ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದಲ್ಲಿ ಇಂದು ಕನ್ನಡ ರಥೋತ್ಸವ

KannadaprabhaNewsNetwork |  
Published : Nov 01, 2026, 03:30 AM IST
(31ಎನ್.ಆರ್.ಡಿ4 ಕನ್ನಡ ತೇರಿನ ಪೋಟೋಗಳು.)  ಸರ್ ಈ ಸುದ್ದಿಗೆ 200ಕಾಫೀಗಳು ಸ್ಪಾನ್ಸಡವೆ.          | Kannada Prabha

ಸಾರಾಂಶ

ದೇಶದ ಇತಿಹಾಸದಲ್ಲಿ ಮೊಟ್ಟಮೊದಲು ಸ್ವಾತಂತ್ರ್ಯಕ್ಕಾಗಿ ಹೋರಾಟ, 1980ರ ರೈತ ಹೋರಾಟವನ್ನು ನಾಡಿಗೆ ತಿಳಿಸಿದ ಬಂಡಾಯ ನೆಲ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ನ.1ರಂದು ಕನ್ನಡ ರಥೋತ್ಸವ ಜರುಗಲಿದೆ.

ಎಸ್.ಜಿ. ತೆಗ್ಗಿನಮನಿ

ಕನ್ನಡಪ್ರಭ ವಾರ್ತೆ ನರಗುಂದ

ದೇಶದ ಇತಿಹಾಸದಲ್ಲಿ ಮೊಟ್ಟಮೊದಲು ಸ್ವಾತಂತ್ರ್ಯಕ್ಕಾಗಿ ಹೋರಾಟ, 1980ರ ರೈತ ಹೋರಾಟವನ್ನು ನಾಡಿಗೆ ತಿಳಿಸಿದ ಬಂಡಾಯ ನೆಲ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ನ.1ರಂದು ಕನ್ನಡ ರಥೋತ್ಸವ ಜರುಗಲಿದೆ.

ಮಠಗಳೆಂದರೆ ಧಾರ್ಮಿಕ ಕಾರ್ಯಕ್ರಮ, ಪುರಾಣ-ಪ್ರವಚನ, ಪೂಜೆ-ಪುನಸ್ಕಾರ ಹಾಗೂ ದಾಸೋಹಕ್ಕೆ ಸೀಮಿತ ಎಂಬ ಭಾವನೆ ಸಾಮಾನ್ಯ. ಆದರೆ ಧಾರ್ಮಿಕ ಕಾರ್ಯಗಳ ಜತೆಗೆ ಕನ್ನಡ ಭಾಷೆ, ನೆಲ-ಜಲ ಹಾಗೂ ಕನ್ನಡಿಗರ ಅಸ್ಮಿತೆಯ ಉಳಿವಿಗಾಗಿ ನಿರಂತರ ಶ್ರಮಿಸುತ್ತಿರುವ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ ವಿಭಿನ್ನವಾಗಿ ಗುರುತಿಸಿಕೊಂಡಿದೆ.

ಕನ್ನಡದ ಉಳಿವಿಗಾಗಿ ಸೇವೆ:

ಕನ್ನಡದ ಕಟ್ಟಾಳು ಎಂದೇ ಖ್ಯಾತರಾದ ಶಾಂತಲಿಂಗ ಸ್ವಾಮೀಜಿ ಧಾರ್ಮಿಕ ಚಟುವಟಿಕೆಗಳ ಜತೆಗೆ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕರ್ನಾಟಕದ ಏಕೀಕರಣದ ಇತಿಹಾಸವನ್ನು ಜನರಿಗೆ ಪರಿಚಯಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕನ್ನಡವೇ ಉಸಿರು ಎಂಬಂತೆ ಕನ್ನಡದ ಉಳಿವು ಮತ್ತು ಬೆಳವಣಿಗೆಗಾಗಿ ಸದ್ದಿಲ್ಲದೆ ಶ್ರಮಿಸುತ್ತಿರುವ ಶ್ರೀಗಳ ಕಾರ್ಯ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ನಾಡಿನಾದ್ಯಂತ ನ.1ರಂದು ಕನ್ನಡ ರಾಜ್ಯೋತ್ಸವ ಆಚರಿಸುವುದು ವಾಡಿಕೆ. ಆದರೆ ಭೈರನಹಟ್ಟಿ ಶ್ರೀಮಠದಲ್ಲಿ ವರ್ಷವಿಡೀ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆಮಾಡಿರುತ್ತದೆ. ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರನ್ನು ಪರಿಚಯಿಸುವ ಮೂಲಕ ಅವರ ಹೋರಾಟ ಮತ್ತು ಕೊಡುಗೆಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಇಲ್ಲಿ ನಿರಂತರವಾಗಿ ನಡೆಯುತ್ತಿದೆ.

ಶ್ರೀಗಳು ಮಠದಲ್ಲಿ ಸಿಂದಗಿ ಶ್ರೀ ಶಾಂತವೀರೇಶ್ವರ ಗ್ರಂಥಾಲಯವನ್ನು ಸ್ಥಾಪಿಸಿದ್ದಾರೆ. ಬಡ ಮಕ್ಕಳಿಗೆ ಭರವಸೆಯ ಬೆಳಕು. ಅವರು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶ್ರೀಗಳು ಉಚಿತ ಪ್ರಸಾದ ನಿಲಯವನ್ನು ಸ್ಥಾಪಿಸಿದ್ದಾರೆ. ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ, ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಕಲಿಸುವ ಮೂಲಕ ಅವರ ಭವಿಷ್ಯ ರೂಪಿಸುವ ಕಾರ್ಯದಲ್ಲಿ ಶ್ರೀಮಠ ತೊಡಗಿದೆ.

ಶಾಂತಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ನ. 1ರಂದು ಶ್ರೀಮಠದಲ್ಲಿ ವಿಶೇಷ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ನಡೆಯಲಿದೆ. ಗದಗ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಿಂದ ಸಾವಿರಾರು ಕನ್ನಡಾಭಿಮಾನಿಗಳು ಪಾಲ್ಗೊಳ್ಳುವರು.

ಈ ಸಂದರ್ಭದಲ್ಲಿ ತಾಯಿ ಭುವನೇಶ್ವರಿಯ ಪಂಚಲೋಹದ ಮೂರ್ತಿಯನ್ನು ಪ್ರತಿಷ್ಠಾಪಿಸಿ ಕನ್ನಡಾಂಬೆಯ ರಥೋತ್ಸವ ನೆರವೇರಿಸಲಾಗುತ್ತದೆ. ಸಾವಿರಾರು ಕನ್ನಡಿಗರು ಕನ್ನಡ ರಥವನ್ನು ಎಳೆಯುವ ಮೂಲಕ ಕನ್ನಡದ ಅಭಿಮಾನ ಮತ್ತು ನಾಡಿನ ಏಕತೆಯನ್ನು ಸಾರಲಿದ್ದಾರೆ.

ಪ್ರತಿದಿನ ಭುವನೇಶ್ವರಿ ತಾಯಿಗೆ ಪೂಜೆ:

ಕನ್ನಡ ಎಂದ ತಕ್ಷಣ ನಮ್ಮೆಲ್ಲರ ನೆನಪಿಗೆ ಬರುವುದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ. ಮಠದ ಆವರಣದಲ್ಲಿ ನಿತ್ಯವೂ ಕನ್ನಡದ ಬಾವುಟ ಹಾರಾಡುತ್ತದೆ. ಪಂಚಲೋಹದ ಭುವನೇಶ್ವರಿ ಮೂರ್ತಿಗೆ ಪ್ರತಿದಿನ ಪೂಜೆ ಸಲ್ಲಿಸಲಾಗುತ್ತದೆ. ಕನ್ನಡ ಭಾಷೆಯನ್ನೇ ಉಸಿರಾಗಿಸಿಕೊಂಡು ಅದರ ಉಳಿವು ಮತ್ತು ಬೆಳವಣಿಗೆಗಾಗಿ ಶ್ರಮಿಸುತ್ತಿರುವ ಶಾಂತಲಿಂಗ ಶ್ರೀಗಳ ಕನ್ನಡ ಸೇವೆಯನ್ನು ಪ್ರತಿಯೊಬ್ಬ ಕನ್ನಡಿಗರೂ ಸ್ಮರಿಸಬೇಕು.

ನ.1ರ ಬೆಳಗ್ಗೆ 6.30ಕ್ಕೆ ತಾಯಿ ಶ್ರೀ ಭುವನೇಶ್ವರಿ, ಶ್ರೀ ದೊರೆಸ್ವಾಮಿಗಳ, ಬಸವಣ್ಣ ದೇವರ ಮೂರ್ತಿಗಳಗೆ ರುದ್ರಾಭೀಷಕ ಜರುಗಲಿದೆ. ಕಿತ್ತಲಿಯ ಶ್ರೀ ಸಿದ್ದರಾಮೇಶ್ವರ ಮಠದ ಅಭಿನವ ಸಿದ್ದರಾಮ ಶ್ರೀಗಳ ಮತ್ತು ಶಾಂತಲಿಂಗ ಶ್ರೀಗಳ ಅಮೃತ ಹಸ್ತದಿಂದ 9 ಗಂಟೆಗೆ ಕನ್ನಡ ರಥೋತ್ಸವ ಜರುಗಲಿದೆ.

ಕನ್ನಡ ಭಾಷೆಗೆ 200 ಸಾವಿರ ವರ್ಷದ ಇತಿಹಾಸವಿದೆ. ನಮ್ಮ ಭಾಷೆ ನಮಗೆ ಶ್ರೇಷ್ಠವಾಗಿದೆ. ಹಾಗಾಗಿ ಪ್ರತಿಯೊಬ್ಬರು ಕನ್ನಡ ಭಾಷೆ ಉಳಿವಿಗಾಗಿ ಕೈ ಜೋಡಿಸಬೇಕು.

ಶಾಂತಲಿಂಗ ಶ್ರೀಗಳು, ಭೈರನಹಟ್ಟಿ ದೊರೆಸ್ವಾಮಿ ಮಠ

ಈ ನಾಡಿನಲ್ಲಿ ಕನ್ನಡದ ಸ್ವಾಮಿಗಳೆಂದು ಹೆಸರಾಗಿರುವ ಶಾಂತಲಿಂಗ ಶ್ರೀಗಳು ವರ್ಷ ಪೂರ್ತಿ ಕನ್ನಡದ ಉಳಿವಿಗಾಗಿ ಹೋರಾಟ, ಕನ್ನಡ ಉಪನ್ಯಾಸ ಸೇರಿದಂತೆ ಕನ್ನಡಕ್ಕಾಗಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ.

ಭೀಮಶಿ ಯಾವಗಲ್, ಹದಲಿ ಗ್ರಾಮದ ಗುತ್ತಿಗೆದಾರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