ಶಿರಸಿ: ೮೭ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ರಾಜ್ಯಾದ್ಯಂತ ಸಂಚರಿಸಲಿರುವ ಕನ್ನಡ ಜ್ಯೋತಿ ರಥಯಾತ್ರೆಯನ್ನು ಶಿರಸಿಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.ನಗರ ಪ್ರವೇಶಿಸುತ್ತಿದ್ದಂತೆ ಯಲ್ಲಾಪುರ ನಾಕಾದಲ್ಲಿ ಕನ್ನಡ ಜ್ಯೋತಿ ರಥವನ್ನು ಜಿಲ್ಲಾಡಳಿತ, ತಾಲೂಕಾಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ರಥವನ್ನು ಬರಮಾಡಿಕೊಳ್ಳಲಾಯಿತು. ನಂತರ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ, ಶಿವಾಜಿ ಚೌಕಕ್ಕೆ ಆಗಮಿಸಿದಾಗ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಭುವನೇಶ್ವರಿ ದೇವಿಗೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸಿದರು.ನಂತರ ಮಾತನಾಡಿದ ಅವರು, ರಾಜ್ಯದ ಪ್ರಥಮ ಭುವನೇಶ್ವರಿ ದೇವಾಲಯ ನಮ್ಮ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿದೆ. ಕನ್ನಡ ಜ್ಯೋತಿ ರಥಕ್ಕೆ ಸಿದ್ದಾಪುರದ ಭುವನಗಿರಿ ದೇವಾಲಯದ ಭುವನೇಶ್ವರಿ ದೇವಿಯ ಸನ್ನಿಧಾನದಲ್ಲಿ ಚಾಲನೆ ನೀಡಲಾಗಿದೆ. ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ, ಜೋಯಿಡಾ, ದಾಂಡೇಲಿ, ಹಳಿಯಾಳ, ಯಲ್ಲಾಪುರ, ಶಿರಸಿ ಮಾರ್ಗವಾಗಿ ಹಾನಗಲ್ಲ ಮೂಲಕ ಹಾವೇರಿ ಜಿಲ್ಲೆ ತಲುಪಲಿದೆ. ಪ್ರತಿಯೊಂದು ತಾಲೂಕುಗಳಲ್ಲಿ ರಥವನ್ನು ಸ್ವಾಗತಿಸಿ, ಉತ್ಸವದ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಡಿ. ೨೧ರಿಂದ ೨೩ ರವರೆಗೆ ಮೂರು ದಿನಗಳು ನಡೆಯಲಿರುವ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಮಾತನಾಡಿ, ಕನ್ನಡವನ್ನು ಶ್ರೀಮಂತಗೊಳಿಸಲು ಶ್ರಮಿಸಬೇಕು. ಪರ ಭಾಷಿಕರನ್ನು ಗೌರವಿಸಿ, ಕನ್ನಡ ಕಲಿಯಲು ಅವರಿಗೆ ಪ್ರೇರಣೆ ನೀಡಿ, ಕನ್ನಡ ನೆಲ, ಜಲ, ಸಂಸ್ಕೃತಿಯ ಮೇಲೆ ಅಭಿಮಾನ ಮೂಡಿಸಬೇಕು ಎಂದರು.ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಮಂಡ್ಯದಲ್ಲಿ ಡಿ. ೨೦ ಮತ್ತು ೨೧ ಹಾಗೂ ೨೨ರಂದು ೮೭ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಕನ್ನಡದ ಪ್ರಥಮ ದೇವಾಲಯ ನಮ್ಮ ಜಿಲ್ಲೆಯ ಭುವನಗಿರಿಯಲ್ಲಿದೆ. ಈ ಕಾರಣಕ್ಕಾಗಿ ಕನ್ನಡ ಜ್ಯೋತಿ ರಥಕ್ಕೆ ಭುವನೇಶ್ವರಿ ತಾಯಿ ಸನ್ನಿಧಿಯಲ್ಲಿ ಚಾಲನೆ ನೀಡಲಾಗಿದೆ ಎಂದರು.