ಕನ್ನಡ ಸುದೀರ್ಘ ಇತಿಹಾಸದ ಶ್ರೀಮಂತ ಭಾಷೆ: ಸಚಿವ ಪುಟ್ಟರಂಗಶೆಟ್ಟಿ

KannadaprabhaNewsNetwork |  
Published : Nov 02, 2026, 02:30 AM IST
1ಸಿಎಚ್‌ಎನ್‌56ಚಾಮರಾಜನಗರದ ಪೊಲೀಸ್ ಕವಾಯತು ಡಿ.ಎ.ಆರ್ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಶು ಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ಧ್ವಜಾರೋಹಣ ನೆರವೇರಿಸಿದ ನಂತರ ಪೊಲೀಸರು  ಪಥಸಂಚಲನ ಮೂಲಕ ಗೌರವ ವಂದನೆ ಸಲ್ಲಿಸಿದರು. | Kannada Prabha

ಸಾರಾಂಶ

ಕನ್ನಡ ಭಾಷೆಯು ಕೇವಲ ಸಂವಹನದ ಮಾಧ್ಯಮವಲ್ಲ, ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿರುವ ಶಾಸ್ತ್ರೀಯ ಭಾಷೆಯಾಗಿದೆ ಎಂದು ರೇಷ್ಮೆ ಸಚಿವ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕನ್ನಡ ಭಾಷೆಯು ಕೇವಲ ಸಂವಹನದ ಮಾಧ್ಯಮವಲ್ಲ, ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿರುವ ಶಾಸ್ತ್ರೀಯ ಭಾಷೆಯಾಗಿದೆ ಎಂದು ರೇಷ್ಮೆ ಸಚಿವ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ನಗರದ ಪೊಲೀಸ್ ಕವಾಯತು ಡಿ.ಎ.ಆರ್ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿದ ಬಳಿಕ 71ನೇ ಕರ್ನಾಟಕ ರಾಜ್ಯೋತ್ಸವದ ಸಂದೇಶ ನೀಡಿ ಮಾತನಾಡಿದರು.

ಪಂಪನ ವಿಕ್ರಮಾರ್ಜುನ ವಿಜಯದಿಂದ 12ನೇ ಶತಮಾನದ ಬಸವಣ್ಣ, ಅಕ್ಕಮಹಾದೇವಿಯವರ ವಚನ ಕ್ರಾಂತಿ, ಕನಕದಾಸ, ಪುರಂದರ ದಾಸರ ಭಕ್ತಿ ಚಳುವಳಿ ಹಾಗೂ ಆಧುನಿಕ ಕನ್ನಡ ಕಾವ್ಯಯುಗದಲ್ಲಿ ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ. ಗೋಕಾಕ್, ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಹಾಗೂ ಚಂದ್ರಶೇಖರ ಕಂಬಾರ ಸೇರಿದಂತೆ ಒಟ್ಟು ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಇಡೀ ದೇಶದ ಏಕೈಕ ಭಾಷೆ ನಮ್ಮ ಕನ್ನಡ ಭಾಷೆ ಎಂಬ ಹೆಗ್ಗಳಿಗೆ ನಮ್ಮ ಕನ್ನಡಿಗರದ್ದಾಗಿದೆ ಎಂದರು.

ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡಿಗನಾಗಿರು ಎಂಬ ರಾಷ್ಟ್ರಕವಿ ಕುವೆಂಪು ಅವರ ಆಶಯ ವಿಶ್ವಮಾನ್ಯವಾಗಿದೆ. ಕನ್ನಡದ ಭಾಷಾಭಿಮಾನ ನೆನೆಯುವಾಗ ನಮಗೆ ಜಿ. ಪಿ. ರಾಜರತ್ನಂ ಅವರು ನೆನಪಾಗುತ್ತಾರೆ. ಕನ್ನಡದ ಮೇಲಿನ ಪ್ರೀತಿಯನ್ನು ಅತ್ಯಂತ ದಿಟ್ಟತನದಿಂದ ಸಾರಿದವರು. ಅವರ ಸಾಹಿತ್ಯ ಚಳವಳಿ ಇಂದಿಗೂ ಪ್ರತಿಯೊಬ್ಬ ಕನ್ನಡಿಗನ ರಕ್ತವನ್ನು ಕುದಿಸುತ್ತವೆ. ಐತಿಹಾಸಿಕ ಕರ್ನಾಟಕ ಏಕೀಕರಣದ ಹಿಂದೆ ಆಲೂರು ವೆಂಕಟರಾಯರು, ಡೆಪ್ಯುಟಿ ಚನ್ನಬಸಪ್ಪ, ಅನಕೃ, ಎಂ. ಪಿ. ಪ್ರಕಾಶ್ ಸೇರಿದಂತೆ ಕೋಟ್ಯಂತರ ಕನ್ನಡಿಗರ ಹೋರಾಟ, ತ್ಯಾಗ, ಬಲಿದಾನವಿದೆ. ಆ ಎಲ್ಲಾ ಮಹನೀಯರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ನಮ್ಮ ಚಾಮರಾಜನಗರ ಜಿಲ್ಲೆಯು ಪ್ರಕೃತಿಯ ತವರೂರು. ಮಲೈ ಮಹದೇಶ್ವರ, ಬಿಳಿಗಿರಿರಂಗ, ಹಿಮವದ್ ಗೋಪಾಲಸ್ವಾಮಿಯವರ ಆಧ್ಯಾತ್ಮಿಕ ಶಕ್ತಿ ನಮ್ಮ ಜಿಲ್ಲೆಯನ್ನು ಕಾಯುತ್ತಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹುಲಿ ಸಂರಕ್ಷಿತ ಪ್ರದೇಶ, ಕಾವೇರಿ ಮತ್ತು ಕಪಿಲಾ ನದಿಗಳ ಹರಿವು ನಮ್ಮ ರೈತರ ಜೀವನಾಡಿಯಾಗಿದೆ. ಚಾಮರಾಜನಗರ ಕೇವಲ ಪ್ರಕೃತಿ ತಾಣಗಳು ಮತ್ತು ಧಾರ್ಮಿಕ ಕೇಂದ್ರಗಳಿಗೆ ಸೀಮಿತವಾಗಿಲ್ಲ, ಇಡೀ ಕರ್ನಾಟಕದ ಕಣ್ಮಣಿಯಾಗಿ ಕೋಟ್ಯಂತರ ಕನ್ನಡಿಗರ ಹೃದಯ ಸಾಮ್ರಾಜ್ಯವನ್ನು ಆಳಿದ ವರನಟ ಡಾ ರಾಜ್‌ಕುಮಾರ್ ಅವರು ಬೆಳ್ಳಿತೆರೆ ಮಾತ್ರವಲ್ಲದೆ ನಿಜ ಜೀವನದ ''''''''ಗೋಕಾಕ್ ಚಳವಳಿ''''''''ಯ ಮುಂಚೂಣಿಯಲ್ಲಿ ನಿಂತು ಕನ್ನಡ ನಾಡು ನುಡಿಯ ರಕ್ಷಣೆಗೆ ಧುಮುಕಿದ ಅಣ್ಣಾವು ನಮ್ಮ ನೆಲದವರು. ಅವರ ಸರಳತೆ, ಸಾಂಸ್ಕೃತಿಕ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿದೆ ಎಂದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರವು ಸಾಮಾಜಿಕ ನ್ಯಾಯ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿದೆ. ಗ್ಯಾರಂಟಿ ಯೋಜನೆಗಳು ಜಿಲ್ಲೆಯ ಶೇ. 90ಕ್ಕೂ ಹೆಚ್ಚು ಕುಟುಂಬಗಳಿಗೆ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಯುವನಿಧಿ ಹಾಗೂ ಶಕ್ತಿ ಯೋಜನೆಗಳು ಯಶಸ್ವಿಯಾಗಿ ತಲುಪಿದ್ದು, ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯ ಬಂದಿದೆ. ಜಿಲ್ಲೆಯ ರೈತರ ಹಿತರಕ್ಷಣೆಗಾಗಿ ಕೆರೆ ತುಂಬಿಸುವ ಯೋಜನೆಗಳು ಚುರುಕಿನಿಂದ ಸಾಗುತ್ತಿದ್ದು, ತೋಟಗಾರಿಕೆ ಮತ್ತು ರೇಷ್ಮೆ ಬೆಳೆಗಾರರಿಗೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾರ್ವಜನಿಕ ಶಾಲೆಗಳ ಮೂಲಸೌಕರ್ಯಾಭಿವೃದ್ಧಿ, ವೈದ್ಯಕೀಯ ಕಾಲೇಜು ಆಸ್ಪತ್ರೆಯ ಆಧುನೀಕರಣಕ್ಕೆ ಹೆಚ್ಚಿನ ಅನುದಾನ ಮೀಸಲಿಡಲಾಗಿದೆ ಎಂದರು.

