ದಲಿತರ ಪ್ರತಿಭಟನೆ ಹಿನ್ನೆಲೆ ಅಧಿಕಾರಿಗಳು ಸರ್ವೇ ಕಾರ್ಯ ಸ್ಥಗಿತಗೊಳಿಸಿ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ಆಗಿದ್ದಾರೆ. ಬೆಕ್ಕಳಲೆ ಗ್ರಾಮದ ಹೊರವಲಯದ ದಲಿತರ ಸ್ಮಶಾನದ ಬಳಿ 4.19 ಗುಂಟೆ ಜಮೀನನ್ನು 1999, 2000 ಸಾಲಿನಲ್ಲಿ ಇನಾಮ್ ಜಮೀನನ್ನು ತೋಟಿ ವಂಶಸ್ಥರಿಗೆ ಸರ್ಕಾರ ಮಂಜೂರು ಮಾಡಿತ್ತು.
ಕನ್ನಡಪ್ರಭ ವಾರ್ತೆ ಮದ್ದೂರು
ರಾಜಕೀಯ ಪ್ರಭಾವಕ್ಕೆ ಒಳಗಾಗಿ ದಲಿತರ ಭೂಮಿ ಸರ್ವೇ ಕಾರ್ಯಕ್ಕೆ ತೆರಳಿದ್ದ ಅಧಿಕಾರಿಗಳಿಗೆ ಗ್ರಾಮಸ್ಥರು ಘೇರಾವ್ ಮಾಡಿ ಸರ್ವೇ ಕಾರ್ಯಕ್ಕೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಕೊಪ್ಪ ಹೋಬಳಿ ಬೆಕ್ಕಳಲೆ ಗ್ರಾಮದಲ್ಲಿ ಜರುಗಿದೆ.ದಲಿತರ ಪ್ರತಿಭಟನೆ ಹಿನ್ನೆಲೆ ಅಧಿಕಾರಿಗಳು ಸರ್ವೇ ಕಾರ್ಯ ಸ್ಥಗಿತಗೊಳಿಸಿ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ಆಗಿದ್ದಾರೆ. ಬೆಕ್ಕಳಲೆ ಗ್ರಾಮದ ಹೊರವಲಯದ ದಲಿತರ ಸ್ಮಶಾನದ ಬಳಿ 4.19 ಗುಂಟೆ ಜಮೀನನ್ನು 1999, 2000 ಸಾಲಿನಲ್ಲಿ ಇನಾಮ್ ಜಮೀನನ್ನು ತೋಟಿ ವಂಶಸ್ಥರಿಗೆ ಸರ್ಕಾರ ಮಂಜೂರು ಮಾಡಿತ್ತು.
ಈ ಜಮೀನಿನ ಪೈಕಿ ಓರ್ವ ಫಲಾನುಭವಿ ಗ್ರಾಮದ ದೊಡ್ಡ ಹುಚ್ಚಯ್ಯ ನಿಧನ ನಂತರ ಇವರ ಮಗ ಡಿ.ವಾಸುದೇವ ಹೆಸರಿಗೆ ಖಾತೆ ಮಾಡಿಕೊಡಲಾಗಿತ್ತು. ಈತನ ಸಹೋದರರು ಜಮೀನು ವಿವಾದದ ಬಗ್ಗೆ ಮದ್ದೂರು ಜೆ.ಎಂ.ಎಫ್. ಸಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ ಹಿನ್ನೆಲೆಯಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ.ಈ ಮಧ್ಯೆ 2026ರಲ್ಲಿ ವಾಸುದೇವ ರಿಯಲ್ ಎಸ್ಟೇಟ್ ಉದ್ಯಮಿ ರುದ್ರೇಗೌಡರಿಗೆ ಅಕ್ರಮವಾಗಿ ಮಾರಾಟ ಮಾಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಆಪ್ತರಾಗಿದ್ದ ರುದ್ರೇಗೌಡ ಅಧಿಕಾರಿಗಳ ಮೇಲೆ ಸಚಿವರ ಪ್ರಭಾವ ಬಳಸಿ ದಲಿತರ ವಿರೋಧದ ನಡುವೆ ಜಮೀನಿನ ಸರ್ವೇ ಕಾರ್ಯ ನಡೆಸಿ ತಮ್ಮ ವಶಕ್ಕೆ ಪಡೆಯಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಸಚಿವರ ಒತ್ತಡಕ್ಕೆ ಒಳಗಾಗಿದ್ದ ಎಡಿಎಲ್ಆರ್ ಲಿಖಿತಾ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಜಮೀನನ್ನು ಅಳತೆ ಮಾಡಿ ಖಾತೆ ಮಾಡಿ ಉದ್ಯಮಿ ರುದ್ರೇಶ್ ವಶಕ್ಕೆ ನೀಡಲು ಮುಂದಾಗಿದ್ದರು. ನಂತರ ಸ್ಥಳದಲ್ಲಿದ್ದ ಪೀಪಲ್ ಪಾರ್ಟಿ ಅಧ್ಯಕ್ಷ, ದಲಿತ ಮುಖಂಡ ಸಿ.