ಅಪ್ಪಾರಾವ್ ಸೌದಿ
ಕನ್ನಡಪ್ರಭ ವಾರ್ತೆ, ಬೀದರ್ಎರಡ್ಮೂರು ಬಾರಿ ಮುಖ್ಯಮಂತ್ರಿ, ಸಚಿವರಿಂದ ಶಂಕುಸ್ಥಾಪನೆಗೊಂಡು ಸ್ಥಳಾಂತರಗೊಂಡು, ಹಲವಾರು ವಿರೋಧಗಳನ್ನು ಎದುರಿಸಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣಾ ಅಸ್ತ್ರವಾಗಿ, ಅನುದಾನದ ಕೊರತೆ ಹೊತ್ತು ಕೊನೆಗೂ ಉದ್ಘಾಟನೆಗೆ ಸಜ್ಜಾಗಿದೆ ಜಿಲ್ಲಾ ಕನ್ನಡ ಭವನ.ಮಹಾರಾಷ್ಟ್ರ, ತೆಲಂಗಾಣಾ ಗಡಿಗೆ ಹೊಂದಿಕೊಂಡಿದ್ದು ಕನ್ನಡ, ಮರಾಠಿ, ತೆಲುಗು ಹಾಗೂ ಉರ್ದು ಜೊತೆ ಸಿಖ್ ಸಮುದಾಯದವರ ಪಂಜಾಬಿ ಭಾಷಿಕರನ್ನು ಹೊಂದಿದ್ದರೂ ಕನ್ನಡತನವನ್ನು ಬಿಟ್ಟುಕೊಡದೇ ಮೈಗೂಡಿಸಿಕೊಂಡಿರುವ ಗಡಿ ಜಿಲ್ಲಾ ಕೇಂದ್ರ ಬೀದರ್‌ನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಸ್ಥಳಾವಕಾಶದ ಕೊರತೆ ಎಲ್ಲರಲ್ಲಿ ಅಸಮಧಾನ, ನಿರಾಶಾಭಾವ ಮೂಡಿಸಿತ್ತು.ಕನ್ನಡ ಭವನ ನಿರ್ಮಾಣ ಒಂದು ಪ್ರತಿಷ್ಠೆಯಾಗಿ ಮಾರ್ಪಟ್ಟಿತ್ತು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚೆನಶೆಟ್ಟಿ ಸರ್ಕಾರಗಳ, ಜನಪ್ರತಿನಿಧಿಗಳ ನಿರಾಸಕ್ತಿಯಿಂದ ಬೇಸತ್ತು ಭವನ ನಿರ್ಮಾಣಕ್ಕೆ ಸರ್ಕಾರ ಸ್ಥಳ ಮತ್ತು ಕಟ್ಟಡಕ್ಕೆ ಅನುದಾನ ನೀಡದಿದ್ದಲ್ಲಿ ಜೋಳಿಗೆ ಹಿಡಿದು ಮನೆ ಮನೆಗೆ ತೆರಳಿ ಹಣ ಸಂಗ್ರಹಿಸುವದಾಗಿ ಎಚ್ಚರಿಸುತ್ತಿದ್ದಂತೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಈಶ್ವರ ಖಂಡ್ರೆ ಅವರ ಸೂಚನೆಯಂತೆ ಜಿಲ್ಲಾಧಿಕಾರಿ ಡಾ. ಎಚ್.ಆರ್ . ಮಹಾದೇವ ಅವರು ನಿವೇಶನ ಗುರುತಿಸಿ ನೀಡಿದರಾದರೂ ಕಟ್ಟಡ ನಿರ್ಮಾಣಕ್ಕೆ ಅನುದಾನ ಶೂನ್ಯವಾಗಿತ್ತು.ಮತ್ತೆ ಮುಂದುವರಿದ ಮಾತಿನ ಹೋರಾಟ, ಪರಿಷತ್ ಚುನಾವಣಾ ಸಮರದ ನಂತರ ಬಂದ ಸರ್ಕಾರದಲ್ಲಿ ಸಚಿವರಾಗಿದ್ದ ಪ್ರಭು ಚವ್ಹಾಣ್ ಅವರ ಆಡಳಿತದಲ್ಲಿ ಸ್ಥಳೀಯ ನಾಯಕರಾದ ಸೂರ್ಯಕಾಂತ ನಾಗಮಾರಪಳ್ಳಿ ಅವರ ಸತತ ಪ್ರಯತ್ನದಿಂದ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಸಿ.ಟಿ ರವಿ ಅವರು ಕನ್ನಡ ಭವನ ನಿರ್ಮಾಣಕ್ಕಾಗಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ 2ಕೋಟಿ ರು. ಅನುದಾನವನ್ನು ಬಿಡುಗಡೆ ಮಾಡಿ ಆದೇಶಿಸಿದರು.ಅದಾದ ಮೇಲೆ ಮತ್ತೊಂದು ಹಂತದ ತಿಕ್ಕಾಟ, ಹೋರಾಟದ ನಂತರ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಂದಿನ ಅಧ್ಯಕ್ಷ ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್ ಹಾಗೂ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ ಅವರ ಮುತುವರ್ಜಿಯಿಂದಾಗಿ ಅನುದಾನ ಬಿಡುಗಡೆಯಾಗಿ ಕಟ್ಟಡ ನಿರ್ಮಾಣವಾಗಲು ಕಾರಣವಾಯಿತು.ಸಚಿವ ಈಶ್ವರ ಖಂಡ್ರೆ ಉದ್ಘಾಟನೆ, ಡಾ. ಮಹೇಶ ಜೋಶಿ ಉಪಸ್ಥಿತಿ:
