ತುರುಸು ಪಡೆಯಿತು ಕನ್ನಡದ ಗುಡಿಯ ಚುನಾವಣೆ!

KannadaprabhaNewsNetwork | Published : May 16, 2025 2:02 AM
Follow Us

ಸಾರಾಂಶ

ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ ನಿಧನ ನಂತರ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಕಳೆದ ಚುನಾವಣೆಯಲ್ಲಿ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಸ್ಪರ್ಧಿಸಿ ವಿಜೇತರಾದರು. ಇದೀಗ ಮತ್ತೇ ಅವರೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಕಾರಣಕ್ಕೆ ಬಹಿರಂಗವಾಗಿಯೇ ವಿರೋಧಿಸಿ ಕೆಲವು ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಧಾರವಾಡ: ಕನ್ನಡದ ಗುಡಿ ಎಂದೇ ಹೆಸರು ಪಡೆದಿರುವ, ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ತ್ರೈವಾರ್ಷಿಕ ಚುನಾವಣೆಯು ನಿರೀಕ್ಷೆಯಂತೆ ತುರುಸು ಪಡೆದುಕೊಂಡಿದ್ದು, ವಿಶೇಷವಾಗಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಶುರುವಾಗಿದೆ.

ಮಾತೃ ಭಾಷೆಯ ಅಳಿವು-ಉಳಿವು ಹಿನ್ನೆಲೆಯಲ್ಲಿ ಹೋರಾಟ, ಕನ್ನಡದ ಬೆಳವಣಿಗೆಗೋಸ್ಕರ ವಿಧಾಯಕ ಕಾರ್ಯಗಳನ್ನು ಮಾಡಬೇಕಾದ ಈ ಸಂಘದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ, ರಾಜಕಾರಣಿಗಳು ಬೇಡ ಎಂಬ ಕೂಗು ಇದ್ದರೂ ಬಹುತೇಕ ರಾಜಕಾರಣಿಗಳೇ ಸಂಘದ ಚುಕ್ಕಾಣಿ ಹಿಡಿಯಲು ಚುನಾವಣೆ ಮೂಲಕ ಯತ್ನಿಸುತ್ತಿದ್ದಾರೆ.

ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ ನಿಧನ ನಂತರ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಕಳೆದ ಚುನಾವಣೆಯಲ್ಲಿ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಸ್ಪರ್ಧಿಸಿ ವಿಜೇತರಾದರು. ಇದೀಗ ಮತ್ತೇ ಅವರೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಕಾರಣಕ್ಕೆ ಬಹಿರಂಗವಾಗಿಯೇ ವಿರೋಧಿಸಿ ಕೆಲವು ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಬೆಲ್ಲದಗೆ ಹುಣಸೀಮರದ, ಲಿಂಬಿಕಾಯಿ ಪೈಪೋಟಿ: ಅಧ್ಯಕ್ಷ- ಉಪಾಧ್ಯಕ್ಷ ಸೇರಿದಂತೆ ಎಲ್ಲ ಪದಾಧಿಕಾರಿಗಳ ಹುದ್ದೆಗೆ ಒಬ್ಬರು ನಿರಂತರವಾಗಿ ಎರಡು ಬಾರಿ ಮಾತ್ರ ಆಯ್ಕೆಯಾಗಬಹುದು ಎಂಬ ನಿಯಮವನ್ನು ಸಂಘ ಮಾಡಿಕೊಂಡಿದ್ದು, ಈಗಾಗಲೇ ಒಂದು ಬಾರಿ ಆಯ್ಕೆಯಾಗಿದ್ದು, ಇದೊಂದು ಬಾರಿ ನಮ್ಮ ತಂಡವನ್ನು ಗೆಲ್ಲಿಸಿ ಎಂದು ಬೆಲ್ಲದ ಅವರ ತಂಡ ಮನವಿ ಮಾಡಿದೆ. ಆದರೆ, ಬೆಲ್ಲದ ಅವರು ಈಗಾಗಲೇ ಶಾಸಕರಾಗಿ, ವಿವಿಧ ಟ್ರಸ್ಟ್‌ಗಳ ಅಧ್ಯಕ್ಷರಾಗಿ ಸರ್ಕಾರದ ವಿವಿಧ ಹುದ್ದೆಗಳನ್ನು ಅನುಭವಿಸಿ ಮತ್ತೆ ಸಂಘದ ಅಧ್ಯಕ್ಷರೂ ಆಗಬೇಕಾ ಎಂಬುದು ಕೆಲವರ ವಾದ. ಈ ಹಿನ್ನೆಲೆಯಲ್ಲಿ ಬಹಿರಂಗವಾಗಿಯೇ ಬೆಲ್ಲದ ಅವರನ್ನು ವಿರೋಧಿಸಿ ಜೆಡಿಎಸ್‌ ಮುಖಂಡ ಗುರುರಾಜ ಹುಣಸೀಮರದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಜತೆಗೆ ಬೆಲ್ಲದ ಅವರು ನಾಮಪತ್ರ ವಾಪಸ್ಸು ತೆಗೆದುಕೊಂಡರೆ ತಾವು ಸಹ ಹಿಂದೆ ಸರಿಯುವುದಾಗಿಯೂ ಹೇಳಿದ್ದಾರೆ.

ಇನ್ನು, ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ ಬಸಪ್ಪ ರಾಯರ, ಈ ಹಿಂದೆ ಉಪಾಧ್ಯಕ್ಷರಾಗಿದ್ದ ನಿಂಗಣ್ಣ ಕುಂಟಿ, ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಹಿರಿಯ ಸಾಹಿತಿ ಡಾ. ವಿ.ಬಿ. ರಾಜೂರ, ಸಂಶೋಧಕಿ ಹನುಮಾಕ್ಷಿ ಗೋಗಿ ಹಾಗೂ ಕಾಂಗ್ರೆಸ್‌ ಮುಖಂಡ ಪರಮೇಶ್ವರ ಶಂಕ್ರಪ್ಪ ಕಾಳೆ ನಾಮಪತ್ರ ಸಲ್ಲಿಸಿದ್ದಾರೆ. ಮೇ 17ರ ವರೆಗೆ ನಾಮಪತ್ರ ವಾಪಸ್ಸು ಪಡೆಯಲು ಅವಕಾಶವಿದ್ದು, ಈ ಪೈಕಿ ಯಾರು ವಾಪಸ್ಸು ಪಡೆಯುತ್ತಾರೆ ಎಂಬ ಕುತೂಹಲವೂ ಇದೆ.

ನಾಮಪತ್ರ ಸ್ವೀಕೃತ: ಮೇ 14ರಂದು ನಾಮಪತ್ರ ಪರಿಶೀಲನೆ ನಡೆಸಿದ್ದು, ಈ ಮೇಲಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಸೇರಿದಂತೆ ಉಪಾಧ್ಯಕ್ಷ ಸ್ಥಾನದ ಡಾ. ಸಂಜೀವ ಕುಲಕರ್ಣಿ, ಶರಣಪ್ಪ ಕೊಟಗಿ ಹಾಗೂ ಡಾ. ಡಿ.ಎಂ. ಹಿರೇಮಠರ ನಾಮಪತ್ರಗಳು ಸಿಂಧುವಾಗಿವೆ. ಕಾರ‍್ಯಾಧ್ಯಕ್ಷ ಸ್ಥಾನಕ್ಕೆ ಬಸವಪ್ರಭು ಹೊಸಕೇರಿ, ಮನೋಜಕುಮಾರಗೌಡ ಪಾಟೀಲ, ಹನುಮಾಕ್ಷಿ ಗೋಗಿ, ಕೋಶಾಧ್ಯಕ್ಷ ಸ್ಥಾನಕ್ಕೆ ಸತೀಶ ತುರಮರಿ, ವೀರಣ್ಣ ಯಳಲಿ, ಸಂಜೀವ ಧುಮಕನಾಳ ನಾಮಪತ್ರಗಳು ಸ್ವೀಕೃತಗೊಂಡಿವೆ.

ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಹಾಲಿ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹಾಗೂ ಮಾಜಿ ಕಾರ್ಯದರ್ಶಿ ಪ್ರಕಾಶ ಉಡಿಕೇರಿ ಮಧ್ಯೆ ಪೈಪೋಟಿ ನಡೆದಿದ್ದು, ಇಬ್ಬರ ನಾಮಪತ್ರಗಳು ಸಹ ಸ್ವೀಕೃತಗೊಂಡಿವೆ. ಸಹ ಕಾರ್ಯದರ್ಶಿ ಸ್ಥಾನಕ್ಕೆ ಶಂಕರ ಕುಂಬಿ ಹಾಗೂ ಮಾರ್ತಾಂಡಪ್ಪ ಕತ್ತಿ ನಾಮಪತ್ರಗಳು ಸ್ವೀಕೃತಗೊಂಡಿವೆ.

ಇನ್ನು, ಏಳು ಕಾರ‍್ಯಕಾರಿ ಸಮಿತಿ ಸ್ಥಾನಕ್ಕೆ ಡಾ. ಶೈಲಜಾ ಅಮರಶೆಟ್ಟಿ, ವೀರಣ್ಣ ಒಡ್ಡೀನ, ಗುರು ಹಿರೇಮಠ, ಡಾ. ಜೆ.ಎ. ಹಡಗಲಿ, ಶಶಿಧರ ತೋಡಕರ, ಶಿವಾನಂದ ಭಾವಿಕಟ್ಟಿ, ಮಹಾಂತೇಶ ನರೇಗಲ್, ಡಾ. ವಿಜಯಕುಮಾರ ಕಮ್ಮಾರ, ವಿಶ್ವನಾಥ ಅಮರಶೆಟ್ಟಿ, ಸಂತೋಷ ಪಟ್ಟಣಶೆಟ್ಟಿ, ಪ್ರಭು ಕುಂದರಗಿ, ಶಿವನಗೌಡ ದಾನಪ್ಪಗೌಡರ, ಪ್ರೊ. ಹರ್ಷ ಡಂಬಳ, ಪ್ರಭು ಹಂಚಿನಾಳ, ಆನಂದ ಏಣಗಿ, ಚಂದ್ರಕಾಂತಯ್ಯ ಹಿರೇಮಠ, ಡಾ. ಮಹೇಶ ಹೊರಕೇರಿ, ಶಂಕರಗೌಡ ಗೌಡರ, ಕರಬಸಪ್ಪ ಕೋರಿಶೆಟ್ಟರ, ಸಂತೋಷ ಮಹಾಲೆ ನಾಮಪತ್ರಗಳು ಸ್ವೀಕತಗೊಂಡಿವೆ.