ಮುಖ್ಯಮಂತ್ರಿಗಳ ನೇಗಿಲ ಯೋಗಿ ಕಾರ್ಯಕ್ರಮ ರಾಜ್ಯದ ಬೆನ್ನೆಲುಬಾಗಿರುವ ರೈತರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ನಮ್ಮ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ರೈತರ ಶ್ರಮಕ್ಕೆ ಗೌರವ ನೀಡುವ ಹಾಗೂ ಕೃಷಿ ವಲಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳ ನೇಗಿಲ ಯೋಗಿ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಈ ಮೂಲಕ ರೈತ ಸಮುದಾಯದ ಕಲ್ಯಾಣ, ಕೃಷಿ ಚಟುವಟಿಕೆಗಳಿಗೆ ಉತ್ತೇಜನ ಹಾಗೂ ರೈತರ ಆದಾಯ ವೃದ್ಧಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವ ಆಶಯ ಹೊಂದಲಾಗಿದೆ ಎಂದರು.

ಇಂದಿನ ತಾಂತ್ರಿಕ ಯುಗದಲ್ಲಿ ನಮ್ಮ ಯುವ ಪೀಳಿಗೆಯು ಕಂಪ್ಯೂಟರ್, ಮೊಬೈಲ್ ಹಾಗೂ ಕೃತಕ ಬುದ್ಧಿಮತ್ತೆಯ ಕಾಲದಲ್ಲೂ ಕನ್ನಡವನ್ನು ಬಳಸಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ಶಿಕ್ಷಣವೂ ಕನ್ನಡದಲ್ಲೇ ಲಭ್ಯವಾಗುವಂತಾಗಬೇಕು. ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಮತ್ತು ಬ್ಯಾಂಕುಗಳಲ್ಲಿ ಶೇಕಡಾ 100 ರಷ್ಟು ಆಡಳಿತ ಭಾಷೆಯಾಗಿ ಕನ್ನಡವನ್ನು ಕಡ್ಡಾಯ ಅನುಷ್ಠಾನಗೊಳಿಸಲು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಾರ್ವಜನಿಕ ಅಹವಾಲುಗಳನ್ನು ಕನ್ನಡದಲ್ಲೇ ಪರಿಹರಿಸುವುದು ನಮ್ಮ ಜವಾಬ್ದಾರಿಯಾಗಿದೆ. ಕನ್ನಡ ಕೇವಲ ನವೆಂಬರ್ ತಿಂಗಳ ಆಚರಣೆಯಾಗದೆ ನಮ್ಮ ದಿನನಿತ್ಯದ ಬದುಕಾಗಲಿ. ಬನ್ನಿ ನಾವೆಲ್ಲರೂ ಸೇರಿ ಚಾಮರಾಜನಗರವನ್ನು ಅಭಿವೃದ್ಧಿಯ ಶಿಖರಕ್ಕೆ ಕೊಂಡೊಯ್ಯೋಣ ಎಂದು ತಿಳಿಸಿದರು.

ಇದೇ ವೇಳೆ ಸಚಿವ ಸಿ.ಪುಟ್ಟರಂಗಶೆಟ್ಟಿ ಇತರರು ಭುವನೇಶ್ವರಿ ತಾಯಿ ರಾಷ್ಟ್ರನಾಯಕರಾದ ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ ನೇರವೇರಿಸಿ ಗೌರವ ಸಲ್ಲಿಸಿದರು.

