ಖ್ಯಾತ ಟೆನಿಸ್ ಆಟಗಾರ ಮಹೇಶ್ ಭೂಪತಿ ಅವರು ದುಬೈನ ರಿಯಲ್ ಎಸ್ಟೇಟ್ ಸಂಸ್ಥೆ ಪರ್ವ ಗ್ರೂಪ್ ಜೊತೆಗೆ ಅಧಿಕೃತವಾಗಿ ಪಾಲುದಾರ ಹಾಗೂ ಹೂಡಿಕೆದಾರರಾಗಿ ನವ ಉದ್ಯಮ ಪರ್ವ ಆರಂಭಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು:
ಖ್ಯಾತ ಟೆನಿಸ್ ಆಟಗಾರ ಮಹೇಶ್ ಭೂಪತಿ ಅವರು ದುಬೈನ ರಿಯಲ್ ಎಸ್ಟೇಟ್ ಸಂಸ್ಥೆ ಪರ್ವ ಗ್ರೂಪ್ ಜೊತೆಗೆ ಅಧಿಕೃತವಾಗಿ ಪಾಲುದಾರ ಹಾಗೂ ಹೂಡಿಕೆದಾರರಾಗಿ ನವ ಉದ್ಯಮ ಪರ್ವ ಆರಂಭಿಸಿದ್ದಾರೆ.ನಗರದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ಸಂಜೆ ನಡೆದ ಭವ್ಯ ಸಮಾರಂಭದಲ್ಲಿ ಪರ್ವ ಗ್ರೂಪ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಎಚ್.ಪಿ.ನೀಲೇಶ್ ಹಾಗೂ ಮಹೇಶ್ ಭೂಪತಿ ಅವರು ಪರಸ್ಪರ ಹಸ್ತಲಾಘವ ಮಾಡುವ ಮೂಲಕ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದರು.
ಸಮಾರಂಭದಲ್ಲಿ ಮಾತನಾಡಿದ ಮಹೇಶ್ ಭೂಪತಿ, ಇದೇ ಆಗಸ್ಟ್ ತಿಂಗಳಲ್ಲಿ ಮುಂಬೈನಲ್ಲಿ ಜರುಗಿದ ಕ್ರೀಡಾಕೂಟದ ಪ್ರಾಯೋಜಕತ್ವ ವಹಿಸಿಕೊಂಡಿದ್ದ ಪರ್ವ ಗ್ರೂಪ್‌ನ ನೀಲೇಶ್ ಅವರ ಪರಿಚಯವಾಯಿತು. ತಾವು ದುಬೈನಲ್ಲಿ ನೆಲೆಸಿದ್ದು, ನೀಲೇಶ್ ಕಚೇರಿ ಕೂಡ ದುಬೈನಲ್ಲಿದೆ. ಹೀಗಾಗಿ, ಹಲವು ಬಾರಿ ನಾವು ಭೇಟಿಯಾದೆವು. ಈ ವೇಳೆ ತಮ್ಮ ಗ್ರೂಪ್‌ನ ಗುರಿಗಳ ಕುರಿತು ಮಾಹಿತಿ ಹಂಚಿಕೊಂಡರು. ಅವರ ಯೋಜನೆಗಳು ವಿಭಿನ್ನವಾಗಿದೆ ಎನಿಸಿತು. ಹೀಗಾಗಿ, ಪರ್ವ ಗ್ರೂಪ್‌ನ ಪಯಣದಲ್ಲಿ ಪಾಲುದಾರನಾಗಲು ನಿರ್ಧರಿಸಿದೆ ಎಂದರು.ಮುಂಬರುವ ವರ್ಷಗಳಲ್ಲಿ ಒಟ್ಟಾಗಿ ವಿಶೇಷ ಎನಿಸುವ ಕೆಲಸಗಳನ್ನು ಮಾಡುವ ಗುರಿಗಳನ್ನು ಹೊಂದಿದ್ದೇವೆ. ಡಿಸೆಂಬರ್‌ನಲ್ಲಿ ನಗರದಲ್ಲಿ ವರ್ಲ್ಡ್ ಟೆನಿಸ್ ಲೀಗ್ ನಡೆಯಲಿದೆ. ಇದರಲ್ಲಿಯೂ ನೀಲೇಶ್ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ಒಟ್ಟಾಗಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಮಹೇಶ್ ಭೂಪತಿ ಹೇಳಿದರು.