ಈ ವೇಳೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ, ನಗರಸಭೆ ಉಪಾಧ್ಯಕ್ಷ ರಮಾಕಾಂತ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಬೋರಕರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಸತೀಶ ಹೆಗಡೆ, ನಗರಸಭೆ ಪೌರಾಯುಕ್ತ ಕಾಂತರಾಜು, ಡಿಡಿಪಿಐ ಪಿ. ಬಸವರಾಜು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೇಶವಮೂರ್ತಿ ಇಮ್ಮಡಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ಸಿಪಿಐ ಶಶಿಕಾಂತ ವರ್ಮಾ, ಪಿಎಸ್‌ಐಗಳಾದ ನಾಗಪ್ಪ ಬಿ., ರತ್ನಾ ಕುರಿ, ಮಹಾಂತಪ್ಪ ಕುಂಬಾರ, ರಾಜಕುಮಾರ ಉಕ್ಕಲಿ, ಪ್ರಮುಖರಾದ ಜ್ಯೋತಿ ಗೌಡ, ಶ್ರೀನಿವಾಸ ನಾಯ್ಕ, ರಘು ಕಾನಡೆ ಸೇರಿದಂತೆ ನೂರಾರು ಕನ್ನಡಾಭಿಮಾನಿಗಳು ಇದ್ದರು. ಕಸಾಪ ತಾಲೂಕಾಧ್ಯಕ್ಷ ಜಿ. ಸುಬ್ರಾಯ ಭಟ್ಟ ಬಕ್ಕಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಸೀಲ್ದಾರ್ ಶ್ರೀಧರ ಮುಂದಲಮನಿ ವಂದಿಸಿದರು. ತಾಯಿ ಭುವನೇಶ್ವರೀ ದೇವಿಯ ರಥ ಮೆರವಣಿಗೆ
ಯಲ್ಲಾಪುರ: ತಾಯಿ ಭುವನೇಶ್ವರಿ ದೇವಿ ಜಾತಿ, ಮತ, ಪಂಥ, ಪಕ್ಷಗಳೆಲ್ಲವನ್ನೂ ಮೀರಿದ ನಮ್ಮ ಕನ್ನಡ ನಾಡಿನ ತಾಯಿ. ಈ ತಾಯಿಯನ್ನು ನಾವೆಲ್ಲರೂ ಗೌರವಿಸಲೇಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ಸೆ. ೨೫ರಂದು ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಂತ ಈ ರಥ ಸಂಚರಿಸಿ, ಹಳಿಯಾಳದ ಮೂಲಕ ಯಲ್ಲಾಪುರಕ್ಕೆ ಆಗಮಿಸಿದ ಸಂದರ್ಭದಲ್ಲಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಭುವನೇಶ್ವರೀ ಮಾತೆಗೆ ಪೂಜೆ ಸಲ್ಲಿಸಿ ಮಾತನಾಡಿದರು.
ಕಳೆದ ೩ ವರ್ಷಗಳ ಕಾಲ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಹಾವೇರಿಯಲ್ಲಿ ಅದ್ಧೂರಿಯಾಗಿ ಕನ್ನಡ ಅಕ್ಷರ ಜಾತ್ರೆಯ ಅವಕಾಶ ಸಿಕ್ಕಿದ್ದು ಅವಿಸ್ಮರಣೀಯ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಮಾತನಾಡಿ, ನಮ್ಮ ಸಿದ್ದಾಪುರದಿಂದ ಕರಾವಳಿ ಭಾಗದ ಮೂಲಕ ರಥ ಯಲ್ಲಾಪುರಕ್ಕೆ ಬಂದಿದೆ. ಆದರೆ, ಕಾರವಾರದಲ್ಲಿ ಈ ರಥದ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಿರಲಿಲ್ಲ. ಇಂದು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕನ್ನಡ ಮಾತೆಗೆ ನಮಿಸಿದ್ದೇನೆ. ಈ ರಥದ ರಕ್ಷಣೆ ಹೊತ್ತ ನಮ್ಮ ಇಲಾಖೆ ಸೇವಾಭಾಗ್ಯವೆಂದು ಕಾರ್ಯ ನಿರ್ವಹಿಸುತ್ತಿದೆ ಎಂದರು.ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ, ತಹಸೀಲ್ದಾರ್ ಯಲ್ಲಪ್ಪ ಜಿ., ತಾಪಂ ಕಾರ್ಯನಿರ್ವಹಣಾಧಿಕಾರಿ ರಾಘವ, ಗ್ರೇಡ್ ೨ ತಹಸೀಲ್ದಾರ್ ಸಿ.ಜಿ. ನಾಯ್ಕ, ಕ.ಸಾ.ಪ. ತಾಲೂಕು ಘಟಕಾಧ್ಯಕ್ಷ ಸುಬ್ರಹ್ಮಣ್ಯ ಭಟ್ಟ, ಪ್ರಮುಖರಾದ ಉಲ್ಲಾಸ ಶಾನಭಾಗ, ಡಿ.ಜಿ. ಹೆಗಡೆ. ಎಂ.ಆರ್. ಹೆಗಡೆ, ಡಾ. ಆರ್.ಡಿ. ಜನಾರ್ದನ, ಡಿವೈಎಸ್ಪಿ ಗಣೇಶ ಸೇರಿದಂತೆ ಪಿಯು ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು, ಸಾರ್ವಜನಿಕರು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದರು.