ಗಮನ ಸೆಳೆದ ಕನ್ನಡ ತೇರು, ಭುವನೇಶ್ವರಿ ಮೆರವಣಿಗೆ

KannadaprabhaNewsNetwork |  
Published : Nov 14, 2026, 02:15 AM IST
ಕಂಪ್ಲಿ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶುಕ್ರವಾರ ನಡೆದ ಭುವನೇಶ್ವರಿ ಭಾವಚಿತ್ರ ಮೆರವಣಿಗೆಯಲ್ಲಿ ಜನಪದ ಕಲಾತಂಡಗಳು ಕಲಾ ಪ್ರದರ್ಶನ ನೀಡಿದವು. | Kannada Prabha

ಸಾರಾಂಶ

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಜನಪದ ಕಲಾತಂಡ ತಮ್ಮ ಕಲಾ ಪ್ರದರ್ಶನದ ಮೂಲಕ ಕನ್ನಡದ ಸಾಂಸ್ಕೃತಿಕ ಶ್ರೀಮಂತಿಕೆ ಅನಾವರಣಗೊಳಿಸಿದವು

ಕಂಪ್ಲಿ: ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶುಕ್ರವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ತಾಯಿ ಭುವನೇಶ್ವರಿ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು.

ಕನ್ನಡ ನಾಡು, ನುಡಿ, ಸಾಹಿತ್ಯ ಹಾಗೂ ಸಂಸ್ಕೃತಿಯ ವೈಭವ ಸಾರುವ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ಸಾಗಿತು.

ಪಟ್ಟಣದ ಕೋಟೆ ಪಂಪಾಪತಿ ದೇಗುಲದ ಬಳಿಯಿಂದ ಆರಂಭಗೊಂಡ ಮೆರವಣಿಗೆಗೆ ಮುಖಂಡ ಅರವಿ ಬಸವನಗೌಡ ಸೇರಿದಂತೆ ಗಣ್ಯರು ಚಾಲನೆ ನೀಡಿದರು. ವಿಶೇಷವಾಗಿ ಅಲಂಕರಿಸಲಾಗಿದ್ದ ಕನ್ನಡ ತೇರು, ತಾಯಿ ಭುವನೇಶ್ವರಿ ಭಾವಚಿತ್ರ ಗಮನ ಸೆಳೆಯಿತು.

ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಮತ್ತು ತಾಲೂಕಾಧ್ಯಕ್ಷ ಎಸ್.ಜಿ. ಚಿತ್ರಗಾರ ಆಸೀನರಾಗಿದ್ದರು.

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಜನಪದ ಕಲಾತಂಡ ತಮ್ಮ ಕಲಾ ಪ್ರದರ್ಶನದ ಮೂಲಕ ಕನ್ನಡದ ಸಾಂಸ್ಕೃತಿಕ ಶ್ರೀಮಂತಿಕೆ ಅನಾವರಣಗೊಳಿಸಿದವು. ಗರಡಿಗೊಂಬೆ, ಡೊಳ್ಳು ಕುಣಿತ, ತಾಷಾ ರಂಡೋಲ್, ಮಂಗಳವಾದ್ಯ ಹಾಗೂ ಮಂಗಳಮುಖಿಯರ ನೃತ್ಯ ಪ್ರದರ್ಶನ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿದವು. ಅಲೆಮಾರಿ ಸಮುದಾಯದ ಹಕ್ಕಿಪಿಕ್ಕಿ ಮಹಿಳಾ ತಂಡದ ಕಲಾ ಪ್ರದರ್ಶನವೂ ವಿಶೇಷ ಗಮನ ಸೆಳೆಯಿತು.

ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿನಿಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಪ್ರದಾಯ ಬದ್ಧವಾಗಿ ಸ್ವಾಗತ ಕೋರಿದರು.

ದಾರ್ಶನಿಕರು, ಮಹನೀಯರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಧರಿಸಿದ್ದ ವಿದ್ಯಾರ್ಥಿಗಳು ನಾಡಿನ ಇತಿಹಾಸ ಮತ್ತು ಮಹನೀಯರ ಆದರ್ಶ ಸ್ಮರಿಸುವಂತೆ ಮಾಡಿದರು. ಸುಮಾರು 100 ಅಡಿ ಉದ್ದದ ಕನ್ನಡ ಧ್ವಜ ಮೆರವಣಿಗೆಯಲ್ಲಿ ರಾರಾಜಿಸುವ ಮೂಲಕ ಕನ್ನಡಾಭಿಮಾನ ಸಾರಿತು.

ಕನ್ನಡ ತೇರು, ಭುವನೇಶ್ವರಿ ಭಾವಚಿತ್ರ, ಜನಪದ ಕಲಾ ಪ್ರದರ್ಶನ, ವಿದ್ಯಾರ್ಥಿಗಳ ಪೂರ್ಣಕುಂಭ ಹಾಗೂ ಕನ್ನಡ ಧ್ವಜದೊಂದಿಗೆ ಸಾಗಿದ ಮೆರವಣಿಗೆ ಪಟ್ಟಣದ ಜನತೆ ಕುತೂಹಲದಿಂದ ವೀಕ್ಷಿಸಿದರು. ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ ಅಂತಿಮವಾಗಿ ಸಾಹಿತ್ಯ ಸಮ್ಮೇಳನ ನಡೆಯುವ ಸಭಾಂಗಣದ ಬಳಿ ಸಮಾಪನಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