ಒಟ್ಟಾರೆ ಗಡಿ ಜಿಲ್ಲೆಯಲ್ಲಿ ಕನ್ನಡ ಭವನ ನಿರ್ಮಾಣ ಸರಳವಾಗೇನೂ ಆಗಿಲ್ಲ, ಕನ್ನಡಕ್ಕಾಗಿ ಕನ್ನಡಿಗರ ಹೋರಾಟ ನಡೆಯಲೇಬೇಕಾದ ಅನಿವಾರ್ಯತೆ ಬಂದೊದಗಿತ್ತು. ಇದು ದುರಂತ ಆದರೂ ಸರ್ಕಾರದ ದುಡ್ಡು ಇದ್ದಲ್ಲಿ ಈ ವ್ಯವಸ್ಥೆ ಇರೋದು ಸಹಜ. ಕನ್ನಡಭವನ ಉದ್ಘಾಟನೆಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ ಜೋಶಿ ಸಾಕ್ಷಿಯಾಗಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಲಿದ್ದಾರೆ. ಪೌರಾಡಳಿತ ಸಚಿವ ರಹೀಮ್ ಖಾನ್ ಅಧ್ಯಕ್ಷತೆ ವಹಿಸಲಿದ್ದಾರೆ.ಬೀದರ್‌ನ ಚಿಕ್‌ಪೇಟ್ ಸರ್ವೆ ನಂಬರ್ ವ್ಯಾಪ್ತಿಯಲ್ಲಿನ ಒಂದು ಎಕರೆ ಪ್ರದೇಶದಲ್ಲಿ ತಲೆ ಎತ್ತಿರುವ ಎರಡು ಅಂತಸ್ತಿನ ಕನ್ನಡ ಭವನ ಶನಿವಾರ ಉದ್ಘಾಟನೆಗೊಳ್ಳಲಿದೆ. ನೆಲಮಹಡಿಯು ಆರ್ಟ್ ಗ್ಯಾಲರಿ, ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ಕಚೇರಿ, ಮೊದಲ ಮಹಡಿ ಗ್ರಂಥಾಲಯ, ಅತಿಥಿಗಳು, ಕಲಾವಿದರ ವಸತಿ ಕೋಣೆಗಳು ಹಾಗೂ ಮೂರನೇ ಮಹಡಿ ಏಕಕಾಲಕ್ಕೆ 400 ಜನ ಕುಳಿತುಕೊಳ್ಳಬಹುದಾದ ಸಭಾ ಭವನ ಒಳಗೊಂಡಿದೆ.ಕನ್ನಡ ಭವನ ನಿರ್ಮಾಣ ಕಾರ್ಯವನ್ನು ಒಟ್ಟು 8 ಕೋಟಿ ರು.ಗಳ ಯೋಜನೆಗೆ ವಿಸ್ತರಿಸಲಾಗಿದೆ. ಈಗ ಮೊದಲ ಹಂತದ ಯೋಜನೆ ಪೂರ್ಣಗೊಂಡಿದೆ. ಬಯಲು ರಂಗಮಂದಿರ, ಸಾವಿರ ಜನ ಕುಳಿತುಕೊಳ್ಳಬಹುದಾದ ಸಭಾ ಭವನ, ಕನ್ನಡ ಭವನ ನಿರ್ಮಾಣ ಮೊದಲಾದವು ಎರಡನೇ ಹಾಗೂ ಮೂರನೇ ಹಂತದ ಯೋಜನೆ ಇದ್ದು ಇದಕ್ಕಾದರೂ ಸರ್ಕಾರ ಮತ್ತು ಜನಪ್ರತಿನಿಧಿಗಳು ವಿಳಂಬ ಧೋರಣೆ ಅನುಸರಿಸದಿರಲಿ ಎಂಬುವದು ಕನ್ನಡಿಗರ ಆಶಯ.
ಬೀದರ್ ಜಿಲ್ಲಾ ಕೇಂದ್ರದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕು ಎನ್ನುವುದು ಕನ್ನಡಾಭಿಮಾನಿಗಳ ಬಹುದಿನಗಳ ಕನಸಾಗಿತ್ತು. ಅದು ನನ್ನ ಅವಧಿಯಲ್ಲಿ ಸಾಕಾರಗೊಂಡಿರುವುದು ಹೆಮ್ಮೆ ಉಂಟು ಮಾಡಿದೆ. ಎಲ್ಲರ ಸಹಕಾರದಿಂದ ಸುಂದರ ಭವನ ನಿರ್ಮಾಣ ಸಾಧ್ಯವಾಗಿದೆ. ಪರಿಷತ್ ಸದಸ್ಯರಿಗೆ ಕೊಟ್ಟ ಭರವಸೆಯಂತೆ ಭವನ ನಿರ್ಮಿಸಿದ ಸಂತೃಪ್ತಿ ನನಗಿದೆ. ಭವನವು ಕನ್ನಡ ಪರ ಚಟುವಟಿಕೆಗಳಿಗೆ ವೇದಿಕೆಯಾಗಲಿದೆ. ಕನ್ನಡ ಚಟುವಟಿಕೆಗಳನ್ನು ಇನ್ನಷ್ಟು ಉತ್ಸಾಹದಿಂದ ನಡೆಸಲು ಸಹಕಾರಿಯಾಗಲಿದೆ.- ಸುರೇಶ ಚೆನಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರು, ಬೀದರ್