ಕಾರ್ಯಕಾರಿ ಸಮಿತಿ ಮಹಿಳಾ ಮೀಸಲು ಸ್ಥಾನಕ್ಕೆ ವಿಶ್ವೇಶ್ವರಿ ಹಿರೇಮಠ, ಡಾ. ರತ್ನಾ ಐರಸಂಗ, ಸುವರ್ಣ ಸುರಕೋಡ, ಹಾಗೂ ಕಾರ್ಯಕಾರಿ ಸಮಿತಿ ಎಸ್.ಸಿ/ಎಸ್.ಟಿ. ಮೀಸಲು ಸ್ಥಾನಕ್ಕೆ ಪ್ರೊ. ಧನವಂತ ಹಾಜವಗೋಳ, ಮಲ್ಲಮ್ಮ ಭಜಂತ್ರಿ, ಡಾ. ವಿಶ್ವನಾಥ ಚಿಂತಾಮಣಿ, ಡಾ. ರುದ್ರಪ್ಪ ನಾಯ್ಕ ಇಂಚಲ, ಡಾ. ಅನೀಲ ಮೇತ್ರಿ ಹಾಗೂ ಪರಮೇಶ್ವರ ಕಾಳೆ ನಾಮಪತ್ರಗಳು ಸಿಂಧುವಾಗಿವೆ.

ಕಪ್ಪುಚುಕ್ಕೆಯಾಗದಿರಲಿ: ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆ ಮೊದಲಿನಂತಿಲ್ಲ. ಕಳೆದ 2 ಚುನಾ‍ವಣೆಗಳಿಂದ ಇಲ್ಲೂ ಒಳರಾಜಕೀಯ ನುಸುಳಿದೆ. ನಾಮಪತ್ರ ಸಲ್ಲಿಸಿದವರ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕೆಲವು ಹುದ್ದೆಗಳಿಗೆ ಈಗಾಗಲೇ ಹಲವು ಬಾರಿ ಅಧಿಕಾರ ಅನುಭವಿಸಿದ, ಬೇರೆ ಬೇರೆ ಸಂಘ- ಸಂಸ್ಥೆಗಳಲ್ಲೂ ವಿವಿಧ ಹುದ್ದೆಗಳನ್ನೂ ಹೊಂದಿರುವ ಅಧಿಕಾರದಾಹಿಗಳು ಮತ್ತೂ ಸ್ಪರ್ಧಿಸಿದ್ದಾರೆ. ಸಂಘಕ್ಕೆ ಹೊಸ ನೀರು ಹರಿದು ಬರಲಿ ಎನ್ನುವ ವಾದ ಮಧ್ಯೆ, ಸಂಘಕ್ಕೆ ನಾವೇ ಅಜೀವ ಪದಾಧಿಕಾರಿಗಳು ಎಂಬ ವರ್ತನೆಯನ್ನು ಮತ್ತೆ ಕೆಲವರು ತೋರುತ್ತಿದ್ದಾರೆ. ಜತೆಗೆ ಕೆಲವು ಸ್ಪರ್ಧಿಗಳು ತಮ್ಮ ವಿರುದ್ಧ ಸ್ಪರ್ಧಿಸಿದ ಅಭ್ಯರ್ಥಿಗಳ ಬಗ್ಗೆ ಕೀಳಾಗಿ ಮಾತನಾಡುವ, ನಾಮಪತ್ರ ವಾಪಸ್ಸು ತೆಗೆದುಕೊಳ್ಳಲು ಒತ್ತಡ ಹಾಕುತ್ತಿರುವ ಘಟನೆಗಳೂ ನಡೆದಿವೆ. ಒಟ್ಟಾರೆ, ಮೇ 25ರಂದು ನಡೆಯಲಿರುವ ಈ ಚುನಾವಣೆ ಯಾವುದೇ ಸಾರ್ವತ್ರಿಕ ಚುನಾವಣೆಗೂ ಕಡಿಮೆ ಇಲ್ಲ ಎನ್ನುವಂತಾದರೆ ಸಂಘದ ಇತಿಹಾಸಕ್ಕೆ ಕಪ್ಪುಚುಕ್ಕೆಯಾಗಲಿದೆ. ಇದನ್ನು ಮನಗಂಡು ಸ್ಪರ್ಧಿಸಿರುವ ತಂಡಗಳು, ಬಣಗಳು ಚುನಾವಣೆಯನ್ನು ಧನಾತ್ಮಕವಾಗಿ ತೆಗೆದುಕೊಳ್ಳಬೇಕಿದೆ ಎನ್ನುವುದು ಚಿಂತಕರ ಆಶಯ.