ಎಂ.ಕೃಷ್ಣ ಸೇರಿ ಗ್ರಾಮದ ದಲಿತ ಮುಖಂಡರು ಅಧಿಕಾರಿ ಲಿಖಿತಾ ಸೇರಿದಂತೆ ಸರ್ವೇ ಸಿಬ್ಬಂದಿಗೆ ಘೇರಾವ್ ಮಾಡಿ ತರಾಟೆಗೆ ತೆಗೆದುಕೊಂಡು ಸರ್ವೇ ಕಾರ್ಯಕ್ಕೆ ಅಡ್ಡಿಪಡಿಸಿದರು.ಉಳುವವನೇ ಭೂಮಿ ಒಡೆಯ ಎಂದು ಇಂದಿರಾ ಗಾಂಧಿ ಅವರು ಜಾರಿಗೆ ತಂದು ಯಾರು ಸ್ವಾಧೀನದಲ್ಲಿ ಇದ್ದಾರೆಯೋ ಅವರಿಗೆ ಜಮೀನು ಮಾಡಿಕೊಟ್ಟಿದ್ದರು. ಆದರೆ, ಇಂದು ಹಣ ಇದ್ದವನೇ ಭೂಮಿ ಒಡೆಯರಾಗಿದ್ದು, ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಕೊಪ್ಪ ಹೋಬಳಿ ಬೆಕ್ಕಳಲೆ ಗ್ರಾಮದ ದಲಿತರ ಭೂಮಿ ಅಕ್ರಮವಾಗಿ ರಾಜಕೀಯ ಪ್ರಭಾವ ಬಳಸಿ ಅಧಿಕಾರಿಗಳ ಮೇಲೆ ಒತ್ತಡ ಏರಿ ತಮ್ಮ ಹಿಂಬಾಲಕರಾದ ಬೆಂಗಳೂರು ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ರುದ್ರೇಗೌಡ ಗೆ ದಲಿತರ ಭೂಮಿ ಮಾಡಿಕೊಟ್ಟಿದ್ದಾರೆ ಎಂದು ಸಚಿವರ ವಿರುದ್ಧ ದೂರಿದರು.
ಕರ್ನಾಟಕ ಸರ್ಕಾರದಿಂದ 1999ರಲ್ಲಿ ಇನಾಂ ಜಮೀನನ್ನು ತೋಟಿ ವಂಶಸ್ಥರಿಗೆ ಮಂಜೂರು ಮಾಡಿದ್ದಾರೆ. ಆದರೆ, ಇದು ಯಾವುದೇ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಜಮೀನು ಅಲ್ಲ. ಎಲ್ಲಾ ಕುಟುಂಬದವರಿಗೆ ಸಂಬಂಧಿಸಿದ ಜಮೀನಾಗಿದೆ. ಆದರೂ ವಾಸುದೇವ್ ಇದು ನನ್ನ ಅಪ್ಪನ ಜಮೀನು ಎಂದು ಸುಳ್ಳು ಹೇಳಿಕೊಂಡು ಜಮೀನು ಮಾರಿದ್ದಾರೆ. ಆದರೆ, ಸ್ವಾಧೀನದಲ್ಲಿ 30 ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಇಂದು ಏಕಾಏಕಿ ದಲಿತರ ಭೂಮಿ ಕಿತ್ತುಕೊಳ್ಳುವುದಕ್ಕೆ ಸಂಚು ರೂಪಿಸಿದ್ದಾರೆ ಎಂದು ಸರ್ವೇ ಅಧಿಕಾರಿಗಳಿಗೆ ಧಿಕ್ಕಾರ ಕೂಗಿ ತಡೆದು ಸರ್ವೇ ನಿಲ್ಲಿಸಿದರು.ಈ ವೇಳೆ ಗ್ರಾಮದ ಮುಖಂಡರಾದ ಲೋಕೇಶ್ ಮಂಡ್ಯ, ರುದ್ರೇಗೌಡ, ಉಮೇಶ್, ರೇವಣ್ಣ, ಗೋಪಾಲ್, ವೆಂಕಟೇಶ್, ಕೃಷ್ಣ, ಗ್ರಾಪಂ ಸದಸ್ಯರಾದ ಸಂತೋಷ್ ಜಯಲಕ್ಷ್ಮಿ, ಪುಟ್ಟಸ್ವಾಮಿ, ಹಾಗೂ ಗ್ರಾಮಸ್ಥರು ಹಾಜರಿದ್ದರು.