ವಿದ್ಯಾರ್ಥಿಗಳಿಗೆ ಕನ್ನಡ ಪ್ರಜ್ಞೆ, ಕನ್ನಡದ ಬಗ್ಗೆ ತಿಳಿವಳಿಕೆ ಮುಖ್ಯ: ಡಾ ಮೀರಾಶಿವಲಿಂಗಯ್ಯ

KannadaprabhaNewsNetwork | Published : Dec 17, 2024 12:46 AM

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳಲ್ಲಿ ಕನ್ನಡದ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಲು ರಸಪ್ರಶ್ನೆ ಕಾರ್ಯಕ್ರಮವನ್ನು ಶಾಲಾ ವಿಭಾಗ, ಕಾಲೇಜು ವಿಭಾಗ ಹಾಗೂ ತಾಲೂಕು ಮಟ್ಟದಲ್ಲಿ ಮೂರು ಹಂತವಾಗಿ ಏರ್ಪಡಿಸಿದೆ. ಇಂದು ಪ್ರೌಢಶಾಲಾ ವಿಭಾಗ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಜಿಲ್ಲಾ ಮಟ್ಟದಲ್ಲಿ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವಿದ್ಯಾರ್ಥಿಗಳಿಗೆ ಕನ್ನಡ ಪ್ರಜ್ಞೆ, ಕನ್ನಡದ ಬಗ್ಗೆ ತಿಳಿವಳಿಕೆ ಬಹಳ ಮುಖ್ಯ ಎಂಬ ನಿಟ್ಟಿನಲ್ಲಿ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಕಸಾಪ ಜಿಲ್ಲಾ ಸಂಚಾಲಕಿ ಡಾ. ಮೀರಾಶಿವಲಿಂಗಯ್ಯ ತಿಳಿಸಿದರು.

ನಗರದ ಎಸ್‌ಬಿ ಸಮುದಾಯ ಭವನದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪ್ರಚಾರ ಸಮಿತಿಯಿಂದ ಹಮ್ಮಿಕೊಳ್ಳಲಾಗಿರುವ ಜಿಲ್ಲಾ ಮಟ್ಟದ ರಸಪ್ರಶ್ನೆಯನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳಲ್ಲಿ ಕನ್ನಡದ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಲು ರಸಪ್ರಶ್ನೆ ಕಾರ್ಯಕ್ರಮವನ್ನು ಶಾಲಾ ವಿಭಾಗ, ಕಾಲೇಜು ವಿಭಾಗ ಹಾಗೂ ತಾಲೂಕು ಮಟ್ಟದಲ್ಲಿ ಮೂರು ಹಂತವಾಗಿ ಏರ್ಪಡಿಸಿದೆ. ಇಂದು ಪ್ರೌಢಶಾಲಾ ವಿಭಾಗ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಜಿಲ್ಲಾ ಮಟ್ಟದಲ್ಲಿ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.

ಪ್ರತಿಯೊಬ್ಬರೂ ಕನ್ನಡ ಭಾಷೆ ಬಗ್ಗೆ ಜ್ಞಾನ ಹೊಂದುವುದು ಬಹಳ ಮುಖ್ಯ. ಜ್ಞಾನ ಎಂಬುದು ಅಕ್ಷಯ ಪಾತ್ರೆ ಇದ್ದಂತೆ. ಎಷ್ಟೆ ತಿಳಿದುಕೊಂಡರು ಮತ್ತಷ್ಟು ತಿಳಿಯಬೇಕು ಎಂಬ ಹಂಬಲ ಹೆಚ್ಚಾಗುತ್ತದೆ. ಕನ್ನಡ ಸಾಹಿತ್ಯ ಸಂಸ್ಕೃತಿಯಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದೆ. ಅವುಗಳ ಬಗ್ಗೆ ತಿಳಿಯಬೇಕು ಎಂದರು.

ಸಮ್ಮೇಳನದಲ್ಲಿ ಅನೇಕ ಸಾಹಿತಿಗಳು, ವಿಚಾರಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿಯೊಬ್ಬರು ಸಮ್ಮೇಳನದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಲಾ ಹಾಗೂ ಕಾಲೇಜಿಗೆ ಆಯೋಜಿಸಿದ್ದ ತಾಲೂಕು ಮಟ್ಟದಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಚಾರ ಸಮಿತಿ ಇವೆಂಟ್ ಕಮಿಟಿ ಅಧ್ಯಕ್ಷ ಶಶಿಧರ್ ಸಬ್ಬನಹಳ್ಳಿ, ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ ಹುಸ್ಕೂರು ಕೃಷ್ಣೆಗೌಡ, ಹರ್ಷ ಪಣ್ಣೆದೊಡ್ಡಿ, ಚಿಕ್ಕ ತಿಮ್ಮಯ್ಯ, ತಾಲ್ಲೂಕು ಅಧ್ಯಕ್ಷ ಚಂದ್ರಲಿಂಗು, ಸಂಘಟನೆ ಕಾರ್ಯದರ್ಶಿ ಭಾಸ್ಕರ್, ಸಹಕಾರಿ ಸಂಸ್ಥೆ ಬಸವೆಗೌಡ ಕರಾಡ್ಯ, ಧನಂಜಯ ದರಸಗುಪ್ಪೆ, ಶಂಭು ಕಬ್ಬನಳ್ಳಿ, ಮಂಚಶೆಟ್ಟಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share this article