ಮಹೇಶ್ ಭೂಪತಿ ಜತೆಯಾಗುತ್ತಿರುವುದು ಸಂತಸ:ಎಚ್.ಪಿ.ನೀಲೇಶ್ ಮಾತನಾಡಿ, ನಮ್ಮ ಭವಿಷ್ಯದ ಯೋಜನೆಗಳನ್ನು ಸಾಕಾರಗೊಳಿಸಲು ಮಹೇಶ್ ಭೂಪತಿ ಜೊತೆಯಾಗುತ್ತಿರುವುದು ಅತ್ಯಂತ ಸಂತೋಷ ಉಂಟು ಮಾಡಿದೆ. ನಮ್ಮ ಸಂಸ್ಥೆಯ ಗುರಿ, ಉದ್ದೇಶ, ಯೋಜನೆಗಳ ಬಗ್ಗೆ ತಿಳಿದುಕೊಂಡು ಪಾಲುದಾರರಾಗಲು ನಿರ್ಧರಿಸಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ, ಸ್ವತಃ ಉದ್ಯಮಿಯಾಗಿ ಕೋಚಿಂಗ್ ಕ್ಲಬ್ ಹೊಂದಿರುವ ಅವರು ತಮ್ಮ ಅನುಭವ ನಮ್ಮೊಂದಿಗೆ ಹಂಚಿಕೊಂಡು ಬೆಳೆಯಲು ಮುಂದಾಗಿದ್ದಾರೆ ಎಂದರು.
ಕೆಲ ವರ್ಷಗಳ ಹಿಂದೆ ರಿಯಲ್ ಎಸ್ಟೇಟ್ ಸಂಸ್ಥೆಯೊಂದರಲ್ಲಿ 6,000 ರು. ವೇತನದೊಂದಿಗೆ ಆರಂಭವಾಗಿದ್ದ ನನ್ನ ಪಯಣದಲ್ಲಿ ಅನೇಕರು ಮಾರ್ಗದರ್ಶನ, ಸಹಾಯ ಮಾಡಿದ್ದಾರೆ. ರಿಯಲ್ ಎಸ್ಟೇಟ್ ಹೂಡಿಕೆ, ಹಣಕಾಸಿನ ಹೂಡಿಕೆ ಅರಿವು, ಭದ್ರತಾ ಸೇವೆಗಳು, ಡಿಜಿಟಲ್ ತಂತ್ರಜ್ಞಾನ, ಇವೆಂಟ್ ಮ್ಯಾನೇಜ್ಮೆಂಟ್ ಸೇರಿ ಹಲವು ಕ್ಷೇತ್ರಗಳಲ್ಲಿ ನಮ್ಮ ಸಂಸ್ಥೆ ಬೆಳೆಯುತ್ತಿದ್ದು, ಮಹೇಶ್ ಭೂಪತಿ ಅವರ ಪಾಲುದಾರಿಕೆ ಮಹತ್ವದ ಪಾತ್ರ ವಹಿಸುತ್ತದೆ ಎಂದರು.ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ನೀಲೇಶ್ ಅವರು ದೊಡ್ಡ ಕನಸುಗಳನ್ನು ಕಂಡು ಅವುಗಳನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತಾರೆ. ಸಣ್ಣ ಯೋಜನೆಗಳನ್ನು ಕೂಡ ದೊಡ್ಡದಾಗಿ ಬೆಳೆಸುವುದು ಹೇಗೆ ಎಂದು ಯೋಚಿಸುತ್ತಾರೆ. ಇವರ ಇಂತಹ ಆಲೋಚನೆಗಳ ಕಾರಣದಿಂದಾಗಿ ಟೆನಿಸ್ ತಾರೆ ಮಹೇಶ್ ಭೂಪತಿ ಕೈಜೋಡಿಸಿದ್ದಾರೆ. ಭೂಪತಿ ಜೊತೆಗಿನ ಪಾಲುದಾರಿಕೆಯೊಂದಿಗೆ ಪರ್ವ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಸಂಸದ ಜಗದೀಶ್ ಶೆಟ್ಟರ್ ಮಾತನಾಡಿ, ಯಾವುದೇ ವ್ಯಕ್ತಿ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ನೀಲೇಶ್ ಸಾಕ್ಷಿ. 6000 ರು. ವೇತನದ ಕೆಲಸ ಆರಂಭಿಸಿ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆಂದರೆ ಆಲೋಚನೆ, ಗುರಿ, ಛಲ ಕಾರಣ ಎಂದರು.ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ತುಮಕೂರಿನಿಂದ ದುಬೈಗೆ ತೆರಳಿ ಈಗ ದುಬೈನಿಂದ ಬೆಂಗಳೂರಿಗೆ ಬಂದಿರುವ ನೀಲೇಶ್ ಕನಸುಗಳು ನನಸಾಗಲಿ. ಇವರ ಉದ್ಯಮ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕನ್ನಡಪ್ರಭ ಸಂಪಾದಕ ಗಿರೀಶ್ ರಾವ್ ಹತ್ವಾರ್, ಮಾಜಿ ಶಾಸಕ ಸುಕುಮಾರ ಶೆಟ್ಟಿ, ನ್ಯೂ ಬಾಲ್ಡ್‌ವಿನ್ ಗ್ರೂಪ್ ಆಫ್ ಇನ್ಸ್‌ಟಿಟ್ಯೂಷನ್‌ನ ಟಿ. ವೇಣುಗೋಪಾಲ, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಮತ್ತಿತರರು ಉಪಸ್ಥಿತರಿದ್ದರು.