ಕನ್ನಡ ಧ್ವಜಸ್ತಂಭ ಸ್ಥಾಪನೆ ವಿವಾದ, ಉದ್ವಿಗ್ನ

KannadaprabhaNewsNetwork | Published : Oct 29, 2024 1:08 AM

ಸಾರಾಂಶ

Kannada flag pole installation controversy, tense

-ಸ್ಥಳಕ್ಕಾಗಮಿಸಿದ ಪೌರಾಯುಕ್ತರು, ಪೊಲೀಸ್ ಸಿಬ್ಬಂದಿ । ಕನ್ನಡ ಧ್ವಜ ಸ್ತಂಭ ಸ್ಥಾಪನೆಗೆ ನೂತನ ಸ್ಥಳ: ಅಧಿಕಾರಿಗಳ ಭರವಸೆ

----

ಕನ್ನಡಪ್ರಭ ವಾರ್ತೆ ಸುರಪುರ

ಕನ್ನಡ ರಾಜ್ಯೋತ್ಸವ ಸಮೀಪದಲ್ಲೇ ನಗರದ ರಂಗಂಪೇಟೆಯಲ್ಲಿ ಕನ್ನಡಪರ ಸಂಘಟನೆಗಳಿಂದ ನೂತನ ಕನ್ನಡಧ್ವಜ ಸ್ತಂಭ ನಿರ್ಮಾಣವಾದ ಹಿನ್ನೆಲೆಯಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

2023ರಿಂದಲೇ ರಂಗಂಪೇಟೆಯಲ್ಲಿ ಕನ್ನಡ ಧ್ವಜ ಸ್ತಂಭ ನಿರ್ಮಾಣ ಮಾಡಲು ಯತ್ನಿಸಲಾಗಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಅದು ಸಾಧ್ಯವಾಗಿರಲಿಲ್ಲ. ಕನ್ನಡ ರಾಜ್ಯೋತ್ಸವ ಇನ್ನೂ ಮೂರು ದಿನವಿದ್ದು, ಕನ್ನಡ ಬಾವುಟ ಹಾರಿಸುವುದು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಒಮ್ಮತದಿಂದ ನಿರ್ಧರಿಸಿದ್ದಾರೆ.

ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಭೈರಿಮಡ್ಡಿ, ಕಳೆದ ವರ್ಷವೇ ನಾವು ಕನ್ನಡ ಧ್ವಜ ಸ್ತಂಭ ನಿರ್ಮಾಣ ಮಾಡಲು ಮುಂದಾಗಿದ್ದೆವು. ಆದರೆ, ಅಧಿಕಾರಿಗಳ ಭರವಸೆ ಮೇರೆಗೆ ಸುಮ್ಮನಾಗಿದ್ದವು. ಆದರೆ, ಕನ್ನಡ ಹಬ್ಬ ಬರಲಿದ್ದು, ಧ್ವಜ ಸ್ತಂಭ ನಿರ್ಮಾಣ ಮಾಡಿದ್ದೇವೆ. ಏನೇ ಆದರೂ ಅದನ್ನು ಎದುರಿಸಲು ಸಿದ್ಧರಿದ್ದೇವೆ ಎಂದರು.

