ರಾಜ್ಯಮಟ್ಟದ ಹಾಕಿ: ಮೈಸೂರು ವಿಭಾಗ ರಾಷ್ಟ್ರಮಟ್ಟಕ್ಕೆ

KannadaprabhaNewsNetwork |  
Published : Nov 01, 2024, 12:04 AM IST
ಚಿತ್ರ : 31ಎಂಡಿಕೆ2 : ಮೈಸೂರು ವಿಭಾಗ ಬಾಲಕರ ತಂಡ ಚಾಂಪಿಯನ್ ಪ್ರಶಸ್ತಿ ಪಡೆಯಿತು.  | Kannada Prabha

ಸಾರಾಂಶ

ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಹಾಕಿ ಪಂದ್ಯಾವಳಿ ಸಮಾರೋಪ ಸಮಾರಂಭ ನಡೆಯಿತು. ವಿರಾಜಪೇಟೆ ಶಾಸಕ ಎ.ಎಸ್‌. ಪೊನ್ನಣ್ಣ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಚೇರಿ, ವಿರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಪ್ರಗತಿ ಶಾಲೆ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಹಾಕಿ ಪಂದ್ಯಾವಳಿ ಸಮಾರೋಪ ಸಮಾರಂಭವು ಪೊನ್ನಂಪೇಟೆ ಹಾಕಿ ಟರ್ಫ್ ಮೈದಾನದಲ್ಲಿ ಬುಧವಾರ ನಡೆಯಿತು.

ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಕೊಡಗಿನ ಜನರು ಕ್ರೀಡಾ ಕ್ಷೇತ್ರವನ್ನು ಹೆಚ್ಚು ಗೌರವಿಸುತ್ತಾರೆ. ನಾಡಿನ ಕ್ರೀಡಾಪಟುಗಳು ಹಾಕಿ ಸೇರಿದಂತೆ ಇತರೆ ಕ್ರೀಡೆಯಲ್ಲಿಯೂ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಹೆಚ್ಚಿನ ಸಾಧನೆ ಮಾಡಬೇಕು ಎಂದು ಹೇಳಿದರು.

ರಾಜ್ಯ ಸರ್ಕಾರ ಕ್ರೀಡಾಕ್ಷೇತ್ರದ ಬೆಳವಣಿಗೆಗೆ ಹೆಚ್ಚಿನ‌ ಅವಕಾಶ ಕಲ್ಪಿಸಿದೆ. ಆ ದಿಸೆಯಲ್ಲಿ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಯಶಸ್ಸಿನತ್ತ ಗಮನ ಹರಿಸಬೇಕು ಎಂದರು.

ಕೊಡಗು ಜಿಲ್ಲೆಯ ಪ್ರತಿ ಹೋಬಳಿಯಲ್ಲಿ ಕ್ರೀಡಾಂಗಣ ಪುನಃಶ್ಚೇತನಕ್ಕೆ ತಲಾ 25 ಲಕ್ಷ ರು. ಬಿಡುಗಡೆ ಮಾಡಲಾಗಿದ್ದು, ಕೆಲವು ಕಡೆಗಳಲ್ಲಿ ಕ್ರೀಡಾಂಗಣ ಅಭಿವೃದ್ಧಿ ಆಗಿದೆ ಎಂದು ಶಾಸಕ ಪೊನ್ನಣ್ಣ ತಿಳಿಸಿದರು.

ವಿರಾಜಪೇಟೆಯ ಶಿಕ್ಷಕರ ಕಲ್ಯಾಣ ಸಮಿತಿ ಅಧ್ಯಕ್ಷ, ಅಂತಾರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು.

ಪೊನ್ನಂಪೇಟೆ ಪ.ಪಂ. ಅಧ್ಯಕ್ಷ ಅಣ್ಣೀರ ಎಂ. ಹರೀಶ್, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಗಣಪತಿ, ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಿಬಿಸಿ ಉಪಾಧ್ಯಕ್ಷ ಮೂಕಳೇರ ಕುಶಾಲಪ್ಪ, ಪ್ರಮುಖರಾದ ಪಿ.ಕೆ. ಪೊನ್ನಪ್ಪ, ಮಾದಂಡ ತಿಮ್ಮಯ್ಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕದಸಿ. ರಂಗಧಾಮಪ್ಪ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಿ.ಆರ್. ಗಾಯತ್ರಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಆರ್.ರವಿ, ಡಾ.ಬಿ.ಸಿ. ದೊಡ್ಡೇಗೌಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಷಯ ಪರಿವೀಕ್ಷಕರಾದ ಬಿಂದು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ ಇತರರು ಇದ್ದರು.

ಎರಡೂ ವಿಭಾಗದಲ್ಲಿ ಮೈಸೂರು ಚಾಂಪಿಯನ್‌:

ಮಡಿಕೇರಿ: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಹಾಕಿ ಟರ್ಫ್ ಮೈದಾನದಲ್ಲಿ ಬುಧವಾರ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ರಾಜ್ಯಮಟ್ಟದ ಶೈಕ್ಷಣಿಕ ಹಾಕಿ ಟೂರ್ನಿಯ 17 ವರ್ಷದ ಒಳಗಿನ ಬಾಲಕರು ಮತ್ತು ಬಾಲಕಿಯರ ಎರಡೂ ವಿಭಾಗಗಳಲ್ಲೂ ಮೈಸೂರು ವಿಭಾಗ ತಂಡವು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದವು.

ಬಾಲಕರ ವಿಭಾಗದಲ್ಲಿ ಮೈಸೂರು ವಿಭಾಗ ತಂಡವು ಕೊಡಗು ಜಿಲ್ಲೆಯ ಕೂಡಿಗೆ ಕ್ರೀಡಾ ವಸತಿ ಶಾಲಾ ತಂಡದ ವಿರುದ್ಧ 3- 1 ಗೋಲುಗಳಿಂದ ಜಯಗಳಿಸಿತು. ಬಾಲಕಿಯರ ವಿಭಾಗದಲ್ಲಿ ಮೈಸೂರು ವಿಭಾಗ ತಂಡವು ಕೊಡಗು ಜಿಲ್ಲೆಯ ಕೂಡಿಗೆ ವಸತಿ ಶಾಲೆ ತಂಡವನ್ನು 2- 0 ಅಂತರದಿಂದ ಮಣಿಸಿತು.

ಇದಕ್ಕೂ ಮೊದಲು ನಡೆದ ಪಂದ್ಯಗಳಲ್ಲಿ ಬೆಳಗಾವಿ ವಿಭಾಗ ತಂಡವು ಕಲಬುರಗಿ ವಿಭಾಗ ತಂಡವನ್ನು 5- 2 ಗೋಲುಗಳಿಂದ, ಬಾಲಕರ ವಿಭಾಗದಲ್ಲಿ ಬೆಳಗಾವಿ ತಂಡ ಬೆಂಗಳೂರು ತಂಡವನ್ನು 5- 1 ಗೋಲುಗಳ ಅಂತರದಿಂದ ಸೋಲಿಸಿತು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