ಬೆಂಗಳೂರಲ್ಲಿ ರಾರಾಜಿಸಿದ ಕನ್ನಡ ಬಾವುಟಗಳು

KannadaprabhaNewsNetwork | Published : Nov 2, 2024 1:17 AM

ಸಾರಾಂಶ

ಉದ್ಯಾನ ನಗರಿ ಬೆಂಗಳೂರಿನಲ್ಲಿ ಅತ್ಯಂತ ಸಂಭ್ರಮ, ಸಡಗರದೊಂದಿಗೆ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಉದ್ಯಾನ ನಗರಿ ಬೆಂಗಳೂರಿನಲ್ಲಿ ಅತ್ಯಂತ ಸಂಭ್ರಮ, ಸಡಗರದೊಂದಿಗೆ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ರಸ್ತೆ, ಬೀದಿಗಳು, ಬಹುಮಹಡಿ ಕಟ್ಟಡಗಳು, ಶಾಪಿಂಗ್ ಮಾಲ್‌ಗಳು, ಕಚೇರಿ, ಮನೆಗಳಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಕನ್ನಡ ಬಾವುಟಗಳು ರಾರಾಜಿಸಿದವು. ನಗರದ ನೂರಾರು ವೃತ್ತಗಳು, ಕಚೇರಿ, ಕಟ್ಟಡಗಳಲ್ಲಿ ಕನ್ನಡ ಬಾವುಟ ಹಾರಿಸಿ ಭುವನೇಶ್ವರಿ ಪ್ರತಿಮೆಗೆ ನಮಿಸಿ, ಕನ್ನಡ ಸಾಧಕರು, ಹೋರಾಟಗಾರರು, ಕನ್ನಡಕ್ಕೆ ಕೊಡುಗೆ ನೀಡಿದವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ, ಅವರನ್ನು ಸ್ಮರಿಸಲಾಯಿತು. ಕನ್ನಡ ನಾಡು-ನುಡಿಗೆ ಕೊಡುಗೆ ನೀಡುತ್ತಿರುವವರನ್ನು ಸಂಘ-ಸಂಸ್ಥೆಗಳು ಸನ್ಮಾನಿಸಿದವು.

ಆಟೋ, ಬೈಕ್‌, ಕಾರುಗಳು, ಸರಕು ವಾಹನ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ, ಒಳಗೆ ಬಾವುಟಗಳು ಹಾರಾಡಿದವು. ಸಂಘ-ಸಂಸ್ಥೆಗಳ ಸದಸ್ಯರು, ಕನ್ನಡಪರ ಹೋರಾಟಗಾರರು, ನಾಗರಿಕರು, ವಿದ್ಯಾರ್ಥಿಗಳು ಹಳದಿ, ಕೆಂಪು ಶಾಲು ಧರಿಸಿ ಸಂಭ್ರಮಿಸಿದರು. ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕನ್ನಡಪರ ಸಂಘಟನೆಗಳು, ಆಟೋ ಚಾಲಕರು, ಸರಕು ವಾಹನಗಳ ಚಾಲಕರು ಕನ್ನಡ ಹಾಡುಗಳನ್ನು ಹಾಕಿಕೊಂಡು ಕನ್ನಡ ಅಭಿಮಾನ ಮೆರೆದರು.

ಸಂಘ-ಸಂಸ್ಥೆಗಳು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಕನ್ನಡ ನಾಡಿನ ಶ್ರೀಮಂತ ಸಂಸ್ಕೃತಿ, ಕಲೆ, ಪರಂಪರೆಯನ್ನು ಪ್ರದರ್ಶಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಗರದೆಲ್ಲೆಡೆ ಜರುಗಿದವು. ನಗರದ ವಿವಿಧೆಡೆ ಯುವಕರ ಸಂಘಗಳು ರಾಜ್ಯೋತ್ಸವ ಬೈಕ್ ರ್‍ಯಾಲಿ ಕೈಗೊಂಡು ಅಭಿಮಾನ ಪ್ರದರ್ಶಿಸಿದರು.

ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘದಿಂದ ಮಯೋಹಾಲ್‌ ಬಳಿ ರಾಜ್ಯೋತ್ಸವ ಆಚರಿಸಲಾಯಿತು. ಕನ್ನಡ ನಿಘಂಟು ಕರ್ತೃ ಕಿಟೆಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.ಶ್ರೀನಗರ ಕನ್ನಡ ರಾಜ್ಯೋತ್ಸವ ಸಮಿತಿಯಿಂದ ಡೊಳ್ಳು ಕುಣಿತ, ವಿದ್ಯಾರ್ಥಿಗಳಿಂದ ಮೆರವಣಿಗೆ ನಡೆಯಿತು. ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಲೇಖನ ಸಾಮಗ್ರಿಗಳು, ಪುಸ್ತಕಗಳನ್ನು ವಿತರಿಸಲಾಯಿತು.

ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಿ ಕನ್ನಡ ಬಾವುಟ ಹಾರಿಸಲಾಯಿತು. ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಮೆರವಣಿಗೆ ಕೈಗೊಂಡರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಕನ್ನಡ ಗೆಳೆಯರ ಬಳಗ, ಕೇಂದ್ರೀಯ ಸದನ ಕನ್ನಡ ಸಂಘ, ಕನ್ನಡ ಚಳವಳಿ ಕೇಂದ್ರ ಸಮಿತಿ ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳು ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದವು.

ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿ: ಚಾಮರಾಜಪೇಟೆ ನಾಡಹಬ್ಬದ ಕನ್ನಡ ರಾಜ್ಯೋತ್ಸವ ಸಮಿತಿಯಿಂದ ಚಾಮರಾಜಪೇಟೆಯಲ್ಲಿ ದ್ವಜಾರೋಹಣ ನೆರವೇರಿಸುವ ಮೂಲಕ ರಾಜ್ಯೋತ್ಸವ ಆಚರಿಸಲಾಯಿತು. ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಅಕ್ಷರ ಇರಬೇಕು ಎನ್ನುವ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಆಗ್ರಹಿಸಿದರು.

ಬೈಕ್ ರ್‍ಯಾಲಿ: ನಮ್ಮ ನಾಡು, ನಮ್ಮ ಆಳ್ವಿಕೆ ವೇದಿಕೆಯ ಮೂಲಕ ಕನ್ನಡಪರ ಕಾರ್ಯಕರ್ತರು ಬನ್ನಪ್ಪ ಪಾರ್ಕ್‌ನಿಂದ ಮಾರತ್ತಹಳ್ಳಿಯ ಫಿನಿಕ್ಸ್ ಮಾಲ್‌ವರೆಗೆ ಕರ್ನಾಟಕ ರಾಜ್ಯೋತ್ಸವ ಬೈಕ್‌ ರ್‍ಯಾಲಿ ಕೈಗೊಂಡರು.

ನಗರ ವಿವಿಯಲ್ಲಿ ರಾಜ್ಯೋತ್ಸವ: ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸೆಂಟ್ರಲ್ ಕಾಲೇಜಿನ ಆವರಣದ ಗಡಿಯಾರ ಗೋಪುರದಲ್ಲಿ ಕುಲಪತಿಗಳಾದ ಪ್ರೊ.ಲಿಂಗರಾಜ ಗಾಂಧಿಯವರು ಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವ ಸಮಾರಂಭಕ್ಕೆ ಚಾಲನೆ ನೀಡಿದರು.

ಕರ್ನಾಟಕ ಏಕೀಕರಣದ ಪ್ರಥಮ ರಾಜ್ಯೋತ್ಸವ ಆಚರಣೆ ಸೆಂಟ್ರಲ್ ಕಾಲೇಜಿನ ಮೈದಾನದಲ್ಲಿಯೇ ನಡೆದಿರುವುದು ಹೆಮ್ಮೆಯ ಸಂಗತಿ. ವಿಶಾಲ ಮ್ಯೆಸೂರು ರಾಜ್ಯಕ್ಕೆ ''''''''ಕರ್ನಾಟಕ'''''''' ಎಂದು ನಾಮಕರಣವಾಗಿ ಐವತ್ತು ವರ್ಷ ತುಂಬಿದ ಸುವರ್ಣ ಮಹೋತ್ಸವ ಆಚರಣೆಯು ವಿಶೇಷ ಮಹತ್ವ ತಂದಿದೆ ಎಂದರು.

ಬೆಂಗಳೂರು ವಿವಿಯಲ್ಲಿ ರಾಜ್ಯೋತ್ಸವ: ಬೆಂಗಳೂರು ವಿಶ್ವವಿದ್ಯಾಲಯದಿಂದ ಜ್ಞಾನಭಾರತಿ ಆವರಣದ ಕೇಂದ್ರ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಕುಲಪತಿ ಡಾ.ಜಯಕರ ಎಸ್. ಎಂ. ನಾಡದೇವತೆ ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಿ, ರಾಷ್ಟ್ರ ಧ್ವಜ ಹಾಗೂ ಕನ್ನಡ ಧ್ವಜಾರೋಹಣ ನೆರವೇರಿಸಿದರು.

Share this article