ಕಸಾಪಕ್ಕೆ ಆಯ್ಕೆಯಾದರೇ ಕನ್ನಡ ಹೋರಾಟಗಾರರಿಗೆ ಸೂಕ್ತ ಸ್ಥಾನಮಾನ

KannadaprabhaNewsNetwork |  
Published : Jul 21, 2026, 03:00 AM IST
ಬೆಲಗಾವಿಯಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರೊಂದಿಗೆ ಸಡೆದ ಸಭೆಯಲ್ಲಿ ಡಾ.ಸಿ.ಸೋಮಶೇಖರ ಮಾತನಾಡಿದರು | Kannada Prabha

ಸಾರಾಂಶ

ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು, ಅಧ್ಯಕ್ಷರಾಗಿ ಆಯ್ಕೆಯಾದರೇ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಘಟಕಗಳಲ್ಲಿ ಕನ್ನಡಪರ ಹೋರಾಟಗಾರರಿಗೆ ಸೂಕ್ತ ಸ್ಥಾನಮಾನ ನೀಡಲು ಬದ್ಧನಾಗಿದ್ದೇನೆ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ ವಾಗ್ದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು, ಅಧ್ಯಕ್ಷರಾಗಿ ಆಯ್ಕೆಯಾದರೇ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಘಟಕಗಳಲ್ಲಿ ಕನ್ನಡಪರ ಹೋರಾಟಗಾರರಿಗೆ ಸೂಕ್ತ ಸ್ಥಾನಮಾನ ನೀಡಲು ಬದ್ಧನಾಗಿದ್ದೇನೆ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ ಭರವಸೆ ನೀಡಿದರು.

ನಗರದಲ್ಲಿ ಸೋಮವಾರ ನಡೆದ 25ಕ್ಕೂ ಹೆಚ್ಚು ಸಮಾನ ಮನಸ್ಕ ಕನ್ನಡ ಸಂಘಟನೆಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ತನ್ನ ಮೂಲ ಧ್ಯೇಯದಿಂದ ದೂರ ಸರಿದಿದ್ದು, ಅದರ ಇಂದಿನ ಸ್ಥಿತಿ ನೋವುಂಟು ಮಾಡಿದೆ. ಪರಿಷತ್ತಿನ ಘನತೆ ಮತ್ತು ಜನವಿಶ್ವಾಸವನ್ನು ಮರುಸ್ಥಾಪಿಸುವ ಉದ್ದೇಶದಿಂದ ನವೆಂಬರ್‌ನಲ್ಲಿ ನಡೆಯಲಿರುವ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದಾಗಿ ಘೋಷಿಸಿದರು.ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಜಿಲ್ಲಾಧಿಕಾರಿಯಾಗಿ ಹಾಗೂ ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಕನ್ನಡದ ಅನುಷ್ಠಾನಕ್ಕಾಗಿ ಕೈಗೊಂಡ ಕ್ರಮಗಳನ್ನು ವಿವರಿಸಿದ ಅವರು, ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾದರೇ ಅಧಿಕಾರಿಯಂತೆ ಅಲ್ಲ, ಕನ್ನಡ ಪರ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಘೋಷಣೆ ಮಾಡಿದರು.ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸುವಂತೆ ಕಳೆದ 4 ತಿಂಗಳಿಂದ ಕನ್ನಡ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ. ಈ ಕುರಿತು ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಮೂ.ನಾಗಮೋಹನದಾಸರು ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರಕ್ಕೂ ತಮ್ಮ ಬೆಂಬಲವಿದೆ ಎಂದರು.ಕನ್ನಡ ಸಂಘಟನೆಗಳ ಮುಖಂಡರಾದ ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ, ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ, ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಶಿವಾರೆಡ್ಡಿ ಹುಚ್ಚರೆಡ್ಡಿ, ಸರ್ವೋದಯ ಸಂಘದ ಅಧ್ಯಕ್ಷ ಶ್ರೀನಿವಾಸ ತಾಲೂಕರ, ಸಿದ್ದಲಿಂಗಪ್ಪ, ರೇಖಾ ಯಕ್ಕುಂಡಿ, ಎಸ್.ಎಸ್.ಮೂಕನವರ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜಿದ್ ಹಿರೆಕೋಡಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಾಹಿತಿಗಳು ಸರ್ಕಾರದ ಪ್ರಶಸ್ತಿ ಹಾಗೂ ಹುದ್ದೆಗಳಿಗಷ್ಟೇ ಆದ್ಯತೆ ನೀಡುತ್ತಿದ್ದಾರೆ. ಆದರೆ, ಕನ್ನಡದ ಪರ ಹೋರಾಟಗಳಿಗೆ ಬೆಂಬಲವಾಗಿ ಒಂದು ಹೇಳಿಕೆಯನ್ನೂ ನೀಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಗಡಿ ಭಾಗಕ್ಕೂ ಡಾ.ಸೋಮಶೇಖರ ಅವರಿಗೂ ಇರುವ ದೀರ್ಘ ನಂಟನ್ನು ವಿವರಿಸಿದರು. ನಾಗನೂರು ರುದ್ರಾಕ್ಷಿ ಮಠದಲ್ಲಿ ಕನ್ನಡ ಸಂಘಟನೆಗಳ ಮತ್ತೊಂದು ಸಭೆ ನಡೆಸಿ, ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಬೆಂಬಲ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ಸಾಹಿತಿ ಅಶೋಕ ಮಳಗಲಿ ಸ್ವಾಗತಿಸಿದರು.ಬೆಳಗಾವಿಯ ನೆಹರೂ ನಗರದಲ್ಲಿ ಸರ್ಕಾರದ ₹7 ಕೋಟಿ ಅನುದಾನದಲ್ಲಿ ನಿರ್ಮಿಸಲಾದ ಕನ್ನಡ ಭವನದ ಉಸ್ತುವಾರಿಯನ್ನು ಖಾಸಗಿ ಸಂಘಕ್ಕೆ ನೀಡುವ ಕುರಿತು ತಾವು ಬರೆದ ಪತ್ರ ಆದೇಶವಲ್ಲ. ಕನ್ನಡ ಭವನವು ಸರ್ಕಾರದ ಆಸ್ತಿಯಾಗಿದ್ದು, ತಮ್ಮ ಸಹಿಯಿರುವ ಪತ್ರವನ್ನು ಆದೇಶವೆಂದು ಬಿಂಬಿಸಿರುವುದು ತಮ್ಮ ಗಮನಕ್ಕೆ ಬಂದಿದೆ. ಈ ಕುರಿತು ಸರ್ಕಾರಕ್ಕೆ ಸ್ಪಷ್ಟನೆ ಪತ್ರ ಸಲ್ಲಿಸುವೆ.

-ಡಾ.ಸಿ.ಸೋಮಶೇಖರ,

ನಿವೃತ್ತ ಐಎಎಸ್ ಅಧಿಕಾರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಶ್ವತ ನಿವಾಸಿ ಪತ್ರ ಆತಂಕಕಾರಿ: ಅಶೋಕ್‌
ಮೋದಿ ದುರ್ಬಲ, ದುಷ್ಟರಕ್ಷಕ ಪ್ರಧಾನಿ: ಸಿದ್ದು ಕಿಡಿ