ಹಾಗೂ ಅಂಗನವಾಡಿ ಶಿಕ್ಷಕಿ ಎನ್.ಎ. ಗೀತಾ ಕಾರ್ಯನಿರ್ವಹಿಸಿದರು.ಸಮಾರೋಪ ಸಮಾರಂಭದಲ್ಲಿ ಮೊಸರು ಕುಡಿಕೆ ಸ್ಪರ್ಧೆಯ ವಿಜೇತರಾದ ಕಿರಣ್ ಕನಕರಾಜ್ ಹಾಗೂ ಅರುಣ್ ಚಿನ್ನಣ್ಣ ಅವರನ್ನು ದೇವಾಲಯ ಸಮಿತಿ ವತಿಯಿಂದ ಸಾಂಪ್ರದಾಯಿಕ ಬಹುಮಾನ ನೀಡಿ ಸನ್ಮಾನಿಸಲಾಯಿತು.