ಕನ್ನಡ ಕೇವಲ ಭಾಷೆಯಲ್ಲ, ಅದೊಂದು ನಮ್ಮ ಪರಂಪರೆ: ರಾಮಣ್ಣ ಹವಳೆ

KannadaprabhaNewsNetwork |  
Published : Nov 15, 2026, 01:15 AM IST
14ಎಚ್‌ವಿಆರ್6 | Kannada Prabha

ಸಾರಾಂಶ

ಈ ಸಮ್ಮೇಳನವು ಕೇವಲ ಜಾತ್ರೆಯಾಗಬಾರದು, ಈ ಜಿಲ್ಲೆಯ ಜನರ ಬದುಕನ್ನು, ಸಾಹಿತ್ಯವನ್ನು ಹಾಗೂ ಸಂಸ್ಕೃತಿಯನ್ನು ಕಟ್ಟಿ ಬೆಳೆಸುವ ಗಂಭೀರ ವೇದಿಕೆಯಾಗಬೇಕು ಎಂದು ವಿಶ್ರಾಂತ ಅಧ್ಯಾಪಕ, ಹಿರಿಯ ಸಾಹಿತಿ, ಶಿಕ್ಷಣ ತಜ್ಞ, ಇತಿಹಾಸಕಾರ ಹಾಗೂ ರಾಯಚೂರು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರಾಮಣ್ಣ ಹವಳೆ ಅವರು ಆಶಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಈ ಸಮ್ಮೇಳನವು ಕೇವಲ ಜಾತ್ರೆಯಾಗಬಾರದು, ಈ ಜಿಲ್ಲೆಯ ಜನರ ಬದುಕನ್ನು, ಸಾಹಿತ್ಯವನ್ನು ಹಾಗೂ ಸಂಸ್ಕೃತಿಯನ್ನು ಕಟ್ಟಿ ಬೆಳೆಸುವ ಗಂಭೀರ ವೇದಿಕೆಯಾಗಬೇಕು ಎಂದು ವಿಶ್ರಾಂತ ಅಧ್ಯಾಪಕ, ಹಿರಿಯ ಸಾಹಿತಿ, ಶಿಕ್ಷಣ ತಜ್ಞ, ಇತಿಹಾಸಕಾರ ಹಾಗೂ ರಾಯಚೂರು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರಾಮಣ್ಣ ಹವಳೆ ಅವರು ಆಶಯ ವ್ಯಕ್ತಪಡಿಸಿದರು.

ಸ್ಥಳೀಯ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ರಾಯಚೂರು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿದ ಅವರು, ಕನ್ನಡ ನಾಡಿನಲ್ಲಿ ಮಾತೃಭಾಷೆಯಾಗಿರುವ ಕನ್ನಡದ ಉಳಿಯುವಿಕೆಯೇ ಇಂದಿನ ದೊಡ್ಡ ಸಮಸ್ಯೆಯಾಗಿದ್ದು, ಇಂಗ್ಲಿಷ್ ಅನ್ನ ಭಾಷೆಯಾಗಿ ಮಾರ್ಪಟ್ಟಿದ್ದರಿಂದ ಯುವಜನತೆ ಕನ್ನಡದಿಂದ ದೂರವಾಗುತ್ತಿದ್ದಾರೆ. ಕನ್ನಡ ಕೇವಲ ನಮ್ಮ ಮಾತೃಭಾಷೆಯಲ್ಲ. ಅದೊಂದು ಪರಂಪರೆ, ಸಂಸ್ಕೃತಿ ಹಾಗೂ ಬದುಕಿನ ರೀತಿಯಾಗಿದೆ. ಆದರೆ ಉದ್ಯೋಗದ ನೆಪದಲ್ಲಿ ಅದನ್ನು ಕಡೆಗಣನೆ ಮಾಡುತ್ತಿರುವುದು ಸರಿಯಲ್ಲ ಎಂದರು.

