ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ ಕನ್ನಡ ಡಿಂಡಿಮ

KannadaprabhaNewsNetwork |  
Published : Nov 01, 2024, 12:04 AM IST
31ಕೆಪಿಎಲ್21 ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ ಕನ್ನಡದಲ್ಲಿಯೇ ಸುತ್ತೋಲೆ. | Kannada Prabha

ಸಾರಾಂಶ

ಕೊಪ್ಪಳ ತಾಲೂಕಿನ ಬೇವಿನಳ್ಳಿ ಗ್ರಾಮದ ಬಳಿ ಇರುವ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರಿ ಮಾತ್ರ ಕನ್ನಡಕ್ಕೆ ಆದ್ಯತೆ.

ಇಲ್ಲಿ ನೇಮಕಾತಿ ಆದೇಶಗಳು ಕನ್ನಡದಲ್ಲಿಯೇ

ಕಾರ್ಖಾನೆ ಸಭೆಗಳು ಕನ್ನಡದಲ್ಲಿಯೇ

ಸುತ್ತೊಲೆಗಳು ಕನ್ನಡದಲ್ಲಿಯೇ

ಕಾರ್ಖಾನೆಯ ಆಡಳಿತದಲ್ಲಿಯೂ ಕನ್ನಡಕ್ಕೆ ಆದ್ಯತೆ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕಾರ್ಖಾನೆಗಳು, ಫ್ಯಾಕ್ಟರಿಗಳು ಅಂದರೆ ಅಲ್ಲಿ ಸಾಮಾನ್ಯವಾಗಿ ಇಂಗ್ಲಿಷ್ ಸಂವಹನ ಭಾಷೆಯಾಗಿರುತ್ತದೆ. ನಮ್ಮ ರಾಜ್ಯದಲ್ಲೇ ಇದ್ದರೂ ಕನ್ನಡ ಭಾಷೆಗೆ ಆದ್ಯತೆ ಅಷ್ಟಕ್ಕಷ್ಟೆ. ಆದರೆ, ಕೊಪ್ಪಳ ತಾಲೂಕಿನ ಬೇವಿನಳ್ಳಿ ಗ್ರಾಮದ ಬಳಿ ಇರುವ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರಿ ಮಾತ್ರ ಕನ್ನಡಕ್ಕೆ ಆದ್ಯತೆ ನೀಡಿದೆ.

ಕಾರ್ಖಾನೆ ಪ್ರಾರಂಭವಾದಾಗಿನಿಂದಲೂ ಇಲ್ಲಿ ಕನ್ನಡದಲ್ಲಿಯೇ ಆಡಳಿತ, ಕನ್ನಡದಲ್ಲಿಯೇ ವ್ಯವಹಾರ. ಅಷ್ಟೇ ಅಲ್ಲ, ಕನ್ನಡದಲ್ಲಿಯೇ ಆದೇಶ, ಸುತ್ತೋಲೆಯನ್ನೂ ನೀಡಲಾಗುತ್ತದೆ. ಅಷ್ಟೇ ಅಲ್ಲ ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ ಸಾವಿರಾರು ಸಿಬ್ಬಂದಿ, ಕಾರ್ಮಿಕರು, ಅಧಿಕಾರಿಗಳು ಇದ್ದು, ಅವರೆಲ್ಲ ನೇಮಕಾತಿ ಆದೇಶವನ್ನು ಕನ್ನಡದಲ್ಲಿಯೇ ನೀಡಲಾಗುತ್ತದೆ.

ಕಂಪನಿಯಿಂದ ಬರುವ ಎಲ್ಲ ಸುತ್ತೋಲೆಗಳನ್ನು ತರ್ಜುಮೆ ಮಾಡಿ, ಕನ್ನಡದಲ್ಲಿಯೇ ನೀಡಲಾಗುತ್ತದೆ. ಕಾರ್ಖಾನೆಯಲ್ಲಿ ನಡೆಯುವ ಕಾರ್ಯಕ್ರಮಗಳು, ಸಭೆ, ಸಮಾರಂಭಗಳು ಕನ್ನಡದಲ್ಲಿಯೇ ಇರುತ್ತವೆ.