ನಗರದ ದೀನಬಂಧು ಶಾಲೆ, ಸೇವಾಭಾರತಿ ಶಾಲೆ, ಬಂಜಾರ ಇಂಡಿಯನ್ಸ್ ಶಾಲೆ ಮತ್ತು ಆದರ್ಶ ವಿದ್ಯಾಲಯ ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡಿನ ಕಲೆ, ಸಾಹಿತ್ಯ, ಸಾಮರಸ್ಯ, ಭಾವೈಕ್ಯತೆ ಬಿಂಬಿಸುವ, ಸಾಂಸ್ಕೃತಿಕ ಕಂಪನ್ನು ಪಸರಿಸುವ ಕನ್ನಡದ ಗೀತೆಗಳಿಗೆ ನೃತ್ಯದ ಮೆರುಗು ನೀಡಿ ಕರ್ನಾಟಕ ರಾಜ್ಯೋತ್ಸವವನ್ನು ಸಂಪನ್ನಗೊಳಿಸಿದರು.

ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಮರಿಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್, ಜಿಲ್ಲಾಧಿಕಾರಿ ಶ್ರೀರೂಪ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಕೃತಿ ಬನ್ಸಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ವಿ. ಪ್ರಿಯದರ್ಶಿನಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಿ.ಸಿ. ಶೃತಿ, ಇತರರು ಹಾಜರಿದ್ದರು.

ಗಮನ ಸೆಳೆದ ಅಕರ್ಷಕ ಪಥಸಂಚಲನ

ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಶ್ರೀಮಂತ ಪರಂಪರೆ ಸಾರುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಪೊಲೀಸ್ ಪಡೆ, ಶಾಲಾ ವಿದ್ಯಾರ್ಥಿಗಳ ಅಕರ್ಷಕ ಪಥಸಂಚಲನ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಗರದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

ನಗರದ ಪೊಲೀಸ್ ಕವಾಯತು ಡಿಎಆರ್ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 71ನೇ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ಪಥಸಂಚಲನಕ್ಕೆ ಸಿದ್ದವಾಗಿದ್ದ ಪೊಲೀಸ್ ಸೇರಿದಂತೆ ವಿವಿಧ ಶಾಲಾ ತಂಡಗಳ ಪರಿವೀಕ್ಷಣೆ ನಡೆಸಿ ಗೌರವ ವಂದನೆ ಸ್ವೀಕರಿಸಿದರು.

ಬಳಿಕ ಡಿಎಆರ್ ಕೇಂದ್ರಸ್ಥಾನ ಪೊಲೀಸ್ ತುಕಡಿ, ಸಿವಿಲ್ ಪೊಲೀಸ್, ಮಹಿಳಾ ಪೊಲೀಸ್ ಪಡೆ, ಅರಣ್ಯ ಇಲಾಖೆ, ಗೃಹರಕ್ಷಕ ದಳ, ಪೊಲೀಸ್ ವಾದ್ಯವೃಂದ, ಮಾದಾಪುರ ಸಂತ ತೇರಿಸಾ ಪ್ರೌಢಶಾಲೆ, ಬಂಜಾರ ಇಂಡಿಯನ್ಸ್ ಶಾಲೆ, ಸಂತ ಪೌಲರ ಪೌಢಶಾಲೆ, ಸಂತ ಜೋಸೆಫ್ ಪ್ರೌಢಶಾಲೆ, ಸೇವಾಭಾರತಿ, ಜೆ.ಎಸ್.ಎಸ್, ಎಂ.ಸಿ.ಎಸ್ ಪ್ರೌಢಶಾಲೆ, ಮಲ್ಲಯ್ಯನಪುರದ ಆದರ್ಶ ವಿದ್ಯಾಲಯ ಶಾಲಾ ತಂಡಗಳ ಪಥಸಂಚಲನ ಗಮನ ಸೆಳೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥ ಬಿಟ್ಟು ಸಾರ್ಥಕ ಜೀವನ ನಡೆಸಲು ಕರೆ
ಸಂಘಟನೆಗಳಿಗೆ ಪ್ರಚಾರವೇ ಮುಖ್ಯವಾಗಬಾರದು