ಕನ್ನಡ ಭಾಷೆಯು 7ನೇ ತರಗತಿಯವರೆಗೆ ಖಾಸಗಿ ಹಾಗೂ ಅನುದಾನಿತ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಬೋಧನಾ ಮಾಧ್ಯಮವಾಗಿ ನಡೆಯುವಂತೆ ಸರ್ಕಾರ ತಕ್ಷಣ ಆದೇಶ ಹೊರಡಿಸಬೇಕು, ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆ.ಪಿ.ಎಸ್.) ಶಾಲೆಗಳಲ್ಲಿ ಕನ್ನಡ ಬೋಧನೆಯು ಕೇವಲ ಒಂದು ವಿಷಯದ ಬೋಧನೆಯಾಗದೆ ಅದೇ ಬೋಧನಾ ಮಾಧ್ಯಮವಾಗಬೇಕು. ಎಂಜಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣದ ಪುಸ್ತಕಗಳನ್ನು ಸರ್ಕಾರ ಕನ್ನಡ ಭಾಷೆಗೆ ತರ್ಜುಮೆಗೊಳಿಸಬೇಕು, ಅಲ್ಲದೆ ಕನ್ನಡ ಭಾಷೆಯಲ್ಲಿ ಓದಿದವರಿಗೆ ಉದ್ಯೋಗಗಳಲ್ಲಿ ಪ್ರಥಮ ಪ್ರಾಶಸ್ತ್ರ ನೀಡಬೇಕು.

ಬಹುದಿನದ ಬೇಡಿಕೆಯಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು (ಏಮ್ಸ್) ರಾಯಚೂರಿಗೆ ಮಂಜೂರು ಮಾಡಬೇಕು, ತುಂಗಭದ್ರಾ ಅಣೆಕಟ್ಟೆಯಲ್ಲಿ 30 ಟಿಎಂಸಿಯಷ್ಟು ಹೂಳು ತುಂಬಿದ್ದು, ನವಲಿ ಬಳಿ ಹೊಸ ಜಲಾಶಯವನ್ನು ನಿರ್ಮಿಸಬೇಕು, ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ಅನ್ಯಾಯ ಆಗದಂತೆ ಕ್ರಮ ವಹಿಸಬೇಕು, ಶೇ.27ರಷ್ಟು ಯುವಜನರನ್ನು ಹೊಂದಿರುವ ಜಿಲ್ಲೆಯಲ್ಲಿ ಅವರಿಗೆ ಉದ್ಯೋಗಾವಕಾಶಗಳಿಲ್ಲ. ರಾಜಕೀಯ ಪ್ರತಿನಿಧಿಗಳು ಇಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಸರ್ಕಾರವನ್ನು ಒತ್ತಾಯಿಸಬೇಕು. ಗಡಿನಾಡ ಕನ್ನಡಿಗರ, ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸಬೇಕು, ಅವರಿಗೆ ಯಾವುದೇ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಜಾತಿ-ಧರ್ಮದ ಹೆಸರಿನಲ್ಲಿ ಕೋಮುಗಲಭೆಗಳು ನಡೆಯದಂತೆ ತಡೆದು ಶಾಂತಿ-ಸೌಹಾರ್ದತೆಯನ್ನು ಕಾಪಾಡಬೇಕು, ಜನತೆ ನೆಮ್ಮದಿಯಿಂದ ಬದುಕಬೇಕು, ಕನ್ನಡ ಭಾಷೆ ಸದಾ ಅಚ್ಚಳಿಯದೇ ಉಳಿಯಬೇಕು ಎಂದು ರಾಮಣ್ಣ ಹವಳೆ ಆಶಯ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಸಮ್ಮೇಳನದ ನಿಕಠಪೂರ್ವ ಅಧ್ಯಕ್ಷ ವೀರ್ ಹನುಮಾನ್ ಅವರು ರಾಯಚೂರು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರಾಮಣ್ಣ ಹವಳೆ ಅವರಿಗೆ ಸಮ್ಮೇಳನದ ಧ್ವಜವನ್ನು ಹಸ್ತಾಂತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ವೇ ಕಾರ್ಯಕ್ಕೆ ತೆರಳಿದ್ದ ಅಧಿಕಾರಿಗಳಿಗೆ ಗ್ರಾಮಸ್ಥರ ಘೇರಾವ್
ನಂದನ ಪ್ಯಾಲೇಸ್‌ನಿಂದ ಸಿಬ್ಬಂದಿಗೆ ಕಾರ್, ಬೈಕ್ ಗಿಫ್ಟ್‌