ಪ್ರಾರಂಭದಿಂದಲೂ ಹೀಗೆ:

ಕಿರ್ಲೋಸ್ಕರ್ ಕಾರ್ಖಾನೆ 1997ರಲ್ಲಿಯೇ ಪ್ರಾರಂಭವಾಗಿದ್ದು, ಅಂದಿನಿಂದಲೂ ಇಂದಿಗೂ ಕನ್ನಡದಲ್ಲಿಯೇ ಆಡಳಿತ ನಡೆಸಲಾಗುತ್ತದೆ.

ಕಾರ್ಖಾನೆಯಲ್ಲಿ ಕನ್ನಡದಲ್ಲಿಯೇ ಆಡಳಿತ ಮಾಡಬೇಕು ಎನ್ನುವ ಕಟ್ಟುನಿಟ್ಟು ಸಹ ಇದೆ. ಕನ್ನಡದ ಹೊರತಾಗಿ ಯಾವುದೇ ಭಾಷೆಯಾಗಿದ್ದರೂ ಅದನ್ನು ಆನಂತರ ನೋಡಲಾಗುತ್ತದೆ. ಆದರೆ, ಅನಿವಾರ್ಯವಾಗಿರುವಲ್ಲಿ ಮಾತ್ರ ಆಂಗ್ಲ ಭಾಷೆಯನ್ನು ಬಳಕೆ ಮಾಡಲಾಗುತ್ತದೆ.

ಕನ್ನಡದಲ್ಲಿಯೇ ನಡೆಯುವ ಆಡಳಿತದ ಬಗ್ಗೆ ಕಾರ್ಖಾನೆಯ ಸಿಬ್ಬಂದಿಗೂ ಖುಷಿ ಇದೆ. ಬೇರೆ ಕಾರ್ಖಾನೆಗಳಲ್ಲಿ ಆಂಗ್ಲ ಭಾಷೆಯದ್ದೆ ಪಾರುಪತ್ಯ ಇರುತ್ತದೆ. ಅಲ್ಲಿ ಕನ್ನಡಿಗರನ್ನೇ ಎರಡನೇ ದರ್ಜೆ ನಾಗರಿಕರಂತೆ ನೋಡುತ್ತಾರೆ. ಆದರೆ, ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ ಮಾತ್ರ ಅದಕ್ಕೆ ಅವಕಾಶ ಇಲ್ಲ ಎನ್ನುತ್ತಾರೆ ಅಲ್ಲಿಯ ಸಿಬ್ಬಂದಿ.ಕನ್ನಡಿಗರೇ ಹೆಚ್ಚು:

ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕರು ಕನ್ನಡಿಗರೇ ಆಗಿದ್ದಾರೆ. ಇಲ್ಲಿ ನೇಮಕಾತಿಯ ವೇಳೆಯಲ್ಲಿಯೂ ಕನ್ನಡಿಗರಿಗೆ ಆದ್ಯತೆ ನೀಡಲಾಗುತ್ತದೆ. ಅನ್ಯ ಕಾರ್ಖಾನೆಗಳಿಗೆ ಹೋಲಿಕೆ ಮಾಡಿದರೆ ಇಲ್ಲಿ ಕನ್ನಡಿಗರೇ ಹೆಚ್ಚು ಇದ್ದಾರೆ. ಸ್ಥಳೀಯರಿಗೆ ಆದ್ಯತೆ ಮೇಲೆ ನೇಮಕಾತಿ ನಡೆಯುತ್ತಿದೆ.ಅನ್ಯರೇ ಹೆಚ್ಚು:

