ತಾಲೂಕು ಯೋಜನಾಧಿಕಾರಿ ರೂಪಾ ಜಿ. ಜೈನ್
ಕೆರೆ ಅಭಿವೃದ್ಧಿ ಕಾರ್ಯಕ್ರಮ ರೈತರ ಕೃಷಿ ಬೆಳವಣಿಗೆಗೆ ಪೂರಕವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಿಕ್ಕಮಗಳೂರು ತಾಲೂಕು ಯೋಜನಾಧಿಕಾರಿ ರೂಪಾ ಜಿ. ಜೈನ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಚಿಕ್ಕಮಗಳೂರಿನಿಂದ ತಾಲೂಕಿನ ಲಕ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆಹಳ್ಳಿ ಗೌಡನಕಟ್ಟೆ ಕೆರೆ ಹೂಳೆತ್ತುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ವೀರೇಂದ್ರ ಹೆಗ್ಗಡೆ ಆಶಯದಂತೆ ಗೌಡನಕಟ್ಟೆ ಕೆರೆಯನ್ನು 2025-26ನೇ ಸಾಲಿನಲ್ಲಿ ಪುನಶ್ಚೇತನ ಕಾರ್ಯಕ್ರಮ ಸ್ಥಳೀಯ ಕೆರೆ ಅಭಿವೃಧ್ಧಿ ಸಮಿತಿ ಸಹಕಾರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.ಕೆರೆ ಹೂಳೆತ್ತುವುದರಿಂದ ಕೆರೆ ನೀರಿನ ಸಂಗ್ರಹ ಹೆಚ್ಚಾಗುವ ಜತೆಗೆ ಬೇಸಿಗೆ ಕಾಲದಲ್ಲಿ ಜನ-ಜಾನುವಾರು ಮತ್ತು ಪ್ರಾಣಿ-ಪಕ್ಷಿಗಳ ಸಂಕುಲಕ್ಕೆ ಕುಡಿಯುವ ನೀರಿನ ದಾಹ ನೀಗಿಸಲು ಸಹಕಾರಿ. ರೈತರ ಕೃಷಿಗೆ ಪೂರಕವಾದ ಕೆರೆ ಹೂಳೆತ್ತುವ ಕಾರ್ಯಕ್ಕೆ ಸ್ಥಳೀಯ ಗ್ರಾಮಸ್ಥರು ಮತ್ತು ಈ ಭಾಗದ ರೈತರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ನಾಗರಾಜ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಗೊಂಡ ಗೌಡನಕಟ್ಟೆ ಕೆರೆ ಅಭಿವೃದ್ಧಿಗೆ ಲಕ್ಯಾ ಗ್ರಾಪಂ ತನ್ನ ಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.