ಕಾರ್ಯಕ್ರಮ ಮಾಡಲು ಸಭೆ ನಡೆಸಲಿದ್ದೇವೆ. ಧ್ವಜ ಸ್ತಂಭ ನಿರ್ಮಾಣ ಮಾಡದಂತೆ ಕೆಲ ಸದಸ್ಯರು ಪೌರಾಯುಕ್ತರಿಗೆ ಒತ್ತಡ ತರುತ್ತಿದ್ದಾರೆ. ಅವರ ಹೆಸರನ್ನು ಬಹಿರಂಗ ಪಡಿಸುವಂತೆ ಒತ್ತಾಯಿಸಿದ್ದೇವೆ. ಪೌರಾಯುಕ್ತರು ಹೆಸರು ಹೇಳಲು ಸಿದ್ಧರಿಲ್ಲ. ಈ ಜಾಗವು ಸರ್ಕಾರದ ಜಾಗವಾಗಿದೆ. ಯಾರ ಖಾಸಗಿ ಜಮೀನಿನಲ್ಲಿ ಧ್ವಜ ಸ್ತಂಭ ಸ್ಥಾಪಿಸಿಲ್ಲ. ಕಾನೂನಿಗೆ ವಿರುದ್ಧವಾಗಿದ್ದರೆ ಬಿಟ್ಟು ಕೊಡುತ್ತೇವೆ. ಪೊಲೀಸರು ಮತ್ತು ಅಧಿಕಾರಿಗಳು ದೌರ್ಜನ್ಯ ಮಾಡಿದರೆ ಮಾತ್ರ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಂತಹುದ್ದೇ ಒತ್ತಡ ಬಂದರೂ ಎದುರಿಸಲು ಸಿದ್ಧರಿದ್ದೇವೆ. ತೆರವುಗೊಳಿಸಲು ಬಿಡುವುದಿಲ್ಲ. ನವೆಂಬರ್ 1ರಂದು ಕನ್ನಡ ಧ್ವಜ ಹಾರಿಸುತ್ತೇವೆ. ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ರಂಗಂಪೇಟೆ ಜಾಗವು ಗ್ರಾಮ ಠಾಣೆ ಜಾಗವಾಗಿದ್ದು, ಅದನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ನೋಟಿಸ್ ನೀಡಿದರೂ ಖಾಲಿ ಮಾಡಿಲ್ಲ. ಜಾಗ ಖಾಲಿ ಮಾಡಿಸಲು ಆಗದವರು ನಮಗೆ ಒತ್ತಡವಿದೆ ಎನ್ನುತ್ತಾರೆ. ಅವರನ್ನು ಸ್ಥಳಕ್ಕೆ ಕರೆಯಿಸಿ. ಸಮಸ್ಯೆ ಏನಾಗುತ್ತದೆ ಎಂಬುದನ್ನು ಕೇಳೋಣ ಎಂದರೆ ಯಾರು ಬರುತ್ತಿಲ್ಲ. ಕೈಲಾದವರು ಮೈ ಪರಚಿಕೊಂಡಂತೆ ಆಗಬಾರದು. ಧ್ವಜವನ್ನು ಹಾರಿಸುತ್ತೇವೆ ಎಂದು ತಿಳಿಸಿದರು.

ವಿಷಯ ತಿಳಿಯುತ್ತಿದ್ದಂತೆ ಪೌರಾಯುಕ್ತರು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು. ಬೇರೆಡೆ ಸ್ಥಳವನ್ನು ಕೊಡಲು ನಗರಸಭೆ ಸಿದ್ಧವಿದೆ. ಅದಕ್ಕೆ ಬೇಕಾದಂತಹ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಶೀಘ್ರದಲ್ಲೇ ನೂತನ ಜಾಗವನ್ನು ಕನ್ನಡ ಧ್ವಜ ಸ್ತಂಭ ಸ್ಥಾಪಿಸಲು ಕೊಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಪೌರಾಯುಕ್ತ ಜೀವನ ಕಟ್ಟಿಮನಿ, ಸಿಪಿಐ ಆನಂದ ವಾಗ್ಮೋಡೆ, ವಿವಿಧ ಸಂಘಟನೆಯ ಮುಖಂಡರಾದ ಶಿವಮೋನಯ್ಯ ನಾಯಕ, ವೆಂಕಟೇಶ ಪ್ಯಾಪ್ಲಿ, ಮಲ್ಲು ಕಬಾಡಗೇರಿ, ಮಲ್ಲು ಕವಡಿಮಟ್ಟಿ, ಶಿವು ಒಗ್ಗಾರ, ಆನಂದ ಮಾಚಗುಂಡಾಳ, ಆನಂದ ಸ್ವಾಮಿ ರತ್ತಾಳ, ಮಲ್ಲು ವಿಷ್ಣುಸೇನಾ, ದೇವಣ್ಣ ಹಾಲಗೇರಿ, ಐಯ್ಯಪ್ಪ ಒಗ್ಗಲಿ, ನಿಂಗಣ್ಣ ಮಾಲಗತ್ತಿ, ಮೌನೇಶ ಆಟೋಚಾಲಕ, ಮಲ್ಲಣ್ಣ ಹಸನಾಪುರ, ಸೋಮಣ್ಣ ಹಾಲಗೇರಿ, ಭೈರಿನಾಯಕ ಇದ್ದರು.

-----

28ವೈಡಿಆರ್2: ಸುರಪುರ ನಗರದ ರಂಗಪೇಟೆಯಲ್ಲಿ ನೂತನ ಕನ್ನಡ ಧ್ವಜ ಸ್ಥಾಪಿಸಿರುವ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವುದು.

Share this article