ಜಿಲ್ಲೆಯಲ್ಲಿ ಬಹುತೇಕ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ಇಲ್ಲ. ಬಹುತೇಕರು ಅನ್ಯರೇ ತುಂಬಿಕೊಂಡಿದ್ದಾರೆ. ಈ ಬಗ್ಗೆ ಅನೇಕ ಬಾರಿ ಹೋರಾಟಗಳು ಆಗಿವೆ. ಜಿಲ್ಲೆಯಲ್ಲಿ ಸುಮಾರು 17 ಬೃಹತ್ ಕಾರ್ಖಾನೆಗಳು ಇದ್ದು, ಬೆರಳೆಣಿಕೆಯ ಕಾರ್ಖಾನೆಗಳು ಮಾತ್ರ ಕನ್ನಡಿಗರನ್ನು ಆದ್ಯತೆಯ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ.

ಈ ಕಾರಣಕ್ಕಾಗಿಯೇ ಜಿಲ್ಲೆಯಲ್ಲಿರುವ ಕಾರ್ಖಾನೆಗಳಲ್ಲಿ ಸರೋಜನಿ ಮಹಿಷಿ ವರದಿಯನ್ನು ಜಾರಿ ಮಾಡಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ. ಕಿರ್ಲೋಸ್ಕರ್ ಕಾರ್ಖಾನೆಯನ್ನು ಮಾದರಿಯಾಗಿಟ್ಟುಕೊಂಡು ಸ್ಥಳೀಯರ ನೇಮಕಾತಿ ಹೆಚ್ಚಳ ಮಾಡುವಂತೆ ಆಗಬೇಕು ಎನ್ನುವ ಕೂಗು ಬಹುವರ್ಷಗಳಿಂದಲೂ ಇದೆಯಾದರೂ ವಾಸ್ತವದಲ್ಲಿ ಅದು ಜಾರಿಯಾಗುತ್ತಲೇ ಇಲ್ಲ.ಕಾರ್ಖಾನೆಯಲ್ಲಿ ಶೇ.98ರಷ್ಟು ಕನ್ನಡಿಗರು:

ಕೊಪ್ಪಳ ತಾಲೂಕಿನ ಬೇವಿನಳ್ಳಿ ಗ್ರಾಮದ ಬಳಿ ಇರುವ ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ ನೇರವಾಗಿ 1200 ಅಧಿಕಾರಿಗಳು, ಸಿಬ್ಬಂದಿ, ಕಾರ್ಮಿಕರು ಇದ್ದು, ಗುತ್ತಿಗೆಯಲ್ಲಿ ಕೆಲಸ ಮಾಡುವ 2 ಸಾವಿರ ಉದ್ಯೋಗಿಗಳು ಸೇರಿ ಮೂರು ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಇದ್ದಾರೆ. ಇವರ ಪೈಕಿ ಶೇ. 98ರಷ್ಟು ಕನ್ನಡಿಗರೇ ಆಗಿದ್ದಾರೆ.ಅಷ್ಟೇ ಅಲ್ಲದೆ, ಕಾರ್ಖಾನೆಯ ಎಂ.ಡಿ. ಆರ್.ವಿ. ಗುಮಾಸ್ತೆ ವಿಜಯಪುರ ಜಿಲ್ಲೆಯವರಾದರೇ ಕಾರ್ಯನಿರ್ವಾಹಕ ಉಪಾಧ್ಯಕ್ಷ ಪಿ. ನಾರಾಯಣ ಬಳ್ಳಾರಿ ಜಿಲ್ಲೆಯವರಾಗಿದ್ದಾರೆ. ಕಾರ್ಖಾನೆಯ ಪ್ರಮುಖ ಹುದ್ದೆಗಳಲ್ಲಿ ಕನ್ನಡಿಗರೇ ಇದ್ದಾರೆ ಎಂಬುದು ಗಮನಾರ್ಹ.

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